Arecanut : ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿ!
ಸಾಮಾನ್ಯವಾಗಿ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಚಳಿಯ ವಾತಾವರಣ ಇರುತ್ತದೆ. ಆದರೆ, ಈ ಬಾರಿ ರಾಜ್ಯದ ಹಲವು ಜಿಲ್ಲೆಯಲ್ಲಿ ಧಾರಾಕಾರ ಮಳೆ ಆಗಿದೆ. ಅಡಿಕೆ ಬೆಳೆಯುವ ಪ್ರದೇಶದಲ್ಲಿ ಮಳೆಯಿಂದ ರೈತರಿಗೆ ಅಪಾರ ನಷ್ಟವುಂಟಾಗಿದೆ. ಅಕಾಲಿಕ ಮಳೆಯು ಕೃಷಿಕರನ್ನು ಕಂಗೆಡಿಸುತ್ತಿದೆ. ಮಳೆಯಿಂದಾಗಿ ಪ್ರತಿಯೊಬ್ಬ ರೈತನು ಸಮಸ್ಯೆಯನ್ನು ಎದುರಿಸಲು ಸಾಧ್ಯ ಆಗದೆ ಸರ್ಕಾರದ ಪರಿಹಾರಕ್ಕಾಗಿ ಮೊರೆ ಹೋಗಿದ್ದಾರೆ.
ಇನ್ನು ಪಾನ್ ಮಸಾಲ ಹಾಗೂ ತಂಬಾಕು ಸೇವನೆಯಿಂದಾಗಿ ಅದೆಷ್ಟೋ ಜನ ಈಗಾಗಲೇ ಕ್ಯಾನ್ಸರ್ ಗೆ ತುತ್ತಾಗಿದ್ದಾರೆ. ಪಾನ್ ಮಸಾಲದಲ್ಲಿ ಅಡಕೆಯನ್ನು ಬಳಸುವುದರಿಂದ ಕ್ಯಾನ್ಸರ್ ಗೆ ಅಡಿಕೆಯೇ ಕಾರಣ ಎಂಬ ಸುದ್ದಿ ಇತ್ತೀಚಿಗೆ ಎಲ್ಲರನ್ನು ಬೆಚ್ಚಿಬಿಳಿಸಿತ್ತು. ಇದು ಅಡಿಕೆ ಬೆಳೆಗಾರರ ಸಂಕಷ್ಟಕ್ಕೂ ಕಾರಣವಾಗಿತ್ತು.
ಈಗಾಗಲೇ ಅಡಿಕೆ ಬೆಳೆಗಾರರು ಎಲೆಚುಕ್ಕೆ ರೋಗದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಎಲೆ ಚುಕ್ಕಿ ರೋಗವು ಬೆಂಬಿಡದೆ ಕಾಡುತ್ತಿದೆ. ಇದರ ಮಧ್ಯೆ ಅಡಿಕೆಯೇ ಕ್ಯಾನ್ಸರ್ ಗೆ ಕಾರಣ ಎಂಬ ಸುದ್ದಿ ಹರಡಿ ತಮ್ಮ ಭವಿಷ್ಯದ ಬಗ್ಗೆ ಚಿಂತಿಸಿ ಅದೆಷ್ಟೋ ರೈತರು ಚಿಂತೆ ಒಳಗಾಗಿದ್ದರು. ಆದರೆ ಅಡಕೆ ಬೆಳೆಗಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಡಕೆಯಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ಯಾವುದೇ ಅಂಶಗಳಿಲ್ಲ. ಬದಲಿಗೆ ಕ್ಯಾನ್ಸರ್‌ಗೇ ಅಡಕೆ ಮದ್ದು ಎಂಬ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆಯೊಂದು ಸಾಬೀತು ಮಾಡಿದೆ. ಹೌದು ವಿಧಾನ ಪರಿಷತ್‌ನಲ್ಲಿ ಗಮನಸೆಳೆಯುವ ಸೂಚನೆಯಲ್ಲಿ ಮಂಗಳವಾರ ನಡೆದ ಚರ್ಚೆಗೆ ಗೃಹ ಸಚಿವ ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು ಈ ಕುರಿತಂತೆ ಮಾತನಾಡಿದರು.
ಪ್ರತಿಷ್ಠಿತ ಎಂ.ಎಸ್.ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರಯೋಗಗಳು, ಅಧ್ಯಯನ ನಡೆಸಿದ ವರದಿಯನ್ನು ಅಡಿಕೆ ಕಾರ್ಯಪಡೆಗೆ ಮಂಗಳವಾರ ಸಲ್ಲಿಸಿದ್ದು ಸದ್ಯ ಎಂ.ಎಸ್.ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಸಂಸ್ಥೆಯು ನಡೆಸಿದ ಪ್ರಾಥಮಿಕ ಸಂಶೋಧನೆಗಳ ಪ್ರಕಾರ ಅಡಿಕೆ ಉತ್ಪನ್ನದಲ್ಲಿ ಯಾವುದೇ ಕ್ಯಾನ್ಸರ್‌ಕಾರಕ ಅಂಶಗಳಿಲ್ಲ, ಅದನ್ನು ಗುಣಪಡಿಸಲು ಬೇಕಾದ ಔಷಧೀಯ ಅಂಶಗಳಿವೆ. ಅಷ್ಟೇ ಅಲ್ಲ, ತೀವ್ರತರಹದ ಗಾಯ ಗುಣಪಡಿಸುವ, ಮಧುಮೇಹ ಸಮಸ್ಯೆ ನಿಯಂತ್ರಣ, ಹೃದಯ ಸಂಬಂಧಿತ ಕಾಯಿಲೆಗಳು, ಉದರದ ಅಲ್ಸರ್ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಆಶಾದಾಯಕ ಫಲಿತಾಂಶಗಳು ಬಂದಿವೆ ಮತ್ತು ಅಡಿಕೆ ಉತ್ಪನ್ನದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎನ್ನುವುದನ್ನು ಈ ವರದಿಯು ದೃಢಪಡಿಸಿದೆ.
ಅದಲ್ಲದೆ ಅಡಕೆ ಸೇವನೆಯಿಂದ ಆಗುವ ಆರೋಗ್ಯದ ಲಾಭಗಳ ಕುರಿತು ಕಂಡು ಬಂದಿರುವ ವೈಜ್ಞಾನಿಕ ಸಂಶೋಧನಾ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕೆಂದು ಸದನವು ಒಕ್ಕೊರಲಿನಿಂದ ಒತ್ತಾಯಿಸಿದಾಗ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, ರಾಜ್ಯದ ವಕೀಲರ ಮೂಲಕ ಸುಪ್ರೀಂ ಕೋರ್ಟ್‌ಗೆ ಈ ವರದಿಯನ್ನು ಸಲ್ಲಿಸಲಾಗುವುದು ಎಂದರು.
ಇನ್ನು ಎಲೆ ಚುಕ್ಕೆ ರೋಗಕ್ಕೆ ಪರಿಹಾರವಾಗಿ ಸಂಶೋಧನಾ ವಿಜ್ಞಾನಿಗಳ ತಂಡದ ಶಿಫಾರಸಿನಂತೆ ರೈತರಿಗೆ ಸಸ್ಯ ಸಂರಕ್ಷಣಾ ಔಷಧವನ್ನು ಕೊಳ್ಳಲು ತಲಾ ಹೆಕ್ಟೇರ್‌ಗೆ ನಾಲ್ಕು ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ ಎಂದರು.
ಅಡಿಕೆ ಬೆಳೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಮುಂದಿರುವ ಯೋಜನೆಗಳ ಬಗ್ಗೆ ತಿಳಿಸಿದ್ದು ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಅವುಗಳು ಇಂತಿವೆ :
• ಸಮಗ್ರ ಪೋಷಕಾಂಶಗಳ ನಿರ್ವಹಣೆ,
• ನುರಿತ ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಅಡಿಕೆ ಕಟಾವಿಗೆ ಬಳಸುವ ಫೈಬರ್ ದೋಟಿ ಖರೀದಿಗೆ ಸಬ್ಸಿಡಿ ವಿತರಣೆ,
• ಕರೊನಾ ಲಸಿಕೆ ಮಾದರಿಯಲ್ಲಿ ಎಲೆಚುಕ್ಕೆ ಹಾಗೂ ಹಳದಿರೋಗದ ಶಾಶ್ವತ ಪರಿಹಾರ ಔಷಧ ಸಂಶೋಧನೆ ಇತ್ಯಾದಿಗಳಿಗೆ 197 ಕೋಟಿ ರೂ. ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬ ಮಾಹಿತಿ ನೀಡಿದರು.
• ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಕೆ ಬೆಳೆ ಸೇರಿಸಿದ್ದು, ರೋಗದಿಂದ ನಷ್ಟವಾದ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 28 ಸಾವಿರ ರೂ.ನಂತೆ ಗರಿಷ್ಠ ಎರಡು ಹೆಕ್ಟೇರ್‌ಗೆ ಪರಿಹಾರ.
• ಕಾಫಿ, ತಾಳೆಎಣ್ಣೆ ಇತ್ಯಾದಿ ಪರ್ಯಾಯ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗಿದೆ.
• ಅಡಕೆ ಉಪ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಲು ಖಾಸಗಿ ಅಭಿವೃದ್ಧಿಪಡಿಸಿರುವ ಸಾಬೂನು, ಬಣ್ಣ, ಸಿರಪ್, ವೈನ್, ಅಡಕೆ ಹಾಳೆ, ದೊನ್ನೆ, ಸೊಳ್ಳೆ ಬತ್ತಿ, ವೈನ್ ಇತ್ಯಾದಿಗಳಿಗೆ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರವು ಈ ಹಿಂದೆಯೇ ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂದು ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿತ್ತು. ಇದರಿಂದಾಗಿ ಅಡಿಕೆ ಬೆಳೆಗಾರರಲ್ಲಿ ಆತಂಕ ಮನೆ ಮಾಡಿತ್ತು. ಇದೀಗ ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಉತ್ತಮ ಲಾಭಗಳಿವೆ ಎಂದು ತಜ್ಞರ ಸಂಶೋಧನಾ ವರದಿಯಿಂದ ಸಾಬೀತಾಗಿರುವುದು ಅಡಿಕೆ ಬೆಳೆಗಾರರಿಗೆ ಮತ್ತೇ ತಮ್ಮ ಕೃಷಿಯಲ್ಲಿ ವಿಶ್ವಾಸ ಬಂದಿದೆ.