Air India Flight Agreement: ಏರ್ ಇಂಡಿಯಾ ವಿಮಾನ ಒಪ್ಪಂದದ ಬಗ್ಗೆ ಸಿಕ್ತು ಹುಬ್ಬೇರಿಸುವಂತ ಅಪ್ಡೇಟ್! ಒಪ್ಪಂದ ಅಗಿದ್ದು 470 ಅಲ್ಲ 840 ವಿಮಾನಗಳು!!
ಟಾಟಾ ಸನ್ಸ್ ಮಾಲಕತ್ವದ ಏರ್ ಇಂಡಿಯಾ ಕಂಪೆನಿ ಬುಧವಾರ ಬೋಯಿಂಗ್ ಮತ್ತು ಏರ್ಬಸ್ ಕಂಪೆನಿಗಳ ಜತೆಗೆ 470 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಟಾಟಾ ಸನ್ಸ್ ಒಡೆತನದ ಏರ್ ಇಂಡಿಯಾವು ಒಪ್ಪಂದ ಮಾಡಿಕೊಂಡಿರುವುದು 470 ವಿಮಾನಗಳಿಗಲ್ಲ , ಬರೋಬ್ಬರಿ 840 ವಿಮಾನಗಳ ಖರೀದಿಗೆ ಏರ್ಬಸ್ ಮತ್ತು ಬೋಯಿಂಗ್ಗೆ ಆರ್ಡರ್ ನೀಡಿದೆಯಂತೆ!
ಹೌದು, ಸದ್ಯ 470 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರಲ್ಲಿ 370 ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳುವ ಆಯ್ಕೆ ಕೂಡ ಸೇರಿದೆ. ಹೀಗಾಗಿ ಮುಂದಿನ ಒಂದು ದಶಕದಲ್ಲಿ ಎರಡೂ ಕಂಪೆನಿಗಳಿಂದ ಹೆಚ್ಚುವರಿಯಾಗಿ 370 ವಿಮಾನಗಳನ್ನು ಪಡೆದುಕೊಳ್ಳಲು ಅವಕಾಶ ಇದೆಯಂತೆ. ಈ ಮೂಲಕ 840 ವಿಮಾನಗಳ ಖರೀದಿ ಒಪ್ಪಂದ ಮಾಡಿದಂತೆ ಆಗಿದೆ. ಏರ್ಬಸ್ನಿಂದ 250 ಮತ್ತು ಬೋಯಿಂಗ್ನಿಂದ 220 ವಿಮಾನಗಳು ಸೇರಿ 470 ವಿಮಾನಗಳಿಗೆ ಆರ್ಡರ್ ನೀಡಿರುವುದಾಗಿ ಏರ್ಇಂಡಿಯಾ ಹೇಳಿದ ಒಂದು ದಿನದ ನಂತರ ಏರ್ ಇಂಡಿಯಾದ ಮುಖ್ಯ ವಾಣಿಜ್ಯ ಮತ್ತು ಪರಿವರ್ತನಾ ಅಧಿಕಾರಿ ನಿಪುನ್ ಅಗರ್ವಾಲ್ ಅವರು ಪ್ರಕಟಣೆಯಲ್ಲಿ ಈ ವಿಚಾರಗಳನ್ನು ತಿಳಿಸಿದ್ದಾರೆ
ಈ ಬಗ್ಗೆ ಮಾತನಾಡಿದ ಅವರು ‘ವಿಮಾನಯಾನ ಸಂಸ್ಥೆಯು ವಿಮಾನಗಳಿಗೆ ನೀಡಿರುವ ಆರ್ಡರ್ನಿಂದ ವಿಶ್ವದಾದ್ಯಂತ ಉತ್ಸುಕತೆ ಹುಟ್ಟಿಕೊಂಡಿದ್ದು, ಇದರಿಂದ ಸಂಸ್ಥೆ ಸಂತಸಗೊಂಡಿದೆ. ಈ ಆರ್ಡರ್, 470 ವಿಮಾನಗಳ ಖರೀದಿಯ ದೃಢವಾದ ಆರ್ಡರ್, ಮತ್ತು ಮುಂದಿನ ದಶಕದಲ್ಲಿ ಏರ್ಬಸ್ ಮತ್ತು ಬೋಯಿಂಗ್ನಿಂದ 370 ವಿಮಾನಗಳನ್ನು ಖರೀದಿಸುವ ಆಯ್ಕೆ ಮತ್ತು ಖರೀದಿಸುವ ಹಕ್ಕುಗಳನ್ನು ಒಳಗೊಂಡಿದೆ. ಆಧುನಿಕ ವಾಯುಯಾನ ಇತಿಹಾಸದಲ್ಲಿ ಇದು ವಿಮಾನಯಾನ ಸಂಸ್ಥೆಯೊಂದು ನೀಡಿರುವ ಅತಿದೊಡ್ಡ ವಿಮಾನ ಆರ್ಡರ್ಗಳಲ್ಲಿ ಒಂದಾಗಿದೆ. 840 ವಿಮಾನಗಳಿಗೆ ನೀಡಿರುವ ಈ ಆರ್ಡರ್, ಸುಮಾರು ಎರಡು ವರ್ಷಗಳ ಹಿಂದೆ ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆಯೊಂದಿಗೆ ಪ್ರಾರಂಭವಾದ ಆಕರ್ಷಕ ಪ್ರಯಾಣದ ಪರಾಕಾಷ್ಠೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಅಲ್ಲದೆ ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಏರ್ ಇಂಡಿಯಾ-ಏರ್ಬಸ್ ವಹಿವಾಟನ್ನು “ಹೆಗ್ಗುರುತಿನ ಒಪ್ಪಂದ” ಎಂದು ಬಣ್ಣಿಸಿದ್ದರು. ಅಷ್ಟೇ ಅಲ್ಲದೆ ಇದು ಭಾರತ ಮತ್ತು ಫ್ರಾನ್ಸ್ ನಡುವಿನ ಆಳವಾದ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ. ಇಂಡಿಯಾ ಮತ್ತು ಬೋಯಿಂಗ್ ನಡುವಿನ ಮಹತ್ವದ ಒಪ್ಪಂದವನ್ನು ಪರಸ್ಪರ ಲಾಭದಾಯಕ ಸಹಕಾರದ ಉಜ್ವಲ ಉದಾಹರಣೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಅಧ್ಯಕ್ಷ ಜೋ ಬೈಡನ್ ಜೊತೆ ಪ್ರಧಾನಿ ಮೋದಿ ಸ್ವಾಗತಿಸಿದ್ದರು.
ಬಳಿಕ ಮಾತನಾಡಿದ್ದ ಅಗರ್ವಾಲ್ ಅವರು 2022ರ ಜನವರಿಯಲ್ಲಿ ಟಾಟಾ ಗ್ರೂಪ್ ಸರ್ಕಾರದಿಂದ ಸ್ವಾಧೀನಪಡಿಸಿಕೊಂಡ ಏರ್ ಇಂಡಿಯಾ 17 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಿಮಾನಗಳನ್ನು ಆರ್ಡರ್ ಮಾಡಿದೆ. ಈ ವರ್ಷದ ಅಂತ್ಯದ ವೇಳೆಗೆ ಮೊದಲ ಎ350 ವಿಮಾನಗಳು ವಿಮಾನಯಾನ ಸಂಸ್ಥೆಗೆ ಬಂದು ಸೇರಲಿವೆ.
ವಿಮಾನಗಳಿಗೆ ನೀಡಿರುವ ಈ ಬೃಹತ್ ಸಂಖ್ಯೆಯ ಆರ್ಡರ್, ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಿಮಾನಯಾನ ಸಂಸ್ಥೆಯಾಗಿ ಪರಿವರ್ತಿಸುವ ಮತ್ತು ಭಾರತದಿಂದ ವಿಶ್ವದ ಪ್ರತಿಯೊಂದು ಪ್ರಮುಖ ನಗರಗಳಿಗೆ ತಡೆರಹಿತ ಸೇವೆ ನೀಡುವ ಟಾಟಾ ಗ್ರೂಪ್ನ ಆಶಯವನ್ನು ಪ್ರದರ್ಶಿಸುತ್ತದೆ ಎಂದು ಹೇಳಿದ್ದಾರೆ.