Balipa Bhagavata | ತೆಂಕು ತಿಟ್ಟು ಭೀಷ್ಮ ಭಾಗವತ, ಯಕ್ಷ ಲೋಕದ ದಿಗ್ಗಜ, ಬಲಿಪ ಭಾಗವತ ಅಸ್ತಂಗತ !

Balipa Bhagavata

ಯಕ್ಷಗಾನದ ಮೇರು ದಿಗ್ಗಜ ತೆಂಕುತಿಟ್ಟಿನ ಭಾಗವತ ಬಲಿಪ ನಾರಾಯಣ ಭಾಗವತ ಅವರು ಇಂದು ನಿಧನರಾಗಿದ್ದಾರೆ. ಬಲಿಪ ಅವರಿಗೆ 84ವರ್ಷ ವಯಸ್ಸಾಗಿತ್ತು. ಇವರು ಗುರುವಾರ ಸಂಜೆ ಅಂದರೆ ಇಂದು ಮೂಡುಬಿದಿರೆಯ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಮೂಲತಃ ಕಾಸರಗೋಡು ಜಿಲ್ಲೆಯವರು. ಇವರು ಕಟೀಲು ದುರ್ಗಾ ಪರಮೇಶ್ವರಿ ಮೇಳದಲ್ಲಿ ದೀರ್ಘಕಾಲ ತಮ್ಮ ಸೇವೆಯನ್ನು ನೀಡಿದ್ದಾರೆ. ಏರು ಸ್ವರದ ಭಾಗವತಿಕೆಯ ಮೂಲಕ ಬಹಳ ಪ್ರಖ್ಯಾತಿಯನ್ನು ಹೊಂದಿದ್ದ ಇವರು ದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ತೆಂಕು ಪರಿಪೂರ್ಣ ಯಕ್ಷಗಾನ ಹಾಡುಗಾರಿಕೆಯಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದವರು.

ಸುಮಾರು ಅರುವತ್ತು ವರ್ಷಕ್ಕಿಂತಲೂ ಹೆಚ್ಚು ಕಾಲ ತಮ್ಮ ಕಲಾ ಸೇವೆಯನ್ನು ನೀಡಿದ ಇವರು ತೆಂಕು ತಿಟ್ಟು ಯಕ್ಷರಂಗದ ಭೀಷ್ಮ ಎಂದೇ ಪ್ರಖ್ಯಾತರು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸನ್ಮಾನಗಳು ಇವರಿಗೆ ಸಂದಿದೆ.

ಬಲಿಪ ಅವರ ಅಜ್ಜ ಬಲಿಪ ನಾರಾಯಣ ಭಾಗವತರೂ ಕೂಡಾ ಯಕ್ಷಗಾನದಲ್ಲಿ ಹೆಸರು ಮಾಡಿದವರು. ಇವರು ಬಲಿಪ ಶೈಲಿಯ ಹಾಡುಗಾರಿಕೆಯನ್ನು ಹುಟ್ಟು ಹಾಕಿದ್ದರು.

1938ರ ಎಪ್ರಿಲ್‌ 13ರಂದು ಜನಿಸಿದ್ದ ಇವರು ಮೂಲತಃ ಕಾಸರಗೋಡು ಜಿಲ್ಲೆಯ ಪಡ್ರೆ ಎಂಬ ಗ್ರಾಮದವರಾದ ಇವರು ಮೂಡುಬಿದಿರೆ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದರು. ಯಕ್ಷಗಾನದಲ್ಲಿ ಐದು ದಿನದ ದೇವಿ ಮಹಾತ್ಮೆ  ಮಹಾಪ್ರಸಂಗವನ್ನು ರಚಿಸಿದ್ದು, ಇದೊಂದು ಯಕ್ಷಗಾನದ ಇತಿಹಾಸದಲ್ಲೇ ಮಹತ್ವದ ಕೃತಿ ಎಂದು ಹೇಳಲಾಗಿದೆ.

ಮಾಧವ್‌ ಭಟ್‌ ಮತ್ತು ತಾಯಿ ಸರಸ್ವತಿ ಅವರ ಮಗನಾಗಿ ಹುಟ್ಟಿದ ಇವರು ವಿದ್ಯಾಭ್ಯಾಸವನ್ನು ಏಳನೇ ತರಗತಿಯವರೆಗೆ ಮಾಡಿದ್ದರು. ಇವರು ಯಕ್ಷಗಾನವನ್ನು ಕಲಿತಿದ್ದು ತಮ್ಮ ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ. ಇವರ ಹೆಂಡತಿ ಜಯಲಕ್ಷ್ಮಿ. ಬಲಿಪ ಅವರ ನಾಲ್ವರು ಪುತ್ರರಲ್ಲಿ ಪ್ರಸಾದ್‌ ಭಟ್‌ ಬಲಿಪ ಎಂಬುವರು ಕಳೆದ ವರ್ಷ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಮಾಧವ ಬಲಿಪ ಹಿಮ್ಮೇಳ ಕಲಾವಿದರು, ಶಿವಶಂಕರ ಬಲಿಪ ಭಾಗವತರು, ಹಾಗೂ ಇನ್ನೋರ್ವ ಪುತ್ರ ಶಶಿಧರ್‌  ಬಲಿಪ ಕೃಷಿಕರಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ.

ಬಲಿಪರ ನಿಧನ ಯಕ್ಷಲೋಕಕ್ಕೆ ತುಂಬಲಾರದ ನಷ್ಟ. ಬಲಿಪ ಅವರ ನಿಧನಕ್ಕೆ ಗಣ್ಯರು, ಜನಪ್ರತಿನಿಧಿಗಳು, ಹಾಗೂ ಅವರ ಸಾವಿರಾರು ಅಭಿಮಾನಿಗಳು, ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ.

 

Leave A Reply

Your email address will not be published.