RCB WPL: ‘ಕ್ರಿಕೆಟ್’ ತಂಡಕ್ಕೆ ‘ಟೆನ್ನಿಸ್’ ತಾರೆ ಮೆಂಟರ್! RCB ಮಹಿಳಾ ಕ್ರಿಕೆಟ್ ಫ್ರಾಂಚೈಸಿಗೆ ಮಾರ್ಗದರ್ಶನ ಮಾಡಲಿದ್ದಾರೆ ಸಾನಿಯಾ!!
ಹೊಸದಾಗಿ ಆರಂಭವಾದ ಡಬ್ಲ್ಯುಪಿಎಲ್ ಎಂಬುದು ಭಾರತದ ಮಹಿಳಾ ಕ್ರಿಕೆಟಿಗೆ ಹೊಸ ರಂಗು ಇದ್ದಂತೆ. ಈ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಗಾಗಿ ಇತ್ತೀಚೆಗೆ ಹರಾಜು ಪ್ರಕ್ರಿಯೆ ನಡೆದಿದ್ದು, ಇನ್ನು ಗ್ರೌಂಡಿನಲ್ಲಿ ನಡೆಯುವ ಸೆಣೆಸಾಟಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ಅದರಲ್ಲೂ ಭಾರತ ತಂಡದ ಉಪನಾಯಕಿ ಸ್ಮೃತಿ ಮಂದಾನ ಅವರನ್ನು RCB ತಂಡ ಖರೀದಿಸಿದ್ದು ಎಲ್ಲರಿಗೂ ಅತೀವ ಸಂತಸ ತಂದಿತ್ತು. ಇದೀಗ RCB ಅಭಿಮಾನಿಗಳಿಗೆ ಮತ್ತೊಂದು ಸಂತೋಷದ ಕ್ಷಣ ಎದುರಾಗಿದೆ.
RCB ಮಹಿಳಾ ತಂಡದ ವಿವಿಧ ತರಬೇತಿ ಸಿಬ್ಬಂದಿಯ ಹೆಸರನ್ನೂ ಬುಧವಾರ ಪ್ರಕಟಿಸಿದೆ. ಇದರಲ್ಲಿ
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಮೆಂಟರ್ ಆಗಿ ನೇಮಕಗೊಂಡಿದ್ದಾರೆ. ವೃತ್ತಿಪರ ಟೆನಿಸ್ನಿಂದ ಮುಂದಿನ ವಾರ ನಿವೃತ್ತಿ ಹೊಂದುತ್ತಿರುವ 36 ವರ್ಷದ ಸಾನಿಯಾ, 6 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆತಿಯಾಗಿದ್ದಾರೆ. ಟೆನಿಸ್ ಆಟಗಾರ್ತಿಯನ್ನು ಕ್ರಿಕೆಟ್ ತಂಡದ ಮಾರ್ಗದರ್ಶನಕ್ಕೆ ನೇಮಿಸಿರುವುದು ಹುಬ್ಬೇರಿಸುವಂಥ ನಡೆಯಾದರೂ, ಆರ್ಸಿಬಿ ಇದನ್ನು ಸಮರ್ಥಿಸಿಕೊಂಡಿದೆ.
‘ನಮ್ಮ ಪ್ಲೇಬೋಲ್ಡ್ ಸೂತ್ರಕ್ಕೆ ಸಾನಿಯಾ ಸರಿಯಾಗಿ ಹೊಂದುತ್ತಾರೆ. ಕ್ರಿಕೆಟ್ ಅಥವಾ ಟೆನಿಸ್ ಇರಲಿ, ಕ್ರೀಡಾಪಟುಗಳು ಒಂದೇ ರೀತಿಯಾಗಿ ಸಜ್ಜಾಗುತ್ತಾರೆ, ಸ್ಪರ್ಧಾತ್ಮಕತೆ ಎದುರಿಸುತ್ತಾರೆ, ತಮ್ಮ ಕ್ರೀಡೆಯನ್ನು ಪ್ರೀತಿಸುತ್ತಾರೆ ಮತ್ತು ಒತ್ತಡದಲ್ಲಿ ಆಡುತ್ತಾರೆ. ಸಾನಿಯಾ ಕಳೆದ 20 ವರ್ಷಗಳಿಂದ ತಮ್ಮ ವರ್ಣರಂಜಿತ ವೃತ್ತಿಜೀವನದಲ್ಲಿ ಇದನ್ನೇ ಮಾಡಿದ್ದಾರೆ’ ಎಂದು ಆರ್ಸಿಬಿ ಫ್ರಾಂಚೈಸಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಜುನ, ಖೇಲ್ರತ್ನ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಆಗಿರುವ ಸಾನಿಯಾ, ಆರ್ಸಿಬಿ ಮಹಿಳಾ ತಂಡವನ್ನು ಮೆಂಟರ್ ಆಗಿ ಕೂಡಿಕೊಳ್ಳುತ್ತಿರುವುದು ತುಂಬಾ ಸಂತೋಷದಾಯಕ. ಡಬ್ಲ್ಯುಪಿಎಲ್ ಮೂಲಕ ಮಹಿಳಾ ಕ್ರಿಕೆಟ್ ಹೊಸ ಹೆಜ್ಜೆ ಇಡುತ್ತಿದೆ. ಈ ಕ್ರಾಂತಿಕಾರಿ ನಡೆಯ ಭಾಗವಾಗುವುದನ್ನು ಎದುರು ನೋಡುತ್ತಿದ್ದೇನೆ. ಆರ್ಸಿಬಿ ಮತ್ತು ನಾನು ಒಂದೇ ರೀತಿಯ ಮನೋಭಾವ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.
ಆರ್ಸಿಬಿ ಮಹಿಳಾ ತಂಡಕ್ಕೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ರಾಜ್ಯದ ಆರ್ಎಕ್ಸ್ ಮುರಳಿ ಮತ್ತು ವಿಆರ್ ವನಿತಾ ಅವರನ್ನು ನೇಮಿಸಲಾಗಿದೆ. ಪ್ರಸಕ್ತ ನ್ಯೂಜಿಲೆಂಡ್ ಮಹಿಳಾ ತಂಡದ ಕೋಚ್ ಆಗಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬೆನ್ ಸಾಯರ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. 45 ವರ್ಷದ ಸಾಯರ್, ದಿ ಹಂಡ್ರೆಡ್ ಮತ್ತು ಮಹಿಳಾ ಬಿಗ್ ಬಾಷ್ ಲೀಗ್ನಲ್ಲೂ ಕೋಚ್ ಆಗಿದ್ದು, ಆಸೀಸ್ ಮಹಿಳಾ ತಂಡಕ್ಕೂ ಸಹಾಯಕ ಕೋಚ್ ಆಗಿದ್ದರು. ಮಲೊರನ್ ರಂಗರಾಜನ್ ತಂಡದ ಸಹಾಯಕ ಕೋಚ್ ಆಗಿರುತ್ತಾರೆ.
ಇನ್ನು ಆರ್ಸಿಬಿ ತರಬೇತಿ ಬಳಗದಲ್ಲಿರುವವರುನ್ನು ನೋಡುವುದಾದರೆ ಮೆಂಟರ್ ಆಗಿ ಸಾನಿಯಾ ಮಿರ್ಜಾ, ಮುಖ್ಯ ಕೋಚ್ ಆಗಿ ಬೆನ್ ಸಾಯರ್, ಸಹಾಯಕ ಕೋಚ್ ಆಗಿ ಎಂ. ರಂಗರಾಜನ್, ಬ್ಯಾಟಿಂಗ್ ಕೋಚ್ ಆಗಿ ಆರ್ಎಕ್ಸ್ ಮುರಳಿ, ಫೀಲ್ಡಿಂಗ್ ಕೋಚ್ ಆಗಿ ವಿಆರ್ ವನಿತಾ, ಟೀಮ್ ಮ್ಯಾನೇಜರ್ ಆಗಿ ಡಾ. ಹರಿಣಿ, ಥೆರಪಿಸ್ಟ್ ಆಗಿ ನವನೀತಾ ಗೌತಮ್ ನೇಮಕವಾಗಿದ್ದಾರೆ.