Reservation to Muslims | ಮುಸ್ಲಿಮರಿಗೆ ಸಶಸ್ತ್ರ ಪಡೆಯಲ್ಲಿ ಬೇಕು 30 % ಮೀಸಲಾತಿ
ಮುಸ್ಲಿಮರಿಗೆ ಸಶಸ್ತ್ರ ಪಡೆಯಲ್ಲಿ ಕನಿಷ್ಟ 30% ಆದರೂ ಮೀಸಲಾತಿ ನೀಡಬೇಕು ಎಂದು ಜನತಾ ದಳದ ನಾಯಕ ಗುಲಾಮ್ ರಸೂಲ್ ಬಲ್ಯಾವಿ ಮಂಗಳವಾರ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.
2019ರ ಪುಲ್ವಾಮ ಭಯೋತ್ಪಾದನಾ (Pulwama attack) ದಾಳಿಗೆ ನಾಲ್ಕು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸೈನಿಕರ ತ್ಯಾಗ ಬಲಿದಾನದ ಬಗ್ಗೆ ಕಾರ್ಯಕ್ರಮದಲ್ಲಿ ಜನತಾ ದಳದ ನಾಯಕ ಗುಲಾಮ್ ರಸೂಲ್ ಬಲ್ಯಾವಿ ಮಾತನಾಡುತ್ತಿದ್ದರು. ” ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಕಿಸ್ತಾನಕ್ಕೆ ಹಾಗೂ ಭಯೋತ್ಪಾದಕರಿಗೆ ಹೆದರುತ್ತಾರೆ. ಮುಸಲ್ಮಾನರಿಗೆ 30% ಮೀಸಲಾತಿ ಕೊಟ್ಟು ನೋಡಲಿ. ಪಾಕಿಸ್ತಾನ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸುವಾಗ ಬಂದಿದ್ದು ಅಬ್ದುಲ್ ಕಲಾಂ (APJ Abdul Kalam) ಎಂಬ ಮುಸಲ್ಮಾನ್ ವ್ಯಕ್ತಿಯೇ ಹೊರತು ನಾಗ್ಪುರದ ಯಾವ ಬಾಬಾನೂ ಬರಲಿಲ್ಲ ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಸೈನಿಕರ ಹೆಸರಿನಲ್ಲಿ ಮತಯಾಚನೆ ಮಾಡಿದೆ. ಬಿಜೆಪಿ ತನ್ನ ಅಪರಾಧಗಳನ್ನು ಮರೆಮಾಚಲು ಸೇನೆಯ ಹೆಸರನ್ನು ಬಳಸಿಕೊಳ್ಳುತ್ತಿದೆ. ಸೈನಿಕರ ರಕ್ತವನ್ನು ರಾಜಕೀಯಕ್ಕೆ ಬಳಕೆ ಮಾಡಿ ತನ್ನ ತಪ್ಪುಗಳನ್ನು ಅಡಗಿಸುವ ಪ್ರಯತ್ನ ಮಾಡಿದೆ ಎಂದು ಜನತಾ ದಳದ ನಾಯಕ ಗುಲಾಮ್ ರಸೂಲ್ ಬಲ್ಯಾವಿ ದೂರಿದ್ದಾರೆ.
ಈ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಹಾರದ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕ ನಿತೀಶ್ ಕುಮಾರ್, ಬುಲ್ಯಾವಿಯವರ ಬೇಡಿಕೆಯನ್ನು ಖಂಡಿಸಿದ್ದಾರೆ. ಅವರ ಹೇಳಿಕೆಯ ಬಗ್ಗೆ ವಿವರಣೆಯನ್ನು ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.