Leopard cub rescue: ಬಾವಿಗೆ ಬಿದ್ದ ಚಿರತೆಯನ್ನು ಈ ಪಶುವೈದ್ಯೆ ರಕ್ಷಿಸಿದ್ದೇ ಒಂದು ರೋಚಕ! ವೈದ್ಯೆಯ ಸಾಹಸಕ್ಕೆ ಎಲ್ಲೆಡೆ ಭಾರೀ ಶ್ಲಾಘನೆ!

ರಾಜ್ಯದಲ್ಲಿ ಎಲ್ಲೆಂದರಲ್ಲಿ ಕಾಡು ಪ್ರಾಣಿಗಳ ಹಾವಳಿ ಶುರುವಾಗಿದೆ. ಅದರಲ್ಲೂ ಈ ಆನೆ ಮತ್ತು ಚಿರತೆಯ ಕಾಟವಂತೂ ಹೇಳತೀರದು. ಇವುಗಳನ್ನು ಸೆರೆ ಹಿಡಿಯುವ ಕಾರ್ಯವೂ ಭರದಿಂದ ಸಾಗುತ್ತಿದ್ದೆ. ಇದರ ಬೆನ್ನಲ್ಲೇ ಮಂಗಳೂರಿನ ಹೊರವಲಯದ ಕಟೀಲು ಸಮೀಪದ ನಿಡ್ಡೋಡಿಯಲ್ಲಿ ಬಾವಿಯೊಂದಕ್ಕೆ ಒಂದು ವರ್ಷ ಪ್ರಾಯದ ಚಿರತೆ ಮರಿಯೊಂದು ಬಿದ್ದಿದು, ಈ ಮರಿಯನ್ನು ರಕ್ಷಿಸಲು ಸ್ವತಃ ಪಶುವೈದ್ಯೆಯೇ ಬೋನಿನಲ್ಲಿ ಕುಳಿತು ಬಾವಿಗಿಳಿದ ಘಟನೆ ಇತ್ತೀಚೆಗೆ ನಡೆದಿದೆ.

ಹೌದು, ಬಾವಿಗೆ ಬಿದ್ದ ಒಂದು ವರ್ಷ ವಯಸ್ಸಿನ ಚಿರತೆಯನ್ನು ಮಹಿಳಾ ಪಶುವೈದ್ಯೆಯೊಬ್ಬರು ಖುದ್ದು ಬೋನಿನಲ್ಲಿ ಕುಳಿತು ಬಾವಿಗೆ ಇಳಿದು ರಕ್ಷಿಸಿದ್ದಾರೆ. ಸೆರೆಹಿಡಿದ ಪಶುವೈದ್ಯೆಯ ಸಾಹಸಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಎರಡು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದ ಈ ಚಿರತೆ ಮರಿಯನ್ನು ಸೆರೆಹಿಡಿದು ಮೇಲಕ್ಕೆ ತರಲು ಅರಣ್ಯ ಇಲಾಖೆಯವರು ಬಹಳಷ್ಟು ಪ್ರಯತ್ನ ಪಟ್ಟಿದ್ದರೂ ಆದರೆ ಸಾಧ್ಯವಾಗಿರಲಿಲ್ಲ, ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್‌ಕ್ಯೂ ಸೆಂಟರ್‌ನ ಪಶುವೈದ್ಯೆ ಧೈರ್ಯ ಮಾಡಿ ಚಿರತೆ ಸಂರಕ್ಷಿಸಿದ್ದಾರೆ.

ನಿಡ್ಡೋಡಿ ಚರ್ಚ್ ಸಮೀಪದ ಫ್ಲೋರಿನ್ ಎಂಬುವರ ಮನೆಯ ಬಾವಿಗೆ ಚಿರತೆಯು ಕಳೆದ ಶುಕ್ರವಾರ ರಾತ್ರಿ ಬಿದ್ದಿತ್ತು. ಶನಿವಾರ ಮಧ್ಯಾಹ್ನ ಗಮನಕ್ಕೆ ಬಂದು, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಚಿರತೆ ಬಾವಿಯೊಳಗಿದ್ದ ಸಣ್ಣ ಗುಹೆ ಮಾದರಿಯ ಭಾಗದಲ್ಲಿ ಅವಿತು ಕುಳಿತಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಬೋನಿನೊಳಗೆ ಕೋಳಿಯನ್ನು ಹಾಕಿ ಬಾವಿಗೆ ಇಳಿಸಿ ಚಿರತೆಯನ್ನು ಮೇಲೆತ್ತಲು ಯತ್ನಿಸಿದರೂ ಪ್ರಯತ್ನ ವಿಫಲವಾಗಿತ್ತು.

ಮೂವತ್ತಡಿಗಿಂತಲೂ ಆಳವಾದ ಬಾವಿಯ ಒಳಗೆ ಗುಹೆಯಂತಿರುವಲ್ಲಿ ಈ ಚಿರತೆ ಮರಿ ಅಡಗಿಕೊಳ್ಳುತ್ತಿತ್ತು. ಇಳಿಸಿದ ಬೋನಿನೊಳಗೂ ಬರಲು ಹಿಂದೇಟು ಹಾಕುತ್ತಿತ್ತು. ಆಗ, ಅರಣ್ಯ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಸ್ವಯಂಸೇವಾ ಸಂಸ್ಥೆ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್‌ಕ್ಯೂ ಸೆಂಟರ್‌ನ ತಜ್ಞ ವೈದ್ಯರು ಸ್ಥಳಕ್ಕಾಗಮಿಸಿದರು. ಡಾ.ಮೇಘನಾ, ಡಾ.ಪೃಥ್ವಿ, ಡಾ.ನಫೀಸಾ ಮತ್ತು ಡಾ.ಯಶಸ್ವಿ ನಾರಾವಿ ಕಾರ್ಯಾಚರಣೆ ತಂಡದಲ್ಲಿದ್ದರು. ಅರಿವಳಿಕೆ ಮದ್ದನ್ನು ಗನ್‌ನಲ್ಲಿ ತುಂಬಿಸಿ ಅರಣ್ಯ ಇಲಾಖೆ ಸಿದ್ಧಪಡಿಸಿದ ಬೋನಿನೊಳಗೆ ಕುಳಿತುಕೊಂಡ ಡಾ.ಮೇಘನಾ, ಅವರನ್ನು ಬೋನಿನ ಸಮೇತ ಬಾವಿಗೆ ಇಳಿಸಲಾಯಿತು.

ಬಾವಿಯೊಳಗೆ ಬೋನಿನೊಂದಿಗೆ ಇಳಿದ ಡಾ ಮೇಘನಾ ಅವರು ಚಿರತೆಗೆ ಅರಿವಳಿಕೆಯನ್ನು ಗನ್ ಮೂಲಕ ಶೂಟ್ ಮಾಡಿ ಅದನ್ನು ಪ್ರಜ್ಞಾ ಹೀನಗೊಳಿಸಿದರು. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಹಗ್ಗದ ಮೂಲಕ ಬಾವಿಗಿಳಿದು ಚಿರತೆಯನ್ನು ಡಾ ಮೇಘನಾ ಇದ್ದ ಬೋನಿನೊಳಗೆ ಹಾಕಿದ್ದಾರೆ. ಆ ಬಳಿಕ ಬೋನನ್ನು ನಿಧಾನವಾಗಿ ಮೇಲೆತ್ತಲಾಯಿತು. ಮೇಲೆತ್ತಿದ್ದ ಬಳಿಕ ಚಿರತೆಗೆ ಪ್ರಜ್ಞೆ ಬರುವ ಇಂಜೆಕ್ಷನ್ ನೀಡಿ ಪ್ರಜ್ಞೆ ಬರಿಸಲಾಯಿತು. ಚಿರತೆ ಆರೋಗ್ಯ ಪರೀಕ್ಷಿಸಿ ಕಾಡಿಗೆ ಬಿಡಲಾಯಿತು.

ಇದೀಗ ಮೇಘನಾ ಮತ್ತು ಇತರ ಪಶುವೈದ್ಯರ ಸಾಹಸಯುತ ಕಾರ್ಯಾಚರಣೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಪಶುವೈದ್ಯೆ ಯಶಸ್ವನಿ ನಾರವಿಯವರು ‘ಬೋನಿನೊಂದಿಗೆ ಬಾವಿಗೆ ಇಳಿದು ಚಿರತೆಯನ್ನು ರಕ್ಷಿಸುವುದು ಸವಾಲಿನ ಕೆಲಸ. ಬೋನು ಇಳಿಸುವ ಸಂದರ್ಭ ಲೆಕ್ಕಾಚಾರ ತಪ್ಪಿದರೆ ಚಿರತೆ ದಾಳಿ ಮಾಡುವ ಸಾಧ್ಯತೆ ಇತ್ತು. ಆದರೂ ಡಾ.ಮೇಘನಾ ಬಾವಿಗೆ ಇಳಿಯುವ ಧೈರ್ಯ ಮಾಡಿದ್ದಾರೆ. ಅವರ ಈ ಕಾರ್ಯ ಶ್ಲಾಘನೀಯ ಎಂದಿದ್ದಾರೆ.

Leave A Reply

Your email address will not be published.