Ashwath Narayan and Siddaramaiah War: ಟಿಪ್ಪು ಹೊಡೆದಂತೆ ಸಿದ್ದರಾಮಯ್ಯರನ್ನು ಹೊಡೆಯಬೇಕು: ಅಶ್ವಥ್ ನಾರಾಯಣ್! ಹೊಡೆಯಲು ನೀವೇ ಕೋವಿ ಹಿಡಿದು ಬನ್ನಿ ಎಂದ ಸಿದ್ದು!
ಚುನಾವಣೆ ನಿಮಿತ್ತ ರಾಜ್ಯದಲ್ಲಿ ಪಕ್ಷಗಳ ಅಬ್ಬರದ ಪ್ರಚಾರ ನಡೆಯುತ್ತಿದೆ. ಕ್ಷೇತ್ರವಾರು ಭೇಟಿ ನೀಡಿ ಮತ ಬೇಡುತ್ತಿರುವ ನಾಯಕರು ತಮ್ಮ ಸಾಧನೆಗಳನ್ನು ಹೇಳುವ ಪದಲು ಆರೋಪ ಪ್ರತ್ಯಾರೋಪಗಳನ್ನೇ ಜಾಸ್ತಿ ಮಾಡುತ್ತಾ, ಅದನ್ನು ಪ್ರಚಾರದ ಬಂಡವಾಳವನ್ನಾಗಿ ಮಾಡಿಕೊಂಡುಬಿಟ್ಟಿದ್ದಾರೆ. ಕೆಲವೊಮ್ಮೆ ತಾವೇನು ಮಾತನಾಡುತತಿದ್ದೇವೆ ಎನ್ನುವ ಪರಿಜ್ಞಾನವೂ ಹಲವರಲ್ಲಿರುವುದಿಲ್ಲ. ಇದೀಗ ಬಿಜೆಪಿ ನಾಯಕ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಕೂಡ ಇದೇ ರೀತಿ ವರ್ತಿಸಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನ ಬಾಯಿಗೆ ಬಂದಂತೆ ಮಾತನಾಡಿ ಸಾಕಷ್ಟು ಸುದ್ಧಿಯಾಗುತ್ತಿದ್ದಾರೆ.
ಹೌದು, ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಬೇಕು ಎಂದುಕೊಂಡಿರುವ ಬಿಜೆಪಿ ಮಂಡ್ಯದಲ್ಲೂ ಹಿಂದುತ್ವದ ಮತ ಬೇಟೆಗೆ ಟಿಪ್ಪುವಿನ ಅಸ್ತ್ರ ಪ್ರಯೋಗಿಸಿದೆ. ಮಂಡ್ಯದಲ್ಲಿ ಮತ ಪ್ರಚಾರ ಆರಂಭಿಸಿರುವ ಬಿಜೆಪಿ ಸಚಿವ ಅಶ್ವತ್ ನಾರಾಯಣ್ ‘ಟಿಪ್ಪುವನ್ನು ಹೊಡೆದು ಹಾಕಿದ ಹಾಗೆ ಸಿದ್ದರಾಮಯ್ಯನನ್ನು ಹೊಡೆದು ಹಾಕಬೇಕೆಂದು’ ಹೇಳಿ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದ್ದಾರೆ. ಇದೀಗ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ಮಂಡ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ.
ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಸಚಿವ ಅಶ್ವಥ್ ನಾರಾಯಣ್ ಮಂಡ್ಯ ಜನರಿಗೆ ರಾಜಕೀಯ ಬದಲಾವಣೆ ಮಾಡುವ ಶಕ್ತಿ ಇದೆ. ಮಂಡ್ಯದವರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸುತ್ತಾರೆ. ರಾಜಕೀಯ ದಿಕ್ಸೂಚಿ ಮಂಡ್ಯದಿಂದ ಕಾಣಬೇಕು. ಹೀಗೆ ಮಾಡಲಿಲ್ಲ ಅಂದ್ರೆ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುತ್ತಾರೆ. ನಿಮಗೆ ಟಿಪ್ಪು ಬೇಕಾ ಸಾವರ್ಕರ್ ಬೇಕಾ, ಟಿಪ್ಪು ಬೇಡಾ ಅಂದ್ರೆ ಸಿದ್ದರಾಮಯ್ಯ ಅವರನ್ನು ಟಿಪ್ಪು ಕಳುಹಿಸಿದ ಹಾಗೆ ಕಳಿಸಬೇಕು. ಹುರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದರು. ಅದೇ ರೀತಿ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದಿದ್ದಾರೆ.
ಸದ್ಯ ಬಿಜೆಪಿ ಎಲ್ಲಿ ಹೋದರೂ ಕೂಡ, ಯಾವ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡರೂ ಕೂಡ ಟಿಪ್ಪುವನ್ನು ಮಧ್ಯ ಎಳೆದು ತರುತ್ತಿದ್ದೆ. ಬಿಜೆಪಿ ನಾಯಕರು ಯಾವ ಜಿಲ್ಲೆಗೆ ಹೋದ್ರು ಟಿಪ್ಪು ಸುಲ್ತಾನ್ ಹೆಸರು ತೆಗೆದು ಧರ್ಮದ ಭಾವನಾತ್ಮಕವಾಗಿ ಟ್ಯಾಕಲ್ ಮಾಡಲು ಮುಂದಾಗುತ್ತಾರೆ. ಅದೇ ರೀತಿ ಮಂಡ್ಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಮಂಡ್ಯ ಜಿಲ್ಲೆಯ ಮತದಾರರನ್ನು ಸೆಳೆಯಲು ಬಿಜೆಪಿ ಸಚಿವ ಅಶ್ವಥ್ ನಾರಾಯಣ್ ಮುಂದಾಗಿದ್ದಾರೆ. ಟಿಪ್ಪುವಿನ ಹೆಸರಿನ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯರ ಹೆಸರು ತಂದು ಜನರನ್ನು ಹಿಂದುತ್ವದ ಮೂಲಕ ಓಲೈಕೆ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು ‘ಟಿಪ್ಪುವನ್ನು ಹೊಡೆದು ಹಾಕಿದಂತೆ ನನ್ನನ್ನೂ ಹೊಡೆದು ಹಾಕಬೇಕು ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಜನರಿಗೆ ಕರೆ ನೀಡಿದ್ದಾರೆ. ಜನರನ್ನು ಯಾಕೆ ಪ್ರಚೋದಿಸುತ್ತೀರಿ ಸಚಿವರೇ? ನೀವೇ ಕೋವಿ ಹಿಡಿದುಕೊಂಡು ಬಂದು ಬಿಡಿ’ ಎಂದ ತಿರುಗೇಟು ನೀಡಿದ್ದಾರೆ. ಸಿ.ಎನ್. ಅಶ್ವತ್ಥನಾರಾಯಣ್‌ಗೆ ನೀಡಿರುವ ಹೇಳಿಕೆಗೆ ಸರಣಿ ಟ್ವೀಟ್‌ಗಳ ಮೂಲಕ ಪ್ರತಿಕ್ರಿಯಿಸಿರುವ ಅವರು, ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ, ಸರ್ಕಾರ ಸತ್ತುಹೋಗಿದ್ದಾರೆ ಎಂದೇ ಲೆಕ್ಕ ಎಂದಿದ್ದಾರೆ.
ಅಲ್ಲದೆ, ಅಶ್ವತ್ಥನಾರಾಯಣ್ ನೀಡಿರುವ ಹತ್ಯೆಯ ಕರೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ತಿಳಿಯಲು ಬಯಸುತ್ತೇನೆ. ಮೌನ ಸಮ್ಮತಿಯ ಲಕ್ಷಣವೇ? ಎಂದು ಪ್ರಶ್ನಿಸಿದ್ದಾರೆ. ನನ್ನ ಹತ್ಯೆಗೆ ಅಶ್ವತ್ಥನಾರಾಯಣ್ ನೀಡಿದ ಕರೆಯಿಂದ ನನಗೆ ಆಶ್ಚರ್ಯವಾಗಿಲ್ಲ. ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುತ್ತಿರುವ ಪಕ್ಷದ ನಾಯಕರಿಂದ ಕೊಲೆಗಡುಕತನವಲ್ಲದೇ ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದ್ದಾರೆ.