Bajarang Dal Activists : ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ, 12 ಮಂದಿಗೆ ಗಂಭೀರ ಗಾಯ!

ನಳಂದದ ಬಿಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬರ್ ಚೌಕ್ ಬಳಿಯ ಹನುಮಾನ್ ದೇವಸ್ಥಾನದಲ್ಲಿ ಭಜರಂಗಬಲಿಯ ಆರತಿ ಸೇವೆ ನಡೆದಿದೆ. ಈ ಸಂದರ್ಭದಲ್ಲಿ ಬಿಹಾರ ಪೊಲೀಸ್ ಠಾಣೆಯ ಪೊಲೀಸರು ಬಜರಂಗದಳದ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್​ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

ಪ್ರತಿ ಮಂಗಳವಾರ ಆಂಜನೇಯನಿಗೆ ಆರತಿ ಬೆಳಗುವ ಕ್ರಮ ರೂಡಿಯಲ್ಲಿದೆ. ಹೀಗಾಗಿ, ಬಜರಂಗದಳದ ಕಾರ್ಯಕರ್ತರು ಅಲ್ಲಿ ಸೇರಿದ್ದು, ಆಂಜನೇಯನಿಗೆ ಆರತಿ ಬೆಳಗುವ ವೇಳೆ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಬಜರಂಗದಳ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ತಮಗೆ ಲಾಠಿ ರುಚಿ ತೋರಿಸಿದ ಖಾಕಿ ಪಡೆಯ ಮೇಲೆ ಸಿಟ್ಟಿಗೆದ್ದ ಬಜರಂಗದಳದ ಕಾರ್ಯಕರ್ತರು ಪೊಲೀಸರ ಜತೆ ವಾಗ್ವಾದ ನಡೆಸಿದ್ದಲ್ಲದೆ, ಅಂಬರ್ ಚೌಕ್ ಬಳಿ ಬಜರಂಗದಳದ ಕಾರ್ಯಕರ್ತರು ಸೇರಿಕೊಂಡು ಆಡಳಿತದ ವಿರುದ್ಧ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.

 

ಬಜರಂಗದಳದ ಕಾರ್ಯಕರ್ತರು ಪೊಲೀಸರ ಲಾಠಿ ಪ್ರಹಾರ ನಡೆಸಿದಕ್ಕೆ ಆಕ್ರೋಶ ಹೊರ ಹಾಕಿ ದೊಡ್ಡ ಗಲಾಟೆ ನಡೆಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಸದ್ಯ ಈ ಗಲಾಟೆ ನಡೆದ ಪ್ರದೇಶದಲ್ಲಿ ಜನರು ಭಯಭೀತರಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಘಟನೆಯ ನಂತರ ಎಸ್​ಡಿಎಂ ಅಭಿಷೇಕ್ ಪಲಾಸಿಯಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.