America presidential election: 2024ಕ್ಕೆ ಅಮೇರಿಕಾ ಅಧ್ಯಕ್ಷೀಯ ಚುನಾವಣೆ! ಭಾರತ ಮೂಲದ ನಿಕ್ಕಿ ಹ್ಯಾಲೆ, ವಿವೇಕ್ ರಾಮಸ್ವಾಮಿ ಸ್ಪರ್ಧೆ!

ಪ್ರಪಂಚದ ವಿವಿಧ ರಾಷ್ಟ್ರಗಳ ಉನ್ನತ ಸ್ಥಾನಗಳನ್ನು ಅನೇಕ ಭಾರತೀಯರು ಅಲಂಕರಿಸಿರುವುದು ನಮಗೆಲ್ಲರಿಗೂ ಗೊತ್ತಿದೆ. ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೇರಿಕಾದ ಉಪಾಧ್ಯಕ್ಷ ಸ್ಥಾನದಿಂದ ಹಿಡಿದು, ಬ್ರಿಟನ್ ಪ್ರಧಾನಿ ಹುದ್ದೆ, ವಿಶ್ವ ಸಂಸ್ಥೆ, ಅಂತರಾಷ್ಟ್ರೀಯ ನ್ಯಾಯಾಲಯ, ಬ್ಯಾಂಕ್ ಹೀಗೆ ಎಲ್ಲೆಡೆ ನಾವು ಭಾರತೀಯರನ್ನು ಕಾಣಬಹುದು. ಇದೀಗ ಮತ್ತೆ ಇಂತಹ ಉನ್ನತ ಸ್ಥಾನದತ್ತ ಭಾರತೀಯರು ದೃಷ್ಟಿ ಹರಿಸಿದ್ದು, 2024ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯರು ಪೈಪೋಟಿ ನೀಡಲಿದ್ದಾರೆ.

ಹೌದು, ಅಮೆರಿಕದಲ್ಲಿ ನಡೆಯಲಿರುವ 2024ರ ಅಧ್ಯಕ್ಷೀಯ ಚುನಾವಣೆಗೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಅನೇಕರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ವಿಶೇಷವೆಂದರೆ ಈ ಬಾರಿ ರಿಪಬ್ಲಿಕನ್ ಪಕ್ಷದಿಂದಲೇ (Republican Presidential Nomination)ಭಾರತೀಯ ಮೂಲದ ಇಬ್ಬರು ಅಧ್ಯಕ್ಷೀಯ ಚುನಾವಣೆಯ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ‘ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನಾನೂ ಕೂಡ ಸ್ಪರ್ಧಿ ಎಂದು ಸೌತ್ ಕರೊಲಿನಾದ ಮಾಜಿ ಗವರ್ನರ್, ವಿಶ್ವಸಂಸ್ಥೆಯ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

51 ವರ್ಷದ ನಿಕ್ಕಿ ಹ್ಯಾಲೆ ಮಂಗಳವಾರ ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದು, ಅಮೆರಿಕದ ಅಧ್ಯಕ್ಷೀಯ ಸ್ಥಾನದ ಚುನಾವಣೆಗೆ ತಾವು ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಈ ಮೂಲಕ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ 2024ರಲ್ಲಿ ಮತ್ತೊಮ್ಮೆ ಸ್ಪರ್ಧೆ ಮಾಡಲು ಬಯಸಿರುವ 76 ವರ್ಷದ ಡೊನಾಲ್ಡ್ ಟ್ರಂಪ್ ಅವರಿಗೆ ನಿಕ್ಕಿ ಹ್ಯಾಲೆ ಮೊದಲ ‌ಸ್ಪರ್ಧಿಯಾಗಿದ್ದಾರೆ. ವಿಡಿಯೊ ಸಂದೇಶದಲ್ಲಿ ತಮ್ಮ ಸ್ಪರ್ಧೆಯನ್ನು ಪ್ರಕಟಿಸಿದ ಅವರು, ದೇಶದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಹೊಸ ಪೀಳಿಗೆಯ ನಾಯಕತ್ವ ಅಗತ್ಯವಿದೆ. ಹೀಗಾಗಿ ತಾವು ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ಈ ಹಿಂದೆ ಟ್ರಂಪ್ ನೇತೃತ್ವದ ಸಂಪುಟದಲ್ಲಿ ಅಧಿಕಾರಿಯಾಗಿದ್ದ ಅವರು, ತಾವು ಟ್ರಂಪ್ ಅವರ ವಿರುದ್ಧ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಯಾಗುವುದಿಲ್ಲ ಎಂದು ಹಿಂದೆ ಹೇಳಿದ್ದರು. ಆದರೆ, ಈಗ ಮನಸ್ಸು ಬದಲಾಯಿಸಿದ್ದಾರೆ. ದೇಶದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಹೊಸ ಪೀಳಿಗೆಯ ನಾಯಕತ್ವ ಅಗತ್ಯವಿದೆ ಎಂದು ಹೇಳಿದ್ದಾರೆ. ಒಂದು ವೇಳೆ ನಿಕ್ಕಿ ಹ್ಯಾಲೆ ಏನಾದರೂ ಚುನಾಯಿತರಾದರೆ, ಅವರು ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಹಾಗೂ ಭಾರತೀಯ ಮೂಲದ ಮೊದಲ ಅಮೆರಿಕ ಅಧ್ಯಕ್ಷರಾಗುತ್ತಾರೆ.

ಇನ್ನು ಭಾರತ ಮೂಲದ ಅಮೆರಿಕದ ನಿವಾಸಿ, ಉದ್ಯಮಿ ವಿವೇಕ್‌ ರಾಮಸ್ವಾಮಿ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಚಿಂತನೆ ನಡೆಸಿದ್ದು ಈ ಬಗ್ಗೆ ಶೀಘ್ರವೇ ನಿಲುವು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 37 ವರ್ಷದ ವಿವೇಕ್‌ ರಾಮಸ್ವಾಮಿ ಅವರು ಕೋಟ್ಯಧಿಪತಿ. ನ್ಯೂಯಾರ್ಕ್‌ ನಿಯತಕಾಲಿಕವು ಇವರನ್ನು ‘ಸಿಇಒ ಆಪ್‌ ಆ್ಯಂಟಿ ವೋಕ್‌ ಐಎನ್‌ಸಿ’ ಎಂದು ಬಣ್ಣಿಸಿತ್ತು. ಪ್ರಸ್ತುತ ಇವರು ಅಮೆರಿಕದ ಅಯೋವಾ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಸ್ಪರ್ಧೆಗೆ ಪೂರ್ವಭಾವಿಯಾಗಿ ವಸ್ತುಸ್ಥಿತಿ ಅರಿಯುವ ಯತ್ನದಲ್ಲಿದ್ದಾರೆ. ಅವರು ಈಗ ಅಧ್ಯಕ್ಷೀಯ ಸ್ಥಾನದ ಚುನಾವಣೆ ಕುರಿತು ಗಮನಹರಿಸಿದ್ದಾರೆ. ಸದ್ಯ ಉದ್ಯಮವನ್ನು ಮುನ್ನಡೆಸುವ ಅಗತ್ಯವನ್ನು ಅವರು ಕಾಣುತ್ತಿಲ್ಲ. ಬದಲಿಗೆ, ಅಮೆರಿಕನ್ನರ ಉತ್ಸಾಹ, ಸ್ಥಳೀಯ ಸಂಸ್ಕೃತಿ ಮರುಸ್ಥಾಪನೆಗೆ ಒತ್ತು ನೀಡುವ ಅಭಿಯಾನವನ್ನು ನಡೆಸಲು ಉತ್ಸುಕರಾಗಿದ್ದಾರೆ ಎಂದು ವರದಿ ತಿಳಿಸಿದೆ.

Leave A Reply

Your email address will not be published.