ದಾಸವಾಳ ಗಿಡವನ್ನು ಈ ರೀತಿಯಾಗಿ ಬೆಳೆಸಿ, ಆಮೇಲೆ ನೋಡಿ ಅದರ ಪ್ರಯೋಜನ !

ದಾಸವಾಳ ಮನೆಯ ಗಾರ್ಡನ್ ನಲ್ಲಿ ಇದ್ದರೆ ಮನೆಗೆ ಕಳೆ ಹೆಚ್ಚಾಗುತ್ತದೆ. ಮನೆಗೆ ಬರುವ ವ್ಯಕ್ತಿಗಳನ್ನು ತನ್ನ ಬಣ್ಣದಿಂದ ಆಕರ್ಷಿಸುತ್ತದೆ. ಕೆಂಪು, ಬಿಳಿ ಸೇರಿದಂತೆ ವಿಧ ವಿಧವಾದ ಬಣ್ಣಗಳನ್ನು ಒಳಗೊಂಡಿದೆ ಈ ದಾಸವಾಳ. ಇತ್ತೀಚೆಗೆ ದಾಸವಾಳ ಗಿಡದ ಕಸಿ ಮಾಡೋದ್ರಿಂದ ವಿವಿಧ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಈ ದಾಸವಾಳ ನೋಡೋದಿಕ್ಕೆ ಮಾತ್ರ ಸುಂದರವಾಗಿರದೆ ಇದರಿಂದ ಆರೋಗ್ಯ ಪ್ರಯೋಜನಗಳೂ ಇವೆ.
ಅಲ್ಲದೆ ಮುಖದ ಕಾಂತಿ ಹೆಚ್ಚಾಗಲು, ಕೂದಲಿನ ಬೆಳವಣಿಗೆಗೆ ಕೂಡ ಇದು ಸಹಕಾರಿಯಾಗಿದೆ. ಒಟ್ಟಾರೆ ದಾಸವಾಳ ಬಹುಪ್ರಯೋಜನಕಾರಿ ಎಂದೇ ಹೇಳಬಹುದು. ಇನ್ನು ಈ ದಾಸವಾಳವನ್ನು ನೆಡಲು ಕೆಲವು ವಿಧಾನಗಳಿವೆ, ಹಾಗೆ ನೆಟ್ಟರೆ ಹೂಗಳ ರಾಶಿಯಿಂದ ತುಂಬಿ ತುಳುಕುತ್ತೆ ಎಂದು ಹೇಳಲಾಗುತ್ತದೆ.

ಗಾರ್ಡನ್ ನಲ್ಲಿ ಹೆಚ್ಚು ದಾಸವಾಳ ಗಿಡ ಬೆಳೆಸಬೇಕು ಅಂದ್ರೆ ಗಿಡವನ್ನು ಕತ್ತರಿಸಿ, ಹಲವು ಹೊಸ ಗಿಡಗಳನ್ನು ನೆಡಬಹುದು.
ಹಾಗೇ ಹಲವು ರೀತಿಯಲ್ಲಿ ದಾಸವಾಳ ಸಸ್ಯ ಬೆಳೆಯಬಹುದು.
ಹೇಗೆ ಬೆಳೆಸುವುದು? ವಿಧಾನ ಇಲ್ಲಿದೆ.

• ದಾಸವಾಳ ಗಿಡದ ಶಾಖೆಯ ಕೆಳಗೆ ಜೋಡಿಸಲಾದ 4-5 ಎಲೆಗಳನ್ನು ತೆಗೆದುಹಾಕಿ. ನಂತರ ದಾಸವಾಳ ಗಿಡವನ್ನು ಕತ್ತರಿಸಿ, ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಈ ಕತ್ತರಿಸಿದ ತುಂಡುಗಳನ್ನು ಅರ್ಧದಷ್ಟು ನೀರಿನಲ್ಲಿ ಅದ್ದಿ, ಬೆಳಕು ಬೀಳುವ ಜಾಗದಲ್ಲಿ ಇಡಿ. ಇದಾದ 3-4 ವಾರಗಳಲ್ಲಿ ಕತ್ತರಿಸಿದ್ದ ದಾಸವಾಳದ ಗಿಡದಲ್ಲಿ ಬೇರು ಬರಲು ಪ್ರಾರಂಭವಾಗುತ್ತದೆ. ನಂತರ ಈ ಕಟಿಂಗ್ ಅನ್ನು ಗ್ರೋ ಬ್ಯಾಗ್ ಅಥವಾ ಮಡಕೆಗೆ ಕಸಿ ಮಾಡಬಹುದು.

• ಇದಲ್ಲದೆ, ಕತ್ತರಿಸಿದ ದಾಸವಾಳ ಗಿಡವನ್ನು ನೇರವಾಗಿ ಮಡಕೆಯಲ್ಲಿ ನೆಡಬಹುದು. ಇದಕ್ಕೆ ಮಡಕೆ ಪೂರ್ತಿ ಮಣ್ಣು ತುಂಬಿಸಿ, ನಂತರ ಕತ್ತರಿಸಿದ ದಾಸವಾಳ ಗಿಡವನ್ನು ಮಣ್ಣಿನಲ್ಲಿ ಹೂತು, ಸ್ವಲ್ಪ ನೀರನ್ನು ಸಿಂಪಡಿಸಿ. ಇದಾದ ಕೆಲವೇ ದಿನಗಳಲ್ಲಿ ಗಿಡದಲ್ಲಿ ಹೊಸ ಎಲೆಗಳು ಚಿಗುರಲು ಪ್ರಾರಂಭಿಸುತ್ತವೆ.

• ಇನ್ನು ದಾಸವಾಳದ ಬೀಜಗಳಿಂದ ಕೂಡ ದಾಸವಾಳ ಗಿಡವನ್ನು ಬೆಳೆಯಬಹುದು. ಇದಕ್ಕೆ ಗ್ರೋ ಬ್ಯಾಗ್ ಬಳಸಬೇಕು. ಬೆಳೆಯುವ ಪೋಟ್ ಗೆ ಮಣ್ಣನ್ನು ತುಂಬಿರಿ, ನಂತರ ದಾಸವಾಳದ ಬೀಜಗಳನ್ನು ಅದರ ಮೇಲೆ ಹಾಕಿ. ಹಾಗೆಯೇ ಅದರ ಮೇಲೆ ಸ್ವಲ್ಪ ನೀರು ಸಿಂಪಡಿಸುತ್ತಲೇ ಇರಿ. ಹೀಗೆ ಮಾಡಿದರೆ ದಾಸವಾಳದ ಸಸ್ಯವು ಬೆಳೆಯಲು ಪ್ರಾರಂಭ ಆಗುತ್ತದೆ.

• ಹಾಗೇ ದಾಸವಾಳದ ಗಿಡ ಕತ್ತರಿಸಿದ ನೆಡುವಾಗ, ಮಣ್ಣಿಗೆ ತಿಳಿ ಮರಳನ್ನು ಸೇರಿಸಿ, ಇದು ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳುತ್ತದೆ ಮತ್ತು ಸಸ್ಯವು ಬೆಳೆಯಲು ಸಹಕಾರಿಯಾಗಿದೆ. ಈ ದಾಸವಾಳ ಗಿಡವನ್ನು ಬೆಳೆಯಲು ಉತ್ತಮ ಸಮಯ ಯಾವುದೆಂದರೆ ಮಾರ್ಚ್ ನಿಂದ ಅಕ್ಟೋಬರ್ವರೆಗೆ ಉತ್ತಮ ಸಮಯವಾಗಿದೆ.

• ಇದರ ಆರೈಕೆ ಹೇಗೆ ಮಾಡಬೇಕೆಂದರೆ, ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ಸೂರ್ಯನ ಬೆಳಕು ಬೇಕು. ಪೌಷ್ಠಿಕಾಂಶಕ್ಕೆ ನಿಯಮಿತವಾಗಿ ಗೊಬ್ಬರಗಳನ್ನು ಹಾಕಬೇಕು. ಹಾಗೆಯೇ ದಾಸವಾಳದ ಒಣ ಎಲೆಗಳು ಮತ್ತು ಹಾನಿಗೊಳಗಾದ ಭಾಗಗಳನ್ನು ಕತ್ತರಿಸಿ ತೆಗೆಯಿರಿ. ಈ ರೀತಿಯಾಗಿ ದಾಸವಾಳ ಬೆಳೆದರೆ ಯಾವುದೇ ತೊಂದರೆ ಇಲ್ಲದೆ ಚೆನ್ನಾಗಿ ಬೆಳೆಯುತ್ತದೆ. ಸುಂದರ ಹೂವುಗಳನ್ನು ನೀಡುತ್ತದೆ.

Leave A Reply

Your email address will not be published.