ವಾಹನ ಚಾಲನೆ ವೇಳೆ ಇರಬೇಕಾದ ದಾಖಲೆಗಳ ಬಗ್ಗೆ ಗೃಹ ಸಚಿವರು ಹೇಳಿದ್ದೇನು?
ಸರ್ಕಾರ ಎಷ್ಟೇ ರೂಲ್ಸ್ ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ, ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ ಅನೇಕ ಪ್ರಸಂಗಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಇವರ ನಡುವೆ ಸುಮ್ಮನೆ ದಂಡ ಯಾಕಪ್ಪಾ ಕಟ್ಟೋದು ಎಂದುಕೊಂಡು ವಾಹನ ಚಾಲನೆ ಮಾಡುವಾಗ ಮಾತ್ರವಲ್ಲದೆ ಎಲ್ಲ ದಾಖಲೆಗಳನ್ನು ಸೇಫ್ ಆಗಿ ಇಟ್ಟುಕೊಂಡು ಡ್ರೈವ್ ಮಾಡೋರು ಕೂಡ ಇದ್ದಾರೆ.
ಸಾಮಾನ್ಯವಾಗಿ ವಾಹನ ಚಾಲನೆ ಮಾಡುವಾಗ ಯಾವುದೆಲ್ಲ ದಾಖಲೆಗಳು ನಮ್ಮ ಜೊತೆಗಿರಬೇಕು ಎಂಬ ಗೊಂದಲ ಹೆಚ್ಚಿನವರಿಗೆ ಕಾಡುತ್ತದೆ. ಎಷ್ಟೋ ಬಾರಿ ಗೊತ್ತಿದ್ದರೂ ಮರೆತು ಬಂದು ಸಂಚಾರಿ ಪೋಲೀಸರ ಕೈಯಲ್ಲಿ ತಗಲಾಕಿಕೊಂಡು ಫೈನ್ ಕಟ್ಟುವಾಗ ಇದು ಬೇಕಿತ್ತಾ ಎಂದು ತಮ್ಮನ್ನೇ ಹಳಿದುಕೊಳ್ಳುವವರು ಕೂಡ ಇದ್ದಾರೆ. ಇದೀಗ, ಗೃಹ ಸಚಿವ ಆರಗ ಜ್ಞಾನೇಂದ್ರರವರು ವಾಹನ ಚಾಲನೆ ವೇಳೆ ಯಾವ ದಾಖಲೆಗಳಿರಬೇಕು ಎಂಬ ಜನರ ಗೊಂದಲಕ್ಕೆ ತೆರೆ ಎಳೆಯಲು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಾಹನ ಚಾಲನೆ ಮಾಡುವಾಗ ಚಾಲಕರು ಚಾಲನಾ ಪರವಾನಗಿ, ನೋಂದಣಿ ಪ್ರಮಾಣ ಪತ್ರ, ಎಮಿಷನ್ ಟೆಸ್ಟ್ ಸರ್ಟಿಫಿಕೆಟ್/ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್ , ವಿಮಾ ಪ್ರಮಾಣ ಪತ್ರ ಹಾಗೂ ಸಾರಿಗೆ ವಾಹನಗಳ ಸಂದರ್ಭದಲ್ಲಿ ಫಿಟ್‌ನೆಸ್ ಪ್ರಮಾಣಪತ್ರ, ಪರವಾನಗಿ ಮತ್ತು ತೆರಿಗೆ ಪಾವತಿಸಿದ ಪ್ರಮಾಣ ಪತ್ರ ಈ ಎಲ್ಲ ದಾಖಲೆಗಳ ಮೂಲ ಪ್ರತಿ ಇಲ್ಲವೇ ಡಿಜಿಲಾಕರ್‌ನಲ್ಲಿ ಇಟ್ಟುಕೊಂಡಿರಬೇಕು. ಇದರ ಜೊತೆಗೆ ಎಂಪರಿವಾಹನ್ ಅಪ್ಲಿಕೇಷನ್‌ನಲ್ಲಿಯೂ ದಾಖಲೆಗಳನ್ನು ಸಂಚಾರಿ ಪೊಲೀಸರಿಗೆ ತೋರಿಸಬಹುದು.
ಹೇಳಿ ಕೇಳಿ ಇದು ಡಿಜಿಟಲ್ ಯುಗ.ನೀವು ಎಲ್ಲ ದಾಖಲೆಗಳನ್ನು ಒಯ್ಯುವ ವೇಳೆ ಮರೆತು ಹೋಗಿ ಪೇಚಿಗೆ ಸಿಲುಕುವ ಬದಲಿಗೆ ಡಿಜಿಲಾಕರ್ ಮೂಲಕ ದಾಖಲೆಗಳನ್ನು ಇಟ್ಟುಕೊಂಡರೆ ಒಳ್ಳೆಯದು. ಆಗ ಮೂಲ ದಾಖಲೆಗಳನ್ನು ಒಟ್ಟಿಗೆ ಒಯ್ಯುವ ತಾಪತ್ರಯಬಾರದು.