ಕಪ್ಪೆಯ ಸಾರು ಮಾಡಿ ತನ್ನ ಕಂದಮ್ಮಗಳಿಗೆ ಕೊಟ್ಟ ತಂದೆ | ಮಗಳು ಸಾವು, ಏನಿದು ಘಟನೆ?
ಕೋಪದಿಂದ ಆಗುವ ಅವಾಂತರದ ಬಗ್ಗೆ ವಿವರಿಸಬೇಕಾಗಿಲ್ಲ. ಎಷ್ಟೋ ಸಣ್ಣ ಪುಟ್ಟ ವಿಷಯಗಳು ಕೋಪದ ಮಹಿಮೆಗೆ ಕೊಲೆಯಲ್ಲಿ ಅಂತ್ಯ ಕಂಡಿದ್ದು ಕೂಡ ಇದೆ. ಮನುಷ್ಯರ ಮೇಲೆ ಕೋಪವನ್ನು ತೋರಿಸುವುದು ಹೆಚ್ಚಿನ ಕಡೆಗಳಲ್ಲಿ ನಡೆಯುವಂತಹದ್ದೇ. ಹಾಗೆಂದು ಮನೆಗೆ ಒಂದು ಕಪ್ಪೆ ಎಂಟ್ರಿ ಕೊಟ್ಟರೆ ನೀವು ಕೋಪದಲ್ಲಿ ಏನು ಮಾಡಬಹುದು??ಅಬ್ಬಬ್ಬಾ ಎಂದರೆ ಸಿಟ್ಟಲ್ಲೇ ಮಂಡೂಕವ ಹಿಡಿದು ಎಸೆದು ಬಿಡಬಹುದು ಇಲ್ಲವೇ ಕೊಂದುಬಿಡಬಹುದು. ಆದ್ರೆ ಕಪ್ಪೆಯನ್ನು ಕೊಂದು ಅದನ್ನೇ ನಳಪಾಕ ಮಾಡಿ ತಿನ್ನುತ್ತಿರಾ? ಖಂಡಿತ ಇಲ್ಲ !!! ಆದ್ರೆ, ಇಲ್ಲೊಂದು ಕಡೆ ಮನೆಗೆ ಕಪ್ಪೆ ಬಂತೆಂದು ಅದನ್ನು ಕೊಂದು ಸಾರು ಮಾಡಿ ಸೇವಿಸಿದ ಪರಿಣಾಮ ಏನು ಅರಿಯದ ಮುಗ್ಧ ಜೀವವೊಂದು ಅಸುನೀಗಿದ ಘಟನೆ ನಡೆದಿದೆ.
ಹೌದು!!! ಕೋಪ ಯಾರಿಗೆ ಬರಲ್ಲ?? ಹಾಗೆಂದು ಕೋಪದ ಕೈಗೆ ಬುದ್ಧಿ ಕೊಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ನಿದರ್ಶನ ಎಂಬಂತೆ ಒಡಿಶಾದ ಕಿಯೋಂಜರ್ (Keonjhar) ಜಿಲ್ಲೆಯಲ್ಲಿ ಮನೆಗೆ ಕಪ್ಪೆ ಬಂದದ್ದನ್ನು ಕಂಡು ಸಿಟ್ಟಿಗೆದ್ದ ಬುಡಕಟ್ಟು ಸಮುದಾಯದ ಆಸಾಮಿಯೊಬ್ಬ ಅದನ್ನು ಹೊಡೆದು ಕೊಂದು ಅದನ್ನೇ ಸಾರು ಮಾಡಿದ್ದು, ಇದನ್ನು ತಿಂದು ಮಗು ಆರು ವರ್ಷದ ಸುಮಿತ್ರಾ ಮುಂಡಾ ಮೃತಪಟ್ಟ ಘಟನೆ ವರದಿಯಾಗಿದೆ.
ಕಿಯೋಂಜರ್ ಜಿಲ್ಲೆಯ ಜೋಡಾ ಬ್ಲಾಕ್ನಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಗುರುವಾರ ಸಂಜೆ 40 ವರ್ಷದ ಬುಡಕಟ್ಟು ಸಮುದಾಯದ ಮುನ್ನ ಮುಂಡಾ ಅವರ ಮನೆಯೊಳಗೆ ಕಪ್ಪೆಯೊಂದು ಬಂದು ಬಿಟ್ಟಿದೆ. ಇದನ್ನು ಕಂಡು ಸಿಟ್ಟುಗೊಂಡ ಮುನ್ನ ಆ ಕಪ್ಪೆಯನ್ನು ಕೊಂದು ಹಾಕಿದ್ದು, ಮನೆಯ ಮಹಿಳೆಯರು ಅದನ್ನು ಸಾರು ಮಾಡಿದ್ದಲ್ಲದೆ ಮನೆ ಮಂದಿಯೆಲ್ಲಾ ಸೇವಿಸಿದ್ದಾರೆ. ಇದು ಮೂರ್ಖತನದ ಪರಮಾವಧಿಯೋ ಅಥವಾ ಮುಗ್ಧತೆಯೋ ತಿಳಿಯದು. ಆದರೆ, ಇದನ್ನು ತಿಂದ ಸ್ವಲ್ಪ ಹೊತ್ತಿನಲ್ಲಿ ಮನೆಯ ಮಕ್ಕಳು ವಾಂತಿ ಮಾಡಲು ಆರಂಭಿಸಿದ್ದಾರೆ. ಅಷ್ಟೆ ಅಲ್ಲದೇ ಪ್ರಜ್ಞೆ ಕೂಡ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಮಕ್ಕಳನ್ನು ಶುಕ್ರವಾರ ಬೆಳಗ್ಗೆ ಕಿಯೋಂಜರ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಆರು ವರ್ಷದ ಬಾಲಕಿ ಸುಮಿತ್ರಾ ಮೃತಪಟ್ಟಿದ್ದು, ಇದಲ್ಲದೆ, 4 ವರ್ಷದ ಮಗು ಮುನ್ನಿಯ ಪರಿಸ್ಥಿತಿ ಕೂಡ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕಿಯೋಂಜರ್ನಿಂದ 70 ಕಿಲೋ ಮೀಟರ್ ದೂರದಲ್ಲಿರುವ ಬಮೆಬರಿ (Bamebari) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕುಗ್ರಾಮವಾದ ಗುರುಡ (Guruda) ಎಂಬ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಬಾಲಕಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಮೆಬೇರಿ ಪೊಲೀಸ್ ಠಾಣೆಯ ಪೊಲೀಸರು ಮಗುವಿನ ಸಾವನ್ನು ಅಸಹಜ ಸಾವು ಎಂದು ಪರಿಗಣಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಕಪ್ಪೆಗಳ ದೇಹದಲ್ಲಿರುವ ಪರೋಟಿಡ್ ಗ್ರಂಥಿ (parotid gland) ವಿಷವನ್ನು ಒಳಗೊಂಡಿರುತ್ತದೆ. ಪರಭಕ್ಷಕಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಿಟ್ಟಿನಲ್ಲಿ ಇರುವಂತಹದ್ದಾಗಿದ್ದು, ಹೀಗಾಗಿ ಕಪ್ಪೆಯನ್ನು ತಿನ್ನುವವರ ಮೇಲೆ ಪ್ರಭಾವ ಬೀರುತ್ತದೆ. ಇದರ ಜೊತೆಗೆ ಕೆಲವು ಕಪ್ಪೆಗಳ ಚರ್ಮವೂ ಕೂಡ ವಿಷಕಾರಿಯಾಗಿರುತ್ತದೆ ಎಂದು ಇಲ್ಲಿನ ವಿಎಸ್ಎಸ್ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನ ಸಂಸ್ಥೆಯ ಸಮುದಾಯ ಔಷಧ ವಿಭಾಗದಲ್ಲಿ ಪ್ರೊಫೆಸರ್ ಒಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.