ಶಂಕಿತ ಉಗ್ರ ಆರಿಫ್ ವಿಚಾರಣೆಯಲ್ಲಿ ಬಯಲಾಯ್ತು ಶಾಕಿಂಗ್ ವಿಚಾರ!
ದೇಶದಲ್ಲಿ ತೆರೆಮರೆಯಲ್ಲಿ ದೇಶ ವಿರೋಧಿ ಚಟುವಟಿಕೆಗಳು ಗರಿಗೆದರಿ ಎಗ್ಗಿಲ್ಲದೆ ನಡೆಯುತ್ತಿದ್ದು ಖಾಕಿ ಪಡೆ ಜೊತೆಗೆ ಎನ್ಐಎ ತಂಡಗಳು ಈ ಚಟುವಟಿಕೆಯಲ್ಲಿ ಭಾಗಿಯಾಗಿರುವವರ ಹೆಡೆ ಮುರಿ ಕಟ್ಟುವಲ್ಲಿ ನಿರತರಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಬೆನ್ನಲ್ಲೇ ಇತ್ತೀಚೆಗೆ ಆರೀಫ್ ಎಂಬ ಶಂಕಿತ ಉಗ್ರನನ್ನು ಬಂಧಿಸಲಾಗಿದ್ದು, ಸದ್ಯ ಇವನ ವಿಚಾರಣೆ ವೇಳೆ ಅನೇಕ ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.
ಆರೀಫ್ ಬಂಧನ ಬೆನ್ನಲ್ಲೆ ಎನ್ಐಎ ಅಧಿಕಾರಿಗಳು ಹೆಚ್ಚಿನ ತನಿಖೆ ಚುರುಕುಗೊಳಿಸಿದ್ದಾರೆ. ಬೆಂಗಳೂರಿಗೆ ಎರಡು ವರ್ಷದ ಹಿಂದೆ ಬಂದು ನೆಲೆಸಿದ್ದ ಆರೀಫ್ ಉಗ್ರ ಸಂಘಟನೆಗಳಾದ ಆಲ್ ಖೈದಾ ಹಾಗೂ ಐಸಿಸ್ ಸೇರುವ ಅಭಿಲಾಷೆ ಹೊಂದಿದ್ದ ಎನ್ನಲಾಗಿದೆ. ಇದರ ನಡುವೆ ಮತ್ತೊಂದು ಮಾಹಿತಿ ಲಭ್ಯವಾಗಿದ್ದು, ಎನ್ಐಎ ತನಿಖೆ ವೇಳೆ ಆರೀಫ್ ಪ್ರಕರಣವು ಇನ್ನೊಂದು ಪ್ರಕರಣದ ಜೊತೆಗೆ ಸಾಮ್ಯತೆ ಇರುವುದು ಕಂಡು ಬಂದಿದೆ ಎನ್ನಲಾಗಿದೆ.
ತಿಲಕ್ ನಗರದಲ್ಲಿ ದಾಖಲಾದ ಪ್ರಕರಣದ ಆಧಾರದ ಮೇಲೆ ರಾಷ್ಟ್ರೀಯ ತನಿಖಾ ತಂಡಗಳು ಆರೀಫ್ ಮೇಲೆ ಕಣ್ಣಿಟ್ಟಿದ್ದು, ಆರೀಫ್ ಮೊಬೈಲ್ ಮತ್ತು ಲ್ಯಾಪ್ ಟಾಪ್ ನಲ್ಲಿ ಮತ್ತಷ್ಟು ಗೌಪ್ಯ ಮಾಹಿತಿ ಇರುವ ಅನುಮಾನ ದಟ್ಟವಾಗಿದೆ.ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ನಲ್ಲಿ ತಿಲಕ್ ನಗರದಲ್ಲಿ ದಾಖಲಾದ ಪ್ರಕರಣದ ಜೊತೆಗೆ ಆರೀಫ್ ಪ್ರಕರಣ ಸಾಮ್ಯತೆ ಇದೆ ಎನ್ನಲಾಗಿದ್ದು, ಅಖ್ತರ್ ಹುಸೇನ್ ಮತ್ತು ಜುಬಾ ನಂತೆ ಆರೀಫ್ ಕೂಡ ಸೋಷಿಯಲ್ ಮೀಡಿಯಾದ ಮುಖಾಂತರ ಗೌಪ್ಯ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ವಿದೇಶಿ ಹ್ಯಾಂಡ್ಲರ್ಸ್ ಗಳೊಂದಿಗೆ ಸಂಪರ್ಕ ಹೊಂದಿದ್ದು ಅವರೊಂದಿಗೆ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಇದೆಲ್ಲದರ ಹೊರತಾಗಿ, ಅಲ್ ಖೈದಾಗೆ ಹಣ ನೀಡುತ್ತಿದ್ದ ಎನ್ನಲಾಗಿದೆ. ಆರೀಫ್ ತಿಂಗಳಿಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಹಣ ದುಡಿಯುತಿದ್ದನ್ನಲ್ಲದೆ ಐವತ್ತು ಸಾವಿರ ಹಣ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಅಖ್ತರ್ ಹುಸೇನ್ ಹಾಗೂ ಜುಬಾ ಇಬ್ಬರು ಕೂಡ ಆಲ್ ಖೈದಾ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದು ಉಗ್ರ ಚಟುವಟಿಕೆಗಳಿಗೆ ನಂಟು ಹೊಂದಿದ್ದು ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ಪ್ರೇರೇಪಿಸುವಲ್ಲಿ ತೊಡಗಿದ್ದರು ಎನ್ನಲಾಗಿದೆ. ಅಷ್ಟೆ ಅಲ್ಲದೇ, ಯುವಕರಿಗೆ ಹಿಂಸೆ ನೀಡಿ ಉಗ್ರ ಕೃತ್ಯದ ಬಗ್ಗೆ ಪ್ರಚೋದನೆ ನೀಡುತ್ತಿದ್ದರು ಎನ್ನಲಾಗಿದೆ. ಆರೀಫ್ ಕೂಡ ಗೌಪ್ಯವಾಗಿ ಸೋಷಿಯಲ್ ಮೀಡಿಯಾ ಮೂಲಕ ಯುವಕರನ್ನು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಚೋದನೆ ನೀಡುತ್ತಿದ್ದ ಎನ್ನಲಾಗಿದೆ. ಬೇರೆ ಬೇರೆ ಸೋಷಿಯಲ್ ಮೀಡಿಯಾದ ಮುಖಾಂತರ ಒಬ್ಬರಿಗೊಬ್ಬರು ಸಂಪರ್ಕವಿಲ್ಲದೆ ಇದ್ದರೂ ಕೂಡ ತಮ್ಮ ಕಾರ್ಯ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಶಾರಿಕ್, ಮಾಝ್, ಆಖ್ತರ್ ಹುಸೇನ್, ಜುಬಾ, ಆರೀಫ್ ಎಲ್ಲರೂ ಒಂದೆ ಸಂಘಟನೆ ಸೇರಿಕೊಂಡಿರುವ ಸಂದೇಹ ಭುಗಿಲೆದ್ದಿದ್ದು, ಶಾರಿಕ್ ಸಹ ಅಲ್ ಖೈದಾ ಸಂಘಟನೆಗೆ ಸೇರಿಕೊಂಡಿದ್ದ. ಆತ ಕುಕ್ಕರ್ ಬ್ಲಾಸ್ಟ್ ಮಾಡುವ ಬಗ್ಗೆ ಮೊದಲೇ ಪೂರ್ವ ತಯಾರಿ ತರಬೇತಿ ಪಡೆದಿದ್ದ ಎನ್ನಲಾಗಿದೆ. ಸದ್ಯ ಬಂಧಿತ ಆ ರೋಪಿಗಳ ಕೇಸ್ ಅನ್ನು ಎನ್ ಐಎ ತನಿಖೆ ನಡೆಸುತ್ತಿದೆ. ಇನ್ನೂ ಹೆಚ್ಚಿನ ಮಂದಿ ಆಲ್ ಖೈದಾ ನಂಟು ಹೊಂದಿರುವ ಸಾಧ್ಯತೆ ದಟ್ಟವಾಗಿದೆ. ಇವರಲ್ಲಿ ಅಖ್ತರ್ ಹುಸೇನ್ ಅವಿದ್ಯಾವಂತನಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿಯಾದ ವಿಡಿಯೋ, ಪೋಸ್ಟ್ ಸಂದೇಶ ರವಾನಿಸಿ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ಭಾಗಿಯಾಗಲು ಪ್ರಚೋದನೆ ನೀಡುತ್ತಿದ್ದ ಎನ್ನಲಾಗಿದೆ.
ಇದರ ಜೊತೆಗೆ ತನ್ನ ವರ್ತನೆ ಜೊತೆಗೆ ಚಲನವಲನದ ಮೂಲಕ ಯಾರಿಗೂ ಸಂದೇಹ ಬಾರದ ರೀತಿಯಲ್ಲಿ ಪುಡ್ ಡೆಲಿವರಿ ಬಾಯ್ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆಖ್ತರ್ ಹುಸೇನ್, ಉಗ್ರ ಸಂಘಟನೆ ಬೇಸಿಕ್ ಕೆಲಸಗಳ ಅನುಷ್ಠಾನ ಗೊಳಿಸುವುದು ಆತನ ಕೆಲಸವಾಗಿತ್ತು.ಇದೆ ಕೆಲಸದಲ್ಲಿ ಆರೀಫ್ ಕೂಡ ತೊಡಗಿಸಿಕೊಂಡಿದ್ದ ಎಂಬ ರೋಚಕ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಇವರಿಬ್ಬರ ಪ್ರಕರಣದಲ್ಲಿ ಸಾಮ್ಯತೆ ಕಂಡು ಬಂದಿದ್ದು, ಆರೀಫ್ ಉನ್ನತ ವಿದ್ಯಾಭ್ಯಾಸದ ಹಿನ್ನಲೆ ಹೊಂದಿದ್ದರು ಕೂಡ ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿರುವುದು ವಿಪರ್ಯಾಸ. ಸದ್ಯ ಎನ್ ಐಎ ತಂಡ ತನಿಖೆ ನಡೆಸುತ್ತಿದ್ದು, ಇನ್ನಷ್ಟು ರೋಚಕ ಮಾಹಿತಿಗಳು ಹೊರ ಬೀಳಬೇಕಾಗಿದೆ.