ಈ ಮೈಲಿಗಲ್ಲಿನಲ್ಲಿ ಕನ್ನಡಕ್ಕೂ ಇಂಗ್ಲೀಷ್‌ಗೂ ಇತ್ತು ಬಹಳ ದೂರ ! ಏನಿದು ಎಡವಟ್ಟು?
ಹಿಂದೆಲ್ಲಾ ಪ್ರಯಾಣ ಮಾಡಬೇಕಾದರೆ ಮೈಲಿಗಲ್ಲಿನ ಸಹಾಯದಿಂದ ಊರಿಗೆ ಎಷ್ಟು ಕಿ.ಮೀ ಇರಬಹುದು, ಎಷ್ಟು ದೂರ ಇದೆ. ಇವೆಲ್ಲಾ ತಿಳಿಯುತ್ತಿತ್ತು. ಆದರೆ ಇದೀಗ ಸ್ಮಾರ್ಟ್ ಫೋನ್ ಬಳಕೆಯಿಂದ ಅದರಲ್ಲೇ ಎಲ್ಲಾ ಮಾಹಿತಿ ಲಭ್ಯವಾಗುತ್ತದೆ. ಟೆಕ್ನಾಲಜಿ ಮುಂದುವರೆದರೂ ಹಿಂದಿನ ಮೈಲಿಗಲ್ಲು ಈಗಲೂ ಕೆಲವೊಮ್ಮೆ ಸಹಾಯಕ್ಕೆ ಬರುತ್ತದೆ. ಯಾವಾಗ ಅಂದ್ರೆ ಸರಿಯಾಗಿ ನೆಟ್ ವರ್ಕ್ ಇಲ್ಲದಾಗ, ಈ ವೇಳೆ ಪರದಾಡಬೇಕಾಗುತ್ತದೆ. ಆದರೆ ಇಂತಹ ಮೈಲಿಗಲ್ಲು ಇರೋದ್ರಿಂದ ತುಂಬಾ ಪ್ರಯೋಜನಕಾರಿಯಾಗಿದೆ.
ಸದ್ಯ ಈ ಮೈಲಿಗಲ್ಲು ವಿಚಾರದಲ್ಲೇ ಲೋಪವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮೈಲಿಗಲ್ಲಿನಲ್ಲಿ ಎಡವಟ್ಟಾಗಿದ್ದು, ರಸ್ತೆಯ ಪಕ್ಕದಲ್ಲಿದ್ದ ಮೈಲಿಗಲ್ಲಿನಲ್ಲಿ ಬರೆದಿರುವ ಕಿ.ಮೀ ತಪ್ಪಾಗಿದೆ.
ಮೈಲಿಗಲ್ಲಿನಲ್ಲಿ ಸಿಗಂದೂರು, ಕೊಲ್ಲೂರು ಮತ್ತು ಭಟ್ಕಳಕ್ಕಿರುವ ಕಿ.ಮೀ ಅಂತರವನ್ನು ಬರೆಯಲಾಗಿತ್ತು. ಆದರೆ ಕನ್ನಡ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಮೂರು ಕಿ.ಮೀ ಅಂತರ ಕಂಡುಬಂದಿತ್ತು. ಸಿಗಂದೂರಿಗೆ ಇರುವ ಅಂತರ ಸರಿಯಾಗಿದ್ದು, ಕೊಲ್ಲೂರು ಮತ್ತು ಭಟ್ಕಳ ತಾಲೂಕಿನ ಕಿ.ಮೀ ಅಂತರ ಕನ್ನಡದಲ್ಲಿ ಕ್ರಮವಾಗಿ 93 ಮತ್ತು 76 ಇದ್ದರೆ ಇಂಗ್ಲೀಷ್ ಭಾಷೆಯಲ್ಲಿ 96 ಮತ್ತು 73 ಎಂದಿದೆ.
ಈ ತಪ್ಪು ಕರ್ನಾಟಕ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ನಡೆದಿದೆ ಎಂದು ಹೇಳಲಾಗಿತ್ತು. ಈ ರೀತಿ ಆದರೆ ಪ್ರಯಾಣಿಕರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಅಲ್ಲದೆ, ಈ ತಪ್ಪನ್ನು ಸರಿಪಡಿಸುವ ಸಲುವಾಗಿ ಇದರ ಫೋಟೋವನ್ನು ಇನ್ಸ್ಟಾ ಗ್ರಾಂನಲ್ಲಿ ‘mangaloremerijaanofficial’ ಪೇಜ್ ಶೇರ್ ಮಾಡಿದ್ದು, ಪೋಸ್ಟ್ ಸಖತ್ ವೈರಲ್ ಆಗಿದೆ. ಸೋಷಿಯಲ್ಸ್ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಪೋಸ್ಟ್ ಗೆ ಕಾಮೆಂಟ್ ಮಾಡಿದ ಒರ್ವ ‘ನಾವು ಕನ್ನಡದಲ್ಲಿ ಹೋಗುವ, ಪೆಟ್ರೋಲ್ ಬೆಲೆ ಹೆಚ್ಚಿದೆಯೆಲ್ಲವೇ’ ಎಂದು ತಮಾಷೆಯಾಗಿ ಬರೆದಿದ್ದಾರೆ. ಇನ್ನು ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಇಲಾಖೆ ಮೈಲಿಗಲ್ಲನ್ನು ಸರಿಪಡಿಸಿದೆ. ಹಾಗಾಗಿ ಇದೀಗ ಕೊಲ್ಲೂರಿಗೆ 93 ಮತ್ತು ಭಟ್ಕಳಕ್ಕೆ 76 ಕಿ.ಮೀ ಎಂದು ಸರಿಪಡಿಸಿ ಬರೆಯಲಾಗಿದೆ. ಇದಿಗ ಮತ್ತೆ ಸರಿಪಡಿಸಿ ಬರೆದ ಈ ಪೋಸ್ಟ್ ನ್ನು ಸೋಷಿಯಲ್ ಮೀಡಾಯಾದಲ್ಲಿ ಶೇರ್ ಮಾಡಿದ್ದು, ಈ ಬಾರಿಯೂ ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್ ಮಾಡಿದ್ದು, ಒಬ್ಬರು ‘ ಇದು ಸೋಶಿಯಲ್ ಮೀಡಿಯಾ ಪವರ್ ’ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಸೋಷಿಯಲ್ ಮೀಡಿಯಾದಿಂದ ಒಳಿತು-ಕೆಡುಕು ಆಗುತ್ತಿದೆ. ಇದೀಗ ಒಳಿತೇ ಆಗಿದೆ.