Health Tips : 30 ವರ್ಷ ಮೇಲ್ಪಟ್ಟವರು ಈ ಆಹಾರ ಸೇವಿಸಿ, ಪರಿಣಾಮ ಕಂಡುಕೊಳ್ಳಿ!

ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಗಮನ ವಹಿಸುವುದು ಸಹಜ. ಇತ್ತೀಚಿನ ಒತ್ತಡಯುತ ಜೀವನ ಶೈಲಿಯ ಜೊತೆಗೆ ಅಪೌಷ್ಠಿಕ ಆಹಾರ ಕ್ರಮಗಳಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದನ್ನು ಗಮನಿಸಬಹುದು. ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರವು ಬಹಳ ಮುಖ್ಯವಾಗಿದ್ದು, ನಿದ್ರಾಹೀನತೆ, ಜಂಕ್ ಫುಡ್ ಸೇವನೆ ಹೀಗೆ ನಾನಾ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಿಗೆ 30 ವರ್ಷವಾಗುತ್ತಿದ್ದಂತೆ ಸಹಜವಾಗಿ ವಯಸ್ಸಾದವರಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಅದರಲ್ಲಿಯೂ ಬಿಪಿ, ಶುಗರ್ ಎಂಬ ಫ್ರೆಂಡ್ ಗಳು ಎಂಟ್ರಿ ಕೊಟ್ಟರೆ ಮುಗಿಯಿತು. ಅದಕ್ಕಾಗಿಯೇ ದಿನಂಪ್ರತಿ ಮದ್ದು ಸೇವಿಸುವ ಅನಿವಾರ್ಯತೆ ತಲೆದೋರುತ್ತದೆ. ಇದಿಷ್ಟೇ ಸಾಲದೆಂಬಂತೆ ಅಪೌಷ್ಠಿಕತೆಯ ಪರಿಣಾಮವಾಗಿ ಸಣ್ಣ ಹರೆಯದಲ್ಲೇ ರೋಗ ನಿರೋಧಕ ಶಕ್ತಿ ಕೂಡ ಕುಂಠಿತಗೊಂಡು ಕೀಲು ನೋವು, ಮೂಳೆಗಳು ದುರ್ಬಲಗೊಳ್ಳುವ ಜೊತೆಗೆ ಹೃದ್ರೋಗದ ಸಮಸ್ಯೆ ಉಂಟಾಗಲು ಕಾರಣವಾಗುತ್ತದೆ.

ಆರೋಗ್ಯವೇ ಭಾಗ್ಯ ಎಂದುಕೊಂಡು ಆರೋಗ್ಯ ಕಾಪಾಡಲು ನಾನಾ ರೀತಿಯ ಹರಸಾಹಸ ಪಡುವವರು ನಮ್ಮ ನಡುವೆ ಇದ್ದಾರೆ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬಂತೆ ರೋಗಗಳು ಬರುವ ಮೊದಲೆ ಅವುಗಳು ಬರದಂತೆ ತಡೆಯುವುದು ಸೂಕ್ತ.ಅದಕ್ಕಾಗಿ ಕೆಲ ಸರಳ ವಿಧಾನ ಅನುಸರಿಸಿ ಅರೋಗ್ಯ ಕಾಪಾಡಿಕೊಳ್ಳಬಹುದು.30 ವರ್ಷಕ್ಕಿಂತ ಮೇಲ್ಪಟ್ಟ ಜನರು ನಾಲ್ಕು ಪದಾರ್ಥಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗೆಂದ ಮಾತ್ರಕ್ಕೆ ಈ ಆಹಾರಗಳನ್ನು ಸೇವಿಸಿದರೆ ರೋಗಗಳೇ ಬಾರದು ಎನ್ನಲಾಗದು. ಇದಕ್ಕಾಗಿ ನಿಗದಿತ ಸಮಯಕ್ಕೆ ಪೋಷಕಾಂಶ ಭರಿತ ಆಹಾರ ಸೇವನೆ, ಸರಿಯಾದ ನಿದ್ರೆ ಜೊತೆಗೆ ಯೋಗ ಮಾಡುವ ಹವ್ಯಾಸ ರೂಡಿಸಿಕೊಳ್ಳೋದು ಒಳ್ಳೆಯದು.

ಹಸಿರು ಬಟಾಣಿಗಳು

ಹಸಿರು ಬಟಾಣಿಗಳು ಫೈಬರ್ ಸಮೃದ್ಧ ಆಹಾರವಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಎಲೆಗಳ ತರಕಾರಿಗಳಲ್ಲಿ ಪ್ರೋಟೀನ್, ಕಬ್ಬಿಣ ಮತ್ತು ಖನಿಜಗಳು ಸಮೃದ್ಧವಾಗಿರುತ್ತವೆ. ಬಟಾಣಿಯಲ್ಲಿ 5 ಗ್ರಾಂ ಪ್ರೋಟೀನ್ ಇದ್ದು, ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು, ತಾಮ್ರ, ರಂಜಕಗಳ ಕೊರತೆಯನ್ನು ನೀಗಿಸುತ್ತದೆ. ಈ ಎಲೆಗಳ ತರಕಾರಿಗಳಲ್ಲಿ ಪಾಲಕ್, ಸೋಯಾ ಸಬ್ಬಸಿಗೆ ಇವುಗಳೆಲ್ಲ ಸೇರಿಕೊಂಡಿರುತ್ತವೆ. ಆದರೆ ಹಸಿರು ಬಟಾಣಿಗಳನ್ನು ಸೇವಿಸುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದ್ದು, ಎಲೆ ತರಕಾರಿಗಳಿಗಿಂತ ಹೆಚ್ಚಿನ ಪ್ರೋಟೀನ್ ಗಳನ್ನು ಬಟಾಣಿ ಸೇವನೆಯಿಂದ ಪಡೆಯಬಹುದು.

ಸೋಯಾಬೀನ್ಸ್

ಸೋಯಾಬೀನ್ ನಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಹೀಗಾಗಿ, ಚಯಾಪಚಯ ವ್ಯವಸ್ಥೆಗೆ ಸಹಕರಿಸಿ ದೇಹದ ಆರೋಗ್ಯ ಕಾಪಾಡಲು ಸೋಯಾಬೀನ್ ಸೇವನೆ ಅವಶ್ಯಕ. ಸೋಯಾಬೀನ್ ನಲ್ಲಿರುವ ಪೋಷಕಾಂಶಗಳನ್ನು ಮೂಳೆಗಳನ್ನು ಬಲವಾಗಿಡಲು ಬಳಕೆ ಮಾಡಲಾಗುತ್ತದೆ. ಸೋಯಾ ಬೀನ್ಸ್ ಕಾಳುಗಳಲ್ಲಿ ” ಐಸೋಫ್ಲೇವೊನ್ ” ಎಂಬ ಅಂಶವಿರುವ ಹಿನ್ನೆಲೆ ಇದು ಮನುಷ್ಯನ ದೇಹದ ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ನೆರವಾಗುತ್ತದೆ.100 ಗ್ರಾಂ ಸೋಯಾಬೀನ್ ನಲ್ಲಿ 36.5 ಗ್ರಾಂ ಪ್ರೋಟೀನ್ ಇದ್ದು, ಪ್ರೋಟೀನ್ ಕೊರತೆ ಇರುವವರು ದಿನಕ್ಕೊಮ್ಮೆ ಸೋಯಾಬೀನ್ ಸೇವಿಸುವುದು ಒಳ್ಳೆಯದು.

ಮೀನು

ಹೃದಯ ಮತ್ತು ಮೆದುಳಿನ ಆರೋಗ್ಯವನ್ನು ಬಲಪಡಿಸುವಲ್ಲಿ ಮೀನಿನ ಸೇವನೆ ಹೆಚ್ಚಿನ ಪ್ರಯೋಜನ ಉಂಟುಮಾಡುವುದರಲ್ಲಿ ಸಂಶಯವಿಲ್ಲ.ಮೀನು ಸಮುದ್ರಾಹಾರಕ್ಕೆ ಸೇರಿದ ಆಹಾರ ಪದಾರ್ಥಗಳಲ್ಲಿ ಒಂದಾಗಿದ್ದು, ಇದರಲ್ಲಿ ಯಥೇಚ್ಛವಾಗಿ ಒಮೆಗಾ – 3 ಫ್ಯಾಟಿ ಆಸಿಡ್ ಅಂಶಗಳನ್ನು ಒಳಗೊಂಡಿವೆ. ನೀವು ಮಾಂಸಾಹಾರಿಗಳಾಗಿದ್ದರೆ ಮೀನು ಸೇವಿಸುವುದು ಒಳ್ಳೆಯದು. ಮೀನುಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, 100 ಗ್ರಾಂ ಮೀನಿನಲ್ಲಿ 22 ಗ್ರಾಂ ಪ್ರೋಟೀನ್ ಇರುತ್ತದೆ. ಇದಲ್ಲದೆ, ಮೀನಿನ ಸೇವನೆಯಿಂದ ವಯಸ್ಸಾದಂತೆ ಹೆಚ್ಚಿನವರಿಗೆ ಕಾಡುವ ಮರೆವಿನ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ಇದರ ಜೊತೆಗೆ ಧೂಮಪಾನದ ಅಭ್ಯಾಸ ಇರುವವರು ತಮ್ಮ ದೇಹದಲ್ಲಿ ಮೆದುಳಿನಿಂದ ಹರಿದು ಬಂದಿರುವ ನರನಾಡಿಗಳ ಹಾನಿಯನ್ನು ಮೀನಿನ ಸೇವನೆಯ ಮೂಲಕ ರಕ್ಷಿಸಿಕೊಳ್ಳಬಹುದು.

ಕೋಸುಗಡ್ಡೆ

ಕೋಸುಗಡ್ಡೆ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತವೆ. ಕೋಸುಗಡ್ಡೆ ತಿನ್ನುವುದರಿಂದ ಮೂಳೆಗಳು ಸದೃಢಗೊಳ್ಳುವ ಜೊತೆಗೆ ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತವೆ. ಬ್ರೊಕೊಲಿಯಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದ್ದು, ಬ್ರೊಕೊಲಿ ಪ್ರೋಟೀನ್ ಕೊರತೆಯನ್ನು ನಿವಾರಿಸಲು ನೆರವಾಗುತ್ತದೆ. ಇದರಲ್ಲಿ 4.5 ಗ್ರಾಂ ಪ್ರೋಟೀನ್ ಇದ್ದು, ಬ್ರೊಕೋಲಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.ಮೇಲೆ ತಿಳಿಸಿದ ಅಹಾರ ಪದಾರ್ಥಗಳ ಜೊತೆಗೆ ಪೋಷಾಂಶಯುಕ್ತ ಆಹಾರ ಕ್ರಮ, ನಿಯಮಿತ ವ್ಯಾಯಾಮ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರ ಜೊತೆಗೆ ಅತಿಯಾದರೆ ಅಮೃತವೂ ವಿಷವೇ ಎಂಬಂತೆ ಯಾವುದನ್ನು ಅತಿಯಾಗಿ ಸೇವಿಸದೆ ಹಿತಮಿತವಾಗಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು.

Leave A Reply

Your email address will not be published.