ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ಕಾಲೇಜು ವಿದ್ಯಾರ್ಥಿನಿಗೂ ಉಚಿತ ಸ್ಕೂಟಿ: ಅಮಿತ್ ಶಾ ಬಿಗ್ ಅನೌನ್ಸ್ ಮೆಂಟ್!
ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ಕಾಲೇಜುಗಳಿಗೆ ಹೋಗುವ ಪ್ರತಿಯೊಬ್ಬ ವಿದ್ಯಾರ್ಥಿನಿಗೂ ಬಹುದೊಡ್ಡ ಗಿಫ್ಟ್ ನೀಡಲಿದ್ದಾರೆ. ಪ್ರತಿ ಹುಡುಗಿಗೂ ಉಚಿತ ಸ್ಕೂಟಿ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಅವರು ಭರವಸೆ ನೀಡಿದ್ದಾರೆ.
60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16 ರಂದು ಚುನಾವಣೆ ನಡೆಯಲಿದೆ. ನಿನ್ನೆ ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗೃಹ ಮಂತ್ರಿ ಅಮಿತ್ ಶಾ ಅವರು, ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಪ್ರತಿ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಕೂಟಿ ನೀಡುತ್ತೇವೆ ಎಂದರು. ಇಲ್ಲಿ ಚುನಾವಣೆಗೆ ಮುಂಚೆಯೇ ಕಮ್ಯುನಿಸ್ಟರು ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಜೊತೆ ಕೈಜೋಡಿಸಲು ಹೊರಡುವ ಮೂಲಕ ಸಿಪಿಎಂ ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಿದೆ. ಇಲ್ಲಿ ಸಿಪಿಎಂ ಎರಡು ದಶಕಗಳ ಕಾಲ ಅಧಿಕಾರ ನಡೆಸಿದೆ. ಆದರೂ ಈಗ ಆ ಪಕ್ಷ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ದುಸ್ಥಿತಿಗೆ ತಲುಪಿದೆ. ದಕ್ಷಿಣದ ಕೇರಳದಲ್ಲಿ ಪರಸ್ಪರ ಬಡಿದಾಡುವ ಎರಡೂ ಪಕ್ಷಗಳು, ತ್ರಿಪುರಾದಲ್ಲಿ ಒಂದಾಗಿರುವುದು ಅವರ ಅಧಿಕಾರ ಲಾಲಸೆಗೆ ಸಾಕ್ಷಿ.
ತ್ರಿಪುರಾದಲ್ಲಿ ಸಿಪಿಎಂ ಅನೇಕ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆಗೆ ಕಾರಣವಾಗಿದೆ. ಅಂತಹ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಅಮಿತ್ ಶಾ ಕಿಡಿ ಕಾರಿದ್ದಾರೆ.