ವಿಧಾನಸಭೆ ಚುನಾವಣೆ ತಾಲೀಮು ಫೆಬ್ರವರಿ ಅಂತ್ಯದೊಳಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಕ್ಕೆ ಕೈ ಪಾಳಯ ನಿರ್ಧಾರ | ಗೆಲುವಿನ ಮಾನದಂಡವೇ ಅಭ್ಯರ್ಥಿಯ ಪ್ರಮುಖ ಅರ್ಹತೆ
ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭರದ ಸಿದ್ದತೆ ನಡೆಸುತ್ತಿದೆ.ಆಡಳಿತಾರೂಢ ಬಿಜೆಪಿ ಪಕ್ಷ ಶತಾಯಗತಾಯವಾಗಿ ಅಧಿಕಾರ ಹಿಡಿಯಲೇ ಬೇಕೆಂಬ ಪ್ರಯತ್ನದಲ್ಲಿದ್ದರೆ ,ಕಾಂಗ್ರೆಸ್ ಕೂಡ ವಿವಿಧ ಕಸರತ್ತುಗಳನ್ನು ನಡೆಸುತ್ತಿದ್ದು,ವಿಭಾಗವಾರು ಅಭ್ಯರ್ಥಿಗಳ ಪಟ್ಟಿ ರಚಿಸಿ ಗೆಲುವಿನ ಜವಾಬ್ದಾರಿಯನ್ನು ಉಸ್ತುವಾರಿಗಳನ್ನು ನೇಮಿಸಿ ಹಂಚುವ ಸಿದ್ದತೆ ನಡೆಸುತ್ತಿದೆ.
ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ ಅಂತ್ಯದೊಳಗೆ ಅಂತಿಮಗೊಳಿಸಲು ನಿರ್ಧರಿಸಿದ್ದು,ಅಭ್ಯರ್ಥಿಗಳ ಆಯ್ಕೆಯ ಅಂತಿಮ ಕಸರತ್ತಿಗೆ ಅಧಿಕೃತವಾಗಿ ಚಾಲನೆ ನೀಡಿದೆ.
ಕರ್ನಾಟಕ ಚುನಾವಣೆಯ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಅವರು ರವಿವಾರ ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ ಹಾಗೂ ಧ್ರುವನಾರಾಯಣ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಅವರೊಂದಿಗೆ ರಾಜ್ಯ ಚುನಾವಣೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಕಾರ್ಯದರ್ಶಿಗಳ ಜತೆಯೂ ಮೋಹನ್ ಪ್ರಕಾಶ್ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹ ಕೆಲಸದಲ್ಲಿ ನಿರತರಾಗಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ತಾವು ರಾಜ್ಯ ಪ್ರವಾಸ ಮಾಡಿ ಸಂಗ್ರಹಿಸಿರುವ ವರದಿಯನ್ನು ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಗೆಲುವಿನ ಮಾನದಂಡವನ್ನೇ ಪ್ರಮುಖ ಅರ್ಹತೆಯಾಗಿ ಪರಿಗಣಿಸಲು ನಿರ್ಧರಿಸಿರುವ ಕೈ ಪಾಳಯ, ಈ ಹಿಂದೆ ಹೊಂದಾಣಿಕೆ, ಸೀಟು ಹಂಚಿಕೆಯಿಂದ ಆಗಿರುವ ನಷ್ಟದಿಂದ ಪಾಠ ಕಲಿತಿದ್ದು ಅದು ಮರುಕಳಿಸದಂತೆ ಎಚ್ಚರ ವಹಿಸಿದೆ.
ಹೀಗಾಗಿ ಜಿಲ್ಲಾ ನಾಯಕರ ಶಿಫಾರಸ್ಸಿಗೆ ಪೂರ್ಣ ವಿರಾಮ ಹಾಕಿ ಪ್ರತಿಯೊಂದು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ತೀರ್ಮಾನಕ್ಕೆ ಒಳಪಡಲಿದ್ದು, ಸೋಲು-ಗೆಲುವಿನ ಹೊಣೆಯನ್ನೂ ಹೈಕಮಾಂಡ್ ಹೊತ್ತುಕೊಳ್ಳಲು ನಿರ್ಧರಿಸಿದೆ.