ಭೂಕಂಪಗ್ರಸ್ತ ಟರ್ಕಿಯಿಂದ ಬಂದ ಸ್ಫೂರ್ತಿಯ ಕಥೆ, ಮೂತ್ರ ಕುಡಿದು 94 ಗಂಟೆಗಳ ಕಾಲ ಅವಶೇಷಗಳ ಅಡಿಯಲ್ಲಿ ಬದುಕುಳಿದ ಬಾಲಕ !
ಟರ್ಕಿ ಭೂಕಂಪದಿಂದ ಜನ ನಲುಗಿ ಸತ್ತ ಸುದ್ದಿಗಳ ಜತೆಗೇ ಸಾವಿಗೆ ಸೆಡ್ಡು ಹೊಡೆದು ಬದುಕುಳಿದು ಬಂದ ಅದ್ಭುತ ಧೀ ಶಕ್ತಿಯ ಬಾಲಕನೊಬ್ಬನ ಕಥೆ ಅನಾವರಣಗೊಂಡಿದೆ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಸಾಯಲು ಹೊರಟವರಿಗೆ ದೊಡ್ಡ ಪಾಠ. ಬರೆದುಕೊಂಡೇ ಸಾವು ಗೆದ್ದು ಬಂದಿದ್ದಾನೆ ಈ ಧೈರ್ಯಶಾಲಿ.
ಟರ್ಕಿಯ ಭೀಕರ ಭೂಕಂಪದಲ್ಲಿ ಸಿಲುಕಿರುವವರ ರಕ್ಷಣೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಹಲವರನ್ನು ರಕ್ಷಿಸಲಾಗುತ್ತಿದೆ. ಈಗಾಗಲೇ ಟರ್ಕಿ ಮತ್ತು ಸಿರಿಯ ಬಾರ್ಡರ್ ಗಳಲ್ಲಿ ನಡೆದ ಭೂಕಂಪದಲ್ಲಿ 25,000 ಕ್ಕೂ ಹೆಚ್ಚು ಮಂದಿ ಮೃತಪಟ್ಟದ್ದನ್ನು ಸರಕಾರಗಳು ಖಚಿತಪಡಿಸಿವೆ. ಇನ್ನೂ ಹಲವು ಸಾವು ನೋವುಗಳ ಸಂಖ್ಯೆ ಹೆಚ್ಚುವ ಸಂಭವ ಇದೆ. ಟರ್ಕಿಯಲ್ಲಿ 7.8 ತೀವ್ರತೆಯ ಭೀಕರ ಭೂಕಂಪನ ಸಂಭವಿಸಿತ್ತು.
ಈ ಮಧ್ಯೆ 94 ಗಂಟೆಗಳ ಕಾಲ ಭೂಕಂಪಿತ ಅವಶೇಷಗಳಡಿಯಲ್ಲಿ ಸಿಲುಕಿದ್ದ ಅದ್ನಾನ್ ಮುಹಮ್ಮದ್ ಕೊರ್ಕುಟ್ ಎಂಬ 17 ವರ್ಷದ ಬಾಲಕನನ್ನು ರಕ್ಷಣಾ ತಂಡಗಳು ರಕ್ಷಿಸಿದ್ದು, ಆತನ ಕರುಣಾಜನಕ ಮತ್ತು ಸ್ಫೂರ್ತಿಯ ಕತೆಯನ್ನು ಮಾಧ್ಯಮಗಳು ವರದಿ ಮಾಡಿದೆ.
ಆತ ಸುಮಾರು 94 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದ. ತನ್ನ ಕುಟುಂಬದ ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಭೂಕಂಪ ಅಲ್ಲಿ ಸಂಭವಿಸಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಆತ ತನ್ನ ಸ್ವಂತ ಮೂತ್ರವನ್ನು ಕುಡಿದು ಬದುಕಿದ್ದೇನೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾನೆ.
“ನಾನು ನಿದ್ರೆಗೆ ಜಾರದಿರಲು ಪ್ರತಿ 25 ನಿಮಿಷಗಳಿಗೊಮ್ಮೆ ನನ್ನ ಫೋನ್ನಲ್ಲಿ ಅಲಾರಾಂ ಬಾರಿಸುವಂತೆ ಹೊಂದಿಸಿಟ್ಟಿದ್ದೆ. ಆದರೆ, ಎರಡು ದಿನಗಳ ನಂತರ, ಬ್ಯಾಟರಿ ಖಾಲಿ ಆಗಿ ಫೋನ್ ಆಫ್ ಆಯಿತು. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿರುವಾಗ, ನನಗೆ ಧ್ವನಿಗಳು ಕೇಳಿಸುತ್ತಿದ್ದವು, ಆದರೆ ಯಾರಿಗೂ ನನ್ನ ಮಾತು ಕೇಳುತ್ತಿರಲಿಲ್ಲ. ಇದು ತನ್ನನ್ನು ಚಿಂತೆಗೀಡು ಮಾಡುತ್ತಿತ್ತು. ರಕ್ಷಣಾ ಪ್ರಯತ್ನಗಳ ಸಮಯದಲ್ಲಿ ನಾನು ನಜ್ಜುಗುಜ್ಜಾಗಬಹುದೆಂದು ನಾನು ಹೆದರುತ್ತಿದ್ದೆ. ಇಲ್ಲಿಗೆ ಬಂದು ಬಂದು ನನ್ನನ್ನು ರಕ್ಷಿಸಿದ ಜನರಿಗೆ ನನ್ನ ಧನ್ಯವಾದಗಳು” ಎಂದು ಆತ ಹೇಳಿಕೊಂಡಿದ್ದಾನೆ.