ಬೆಳ್ತಂಗಡಿ : 1,700 ಅಡಿ ಎತ್ತರದ ಗಡಾಯಿಕಲ್ಲು ಏರಿ ಸಾಹಸ ಮೆರೆದ ಜ್ಯೋತಿರಾಜ್ !
ಅಪಾಯಕಾರಿ ಬೆಟ್ಟಗಳನ್ನು, ಕಲ್ಲು, ಕೋಟೆಗಳನ್ನು ಕೋತಿಯಂತೆ ಸರಸರನೆ ಏರಿ ಕೋತಿರಾಜ್ ಎಂದೇ ಜನಪ್ರಿಯತೆ ಪಡೆದಿರುವ ಜ್ಯೋತಿರಾಜ್ ಅವರು ಹೊಸ ಸಾಹಸವೊಂದಕ್ಕೆ ಮುಂದಾಗಿದ್ದರು, ಸದ್ಯ ಆ ಸಾಹಸ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 1,700 ಅಡಿ ಎತ್ತರದ ಗಡಾಯಿಕಲ್ಲು ಏರಿ
ಇನ್ನಷ್ಟು ಖ್ಯಾತಿ ಗಳಿಸಿದ್ದಾರೆ ಜ್ಯೋತಿರಾಜ್.
ಜ್ಯೋತಿರಾಜ್ ಚಿತ್ರದುರ್ಗದ ಕಲ್ಲಿನ ಕೋಟೆ, ಜೋಗ ಜಲಪಾತ ಸೇರಿದಂತೆ ಹಲವೆಡೆ ಸಾಹಸ ಮೆರೆದಿದ್ದು, ಇದೀಗ ದಕ್ಷಿಣ ಕನ್ನಡದ ಬೆಳ್ತಂಗಡಿ ಭಾಗದಲ್ಲಿನ ಪ್ರಸಿದ್ಧಗಡಾಯಿ ಕಲ್ಲನ್ನು ಏರಿ ಹೊಸ ಇತಿಹಾಸ ಬರೆದಿದ್ದಾರೆ.
ಗಡಾಯಿಕಲ್ಲು ಸಮುದ್ರ ಮಟ್ಟದಿಂದ ಸುಮಾರು 1,700 ಅಡಿ ಎತ್ತರದಲ್ಲಿದ್ದು, ರಾಜ್ ಈ ಬೃಹತ್ ಕಲ್ಲನ್ನು ರೋಪ್ ಸಹಾಯದಿಂದ ಏರಿ ಸಾಧನೆ ಮಾಡಿದ್ದಾರೆ. ಈ ಮೂಲಕ ಬರೀ ರೋಪ್ನಲ್ಲಿ ಗಡಾಯಿಕಲ್ಲು ಏರಿದ ಮೊದಲ ವ್ಯಕ್ತಿ ಎಂಬ ಹೆಸರು ಪಡೆದಿದ್ದಾರೆ.
ಕಳೆದ ಎರಡು ದಿನಗಳಿಂದ ಗಡಾಯಿಕಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದ ಜ್ಯೋತಿರಾಜ್. ಅಲ್ಲೇ ಇರುವ ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಪೂಜೆ ಸಲ್ಲಿಸಿ ನಂತರ ಗಡಾಯಿಕಲ್ಲನ್ನು ರೋಪ್ ಮೂಲಕ ಏರಲು ಆರಂಭಿಸಿದ್ದು, ಎಲ್ಲರೂ ಅಚ್ಚರಿ ಪಡುವಂತಹ ಸಾಹಸ ಮಾಡಿದ್ದಾರೆ.
ರಾಜ್ ಕ್ಲೈಂಬಿಂಗ್ ಫೌಂಡೇಶನ್ ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿರುವ ಗಡಾಯಿಕಲ್ಲಿಗೆ ಏರಿ, ಅದರ ಮೇಲೆ ಕರ್ನಾಟಕ ಧ್ವಜ ಹಾರಿಸಿದ್ದೇನೆ ಎಂದು ರಾಜ್ ತಿಳಿಸಿದ್ದು, ಮುಂದಿನ ದಿನಗಳಲ್ಲಿ ವಿದೇಶಗಳಲ್ಲೂ ಇಂತಹ ಸಾಹಸವನ್ನು ಮಾಡಿ, ಭಾರತದ ಧ್ವಜ ಹಾರಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಅಲ್ಲದೆ, ಜ್ಯೋತಿರಾಜ್ ಮುಂದಿನವಾರ ಮಂಗಳೂರಿನ ಅತಿ ಎತ್ತರದ ಕಟ್ಟಡ ಏರಲು ಯೋಜನೆ ರೂಪಿಸಿಕೊಂಡಿದ್ದಾರೆ.