ವಾಲ್ಮೀಕಿ ಜಾತ್ರೆಗೆ ಸುದೀಪ್ ಆಗಮನ ವಿಳಂಬ, ಅಭಿಮಾನಿಗಳ ಅತಿರೇಕದ ವರ್ತನೆ, ಟ್ವೀಟ್ ಮೂಲಕ ಆಹ್ವಾನ ಕೊಟ್ಟಿಲ್ಲ ಎಂದ ಕಿಚ್ಚ! ಟ್ವೀಟ್ ಬೆನ್ನಲ್ಲೇ ಆಹ್ವಾನ ಪತ್ರಿಕೆ ನೀಡಿದ ಫೋಟೋ ವೈರಲ್!!!
ಸಿನಿಮಾ ನಟರ ಮೇಲೆ ಅಭಿಮಾನಿಗಳು ಇಟ್ಟಿರುವ ಅಭಿಮಾನ ಬೆಲೆ ಕಟ್ಟಲಾಗದ್ದು, ತಮ್ಮ ನೆಚ್ಚಿನ ನಟ, ನಟಿಯರು ತಮ್ಮ ಊರಿಗೆ ಬರುತ್ತಾರೆ ಅಂದ್ರೆ ಸಾಕು ಅಪಾರ ಸಂಖ್ಯೆಯಲ್ಲಿ ಜನರು ಸೇರಿ ಬಿಡುತ್ತಾರೆ. ಎಷ್ಟು ಅಂದ್ರೆ ಯಾವ ಕಾರ್ಯಕ್ರಮಕ್ಕೂ ಸೇರದಷ್ಟು ಜನರು ಆಗಮಿಸುತ್ತಾರೆ. ಅಭಿಮಾನಿಗಳು ಒಂದು ಕಡೆ ಸೇರಿದ್ದಾರೆ ಅಂದ್ರೆ ಕೇಳ್ಬೇಕಾ ತಮ್ಮ ನೆಚ್ಚಿನ ನಟನ ಹೆಸರನ್ನು ಕೂಗೋದು, ಕಿರುಚಾಟ, ಘೋಷಣೆ ಇವೆಲ್ಲಾ ಇದ್ದೇ ಇರುತ್ತದೆ. ಇದೀಗ ಸುದೀಪ್ ಅಭಿಮಾನಿಗಳ ಅಭಿಮಾನದ ಪರಾಕಾಷ್ಟೆ ತಾರಕಕ್ಕೇರಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಮುಜುಗರ ಉಂಟುಮಾಡಿದೆ.
ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ಅಂಗವಾಗಿ ನಟ ಕಿಚ್ಚ ಸುದೀಪ್ ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದರು. ನಟನ ಬರುವಿಕೆ ತಿಳಿದ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಲವು ಸಚಿವರು, ಇತರ ಪ್ರಮುಖ ನಾಯಕರಗಳು ಆಗಮಿಸಿದ್ದರು. ಹಾಗೂ ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಇವರೆಲ್ಲರೂ ವೇದಿಕೆಯಲ್ಲಿದ್ದರು. ಈ ವೇಳೆ ಕಾರ್ಯಕ್ರಮ ನಡೆಯುವಾಗ ಸುದೀಪ್ ಅಭಿಮಾನಿಗಳು ನೆಚ್ಚಿನ ನಟನ ಹೆಸರು ಕೂಗಿ, ಅರಚಾಟ ಮಾಡುತ್ತಿದ್ದರು.
ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸುವ ನಿರೀಕ್ಷೆ ಹೊಂದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಮಹರ್ಷಿ ವಾಲ್ಮೀಕಿ ಪೀಠದ ಸಭಾಂಗಣದೆದುರು ನೆರೆದಿದ್ದರು. ಬೆಳಿಗ್ಗೆ ಮತ್ತು ಮಧ್ಯಾಹ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲೂ ಅಭಿಮಾನಿಗಳು ಸುದೀಪ್ ಪರ ಜೈಕಾರ ಕೂಗಿ ಕೇಕೆ ಹಾಕಿದ್ದರು. ಇದರಿಂದ ವೇದಿಕೆ ಮೇಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಲವು ಸಚಿವರು, ಇತರ ಪ್ರಮುಖ ನಾಯಕರಿಗೆ ಕಿರಿಕಿರಿ ಉಂಟಾಗಿದ್ದು, ಅಭಿಮಾನಿಗಳ ಕೂಗಾಟದಿಂದ ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರಿಗೆ ಭಾಷಣ ಮಾಡಲು ಅಡ್ಡಿಯಾಗಿ, ತಮ್ಮ ಭಾಷಣ ಅರ್ಧಕ್ಕೆ ಮೊಟಕುಗೊಳಿಸಿ, ಸಿಟ್ಟುಗೊಂಡು, ಜನರಿಗೆ ಎಚ್ಚರಿಕೆ ನೀಡಿದರು.
ಅಭಿಮಾನಿಗಳ ಅಭಿಮಾನ ಅತಿರೇಕಕ್ಕೆ ತಲುಪಿ, ಕೇಕೆ, ಕೂಗಾಟ, ಘೋಷಣೆ ಜೋರಾದಾಗ ಸಿಟ್ಟುಗೊಂಡ ಸ್ವಾಮೀಜಿ, ಎಲ್ರೂ ಸುಮ್ಮನೆ ಕುಳಿತುಕೊಳ್ಳಿ, ಶಾಂತಿ ರೀತಿಯಿಂದ ವರ್ತಿಸಿದರೆ ಮಾತ್ರ ಸುದೀಪ್ ಬರುತ್ತಾರೆ. ಗಲಾಟೆ ಮಾಡಿದ್ರೆ ಬರೋದಿಲ್ಲ. ಸುದೀಪ್ ಅವರು ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಬರುತ್ತಿದ್ದಾರೆ. ಇದೇ ರೀತಿ ಗಲಾಟೆ ಮುಂದುವರಿಸಿದರೆ ನಾನೇ ಬರುವುದು ಬೇಡ ಎಂದು ಸುದೀಪ್‌ಗೆ ಹೇಳುತ್ತೇನೆ. ಅವರು ಬರುವವರೆಗೆ ಶಾಂತಿಯಿಂದ ವರ್ತಿಸಬೇಕು. ಇದೇ ರೀತಿ ಗಲಾಟೆ ಮುಂದುವರೆಸಿದ್ರೆ ಕಾರ್ಯಕ್ರಮ ಕ್ಯಾನ್ಸಲ್ ಮಾಡ್ತೀನಿ ಎಂದು ಸಿಟ್ಟಿನಿಂದಲೇ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಷಣ ಪೂರ್ಣಗೊಳಿಸಿ ತೆರಳಿದ ನಂತರವೂ ಸುದೀಪ್ ಬಾರದ್ದರಿಂದ ತಾಳ್ಮೆ ಕಳೆದುಕೊಂಡ ಅಭಿಮಾನಿಗಳು ಬ್ಯಾರಿಕೇಡ್‌ಗಳು ನೆಲಕ್ಕುರುಳಿಸಿ ವೇದಿಕೆಯತ್ತ ನುಗ್ಗತೊಡಗಿದರು. ಪ್ಲಾಸ್ಟಿಕ್ ಕುರ್ಚಿಗಳನ್ನು ಪುಡಿ ಪುಡಿ ಮಾಡಿದರು. ಇದರಿಂದ ಜನರು ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಒಟ್ಟಾರೆ ಅಭಿಮಾನಿಗಳ ಅಭಿಮಾನ ತಾರಕಕ್ಕೇರಿತ್ತು.
ಅಭಿಮಾನಿಗಳ ಆಕ್ರೋಶವನ್ನು ಕಂಡು, ಈ ಬಗ್ಗೆ ಸ್ಪಷ್ಟನೆ ನೀಡಿದ ಸುದೀಪ್, ಟ್ವೀಟ್ ಮೂಲಕ ತಿಳಿಸಿದ್ದಾರೆ. ನಿಜಕ್ಕೂ ಕಿಚ್ಚ ಸುದೀಪ್ ಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ ಎಂದು ಟ್ವಿಟ್ ನಲ್ಲಿ ತಿಳಿಸಿದ್ದಾರೆ. ರಾಜನಹಳ್ಳಿಯಲ್ಲಿ ನಡೆದ ಘಟನೆ ಬಗ್ಗೆ ಬೇಸರವಾಯಿತು. ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ. ಕಾರ್ಯಕ್ರಮದ ಬಗ್ಗೆ ಮಾಹಿತಿ ಇರಲಿಲ್ಲ. ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ. ನಿಮ್ಮ ಜೊತೆ ಬೆರೆಯಲು ನನಗೂ ಸದಾ ಅತೀವ ಆಸೆ. ಮುಂದೆ ಖಂಡಿತ ಬರುತ್ತೇನೆ. ಪ್ರೀತಿ ಇರಲಿ, ಶಾಂತ ರೀತಿಯಿಂದ ವರ್ತಿಸಿ ಎಂದು ಸುದೀಪ್ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದರು.
ಸದ್ಯ ಸುದೀಪ್ ಟ್ವಿಟ್ ಬೆನ್ನಲ್ಲೇ ಪ್ರಸನ್ನಾನಂದಪುರಿ ಸ್ವಾಮೀಜಿ ನಟನಿಗೆ ಆಹ್ವಾನ ನೀಡಲು ಹೋಗಿದ್ದರು. ಇದೀಗ ಈ ಫೋಟೋ ವೈರಲ್ ಆಗಿದೆ. ಸುದೀಪ್ ಮನೆಯಲ್ಲಿ ಇಲ್ಲದ ಕಾರಣ ಅವರ ತಂದೆ ಸಂಜೀವ್ ಕೈಗೆ ಪ್ರಸನ್ನಾನಂದಪುರಿ ಸ್ವಾಮೀಜಿ ಆಹ್ವಾನ ಪತ್ರಿಕೆ ನೀಡಿದ್ದರು.