ಪಿಎಂ ಆವಾಸ್ ಯೋಜನೆ ಹಣ ಪಡೆದು ಲವರ್ಸ್ ಜೊತೆ ಎಸ್ಕೇಪ್ ಆದ ಮಹಿಳೆಯರು! ಗಂಡಂದಿರು ಕಂಗಾಲು!!!

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಅನ್ನೋ ಮಾತು ಹೆಚ್ಚು ಜನಪ್ರಿಯ. ಕುರುಡು ಕಾಂಚಾಣದ ಮಹಿಮೆಗೆ ಇದ್ದವರನ್ನು ಇಲ್ಲವಾಗಿಸುವ, ಸತ್ತವರನ್ನು ಮರು ಸೃಷ್ಟಿಸುವ ಹೀಗೆ ನಾನಾ ಪ್ರಯೋಗಗಳನ್ನು ತಮ್ಮ ಬತ್ತಳಿಕೆಯಿಂದ ಪ್ರಯೋಗಿಸುವ ಅನೇಕ ಮಂದಿಯನ್ನು ನಾವು ನೋಡಿರುತ್ತೇವೆ. ಆದರೆ ಈ ಘಟನೆ ಬಗ್ಗೆ ತಿಳಿದರೆ ನಿಮಗೆ ಅಚ್ಚರಿಯಾಗೋದಂತು ಗ್ಯಾರಂಟಿ.

ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಪೂರಕವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದು ಗೊತ್ತಿರುವ ವಿಚಾರವೇ. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಯೋಜನೆ ಕೂಡ ಒಂದಾಗಿದ್ದು,ಈ ಯೋಜನೆಯಡಿ ಸರ್ಕಾರವು ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಿದ್ದು, ಇದರಿಂದ ಫಲಾನುವಿಗಳು ಮನೆ ಹೊಂದಬಹುದಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಕುಟುಂಬದ ಮುಖ್ಯಸ್ಥೆಯಾಗಿರುವ ಮಹಿಳೆಯನ್ನು ಮನೆಯ ಮಾಲೀಕ ಅಥವಾ ಸಹ-ಮಾಲೀಕರಾಗಿರುವುದನ್ನು ಕಡ್ಡಾಯ ಮಾಡಿದ್ದು, ಇದರಿಂದ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ಜಮೆ ಮಾಡಲಾಗುತ್ತದೆ. ಇದೇ ರೀತಿ, ಸರ್ಕಾರ ರವಾನಿಸಿದ ಹಣವನ್ನು ಸ್ವೀಕರಿಸಿ ನಾಲ್ವರು ವಿವಾಹಿತ ಮಹಿಳೆಯರು ಓಡಿ ಹೋಗಿರುವ ಘಟನೆ ನಡೆದಿದೆ.

ಹೌದು!!! ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಾಲ್ವರು ಮಹಿಳೆಯರು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಯ  ಹಣ ಪಡೆದುಕೊಂಡು ಗಂಡಂದಿರಿಗೆ ಗುಡ್ ಬೈ ಹೇಳಿ  ಲವರ್ಸ್ ಜೊತೆ ಓಡಿ ಹೋಗಿರುವ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಪಿಎಂಎವೈ ಕೇಂದ್ರೀಯ ಯೋಜನೆಯಾಗಿದ್ದು, ಬಡವರಲ್ಲಿ ನಗರ ವಸತಿ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ.

ಈ ಯೋಜನೆಯಡಿ ಫಲಾನುಭವಿಗಳಾದ ನಾಲ್ವರು ಮಹಿಳೆಯರು ಮೊದಲ ಕಂತಿನ 50 ಸಾವಿರ ರೂ. ಹಣವನ್ನು ಸ್ವೀಕರಿಸಿ ತಮ್ಮ ಗಂಡಂದಿರ ಆಸೆಗೆ ತಣ್ಣೀರು ಎರಚಿ ಹಣದ ಜೊತೆಗೆ  ತಮ್ಮ ತಮ್ಮ ಬಾಯ್ ಫ್ರೆಂಡ್ ಜೊತೆಗೆ ಓಡಿ ಹೋಗಿರುವ ಘಟನೆ ವರದಿಯಾಗಿದೆ. ಸದ್ಯ, ಸಂತ್ರಸ್ಥ ಗಂಡಂದಿರು ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ತಮ್ಮ ಪತ್ನಿಯರ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಮಹಿಳೆಯರು ಹಣ ಸ್ವೀಕರಿಸಿದ ಬಳಿಕವು  ಮನೆ ನಿರ್ಮಾಣ ಕಾರ್ಯ ಆರಂಭವಾಗದಿದ್ದ ಹಿನ್ನೆಲೆ  ಶೀಘ್ರವೇ ಮನೆಯ ಕೆಲಸವನ್ನು ಆರಂಭಿಸುವಂತೆ ಅಧಿಕಾರಿಗಳು ನೋಟಿಸ್​  ನೀಡಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಸ್ಥಳೀಯ ಕಚೇರಿಗೆ  ಮಹಿಳೆಯರ ಗಂಡಂದಿರು ಭೇಟಿ ನೀಡಿ  ತಮ್ಮ ಪತ್ನಿಯರು ಹಣದ ಜೊತೆ ಅವರ ಲವ್ವರ್ ಬಾಯ್ ಜೊತೆ ಎಸ್ಕೇಪ್ ಆಗಿರುವ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಈ ಕಹಾನಿ ಕೇಳಿ ಅಧಿಕಾರಿಗಳು ಶಾಕ್ ಆಗಿದ್ದು, ಹೀಗೂ ಉಂಟೇ ಎಂದು ಗೊಂದಲಕ್ಕೊಳಕ್ಕಾಗಿದ್ದು, ಮಹಿಳೆಯರಿಂದ ಇನ್ನೂ ಹಣ ಮರಳಿ ಪಡೆಯುವುದಾದರೂ ಹೇಗೆ ಎಂದು ಅಧಿಕಾರಿಗಳು ಯೋಚನೆಯಲ್ಲಿ ಮುಳುಗಿದ್ದಾರೆ. ಇದರ ನಡುವೆ, ಎರಡನೇ ಕಂತಿನ ಹಣವನ್ನು ಅವರ ಖಾತೆಗಳಿಗೆ ಕ್ರೆಡಿಟ್​ ಮಾಡದಂತೆ ಸಂತ್ರಸ್ತ ಗಂಡಂದಿರು ಅಧಿಕಾರಿಗಳ ಬಳಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸದ್ಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಓಡಿ ಹೋದ ಮಹಿಳೆಯರ ಪತ್ತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.