ಮಗುವಿಗೆ ಯಶಸ್ವಿ ಜನ್ಮ ನೀಡಿದ ತೃತೀಯ ಲಿಂಗಿ ದಂಪತಿಗಳಿಗೆ ಸಂಕಟ | ಎದುರಾಯ್ತು ಕಾನೂನು ತೊಡಕು!!!
ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಕೇರಳದ ತೃತೀಯಲಿಂಗಿ ದಂಪತಿಗಳು ಮಗುವಿನ ನಿರೀಕ್ಷೆಯಲ್ಲಿದ್ದ ವಿಚಾರ ಎಲ್ಲೆಡೆ ವೈರಲ್ ಆಗಿ ಟ್ರೆಂಡ್ ಆಗಿತ್ತು. ಅಷ್ಟೇ ಅಲ್ಲದೆ, ಕಳೆದ ಕೆಲ ದಿನಗಳಿಂದ ಬಾರಿ ಚರ್ಚೆಯಲ್ಲಿದ್ದ ಕೇರಳದ ತೃತೀಯ ಲಿಂಗಿ ದಂಪತಿ ವಿಚಾರ ಹೆಚ್ಚು ಚರ್ಚೆಯಲ್ಲಿತ್ತು ಎಂದರೂ ತಪ್ಪಾಗಲಾರದು. ಜಿಯಾ ಪೊವೆಲ್ ಖ್ಯಾತ ಡಾನ್ಸರ್ ಆಗಿ ಗುರುತಿಸಿಕೊಂಡಿದ್ದು, ಕೇರಳದಲ್ಲಿ ಇವರು ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ. ಈ ಜೋಡಿ ಮೊನ್ನೆಯಷ್ಟೇ ತಮ್ಮ ಪ್ರೀತಿಯ ಕುರುಹಾಗಿ ಮಗುವನ್ನು ಬರಮಾಡಿಕೊಂಡ ಖುಷಿಯನ್ನು ಸಂಭ್ರಮಿಸಿದ್ದರು. ತಮ್ಮ ಜೀವನ ಸಂಗಾತಿ ಜಹಾದ್ ಫಾಜಿಲ್ ರೊಂದಿಗೆ ಮಗು ಹೊಂದಿದ ಬಳಿಕ ಜಿಯಾ ಕೇರಳದಲ್ಲಿ ಮತ್ತೊಮ್ಮೆ ಭಾರಿ ದೊಡ್ದ ಮಟ್ಟದ ನೇಮ್ ಫೇಮ್ ಗಳಿಸಿದ್ದಾರೆ. ಇದೀಗ, ಈ ಜೋಡಿಗೆ ಹೊಸ ತೊಡಕೊಂದು ಎದುರಾಗಿದೆ ಎನ್ನಲಾಗಿದೆ.
ಸಮಾಜದಲ್ಲಿ ಮಂಗಳಮುಖಿಯರ ಜೀವನ ಎಷ್ಟು ಕಠಿಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ತಮಗೆ ಎದುರಾದ ಪ್ರತಿ ಸಮಸ್ಯೆ, ತೊಡಕುಗಳನ್ನು ಈ ಜೋಡಿ ಜೊತೆಯಾಗಿ ಮೆಟ್ಟಿ ನಿಂತು ಎದುರಿಸಿದೆ. ಫೆ.8ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಕೇರಳ ಮೂಲದ ತೃತೀಯಲಿಂಗಿ ದಂಪತಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಸರ್ಕಾರಿ ದಾಖಲೆಗಳಲ್ಲಿ ಮಗುವಿನ ತಂದೆ ತಾಯಿಯ ಹೆಸರನ್ನು ಹೇಗೆ ನಮೂದಿಸುವುದು ಎಂಬುದೇ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.
ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಜಹಾದ್ ಹಾಗೂ ಗಂಡಾಗಿ ಹುಟ್ಟಿ ಹೆಣ್ಣಾಗಿಯೇ ಬದುಕು ನಡೆಸುತ್ತಿರುವ ಜಿಯಾ, ಬುಧವಾರ ಬೆಳಗ್ಗೆ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ತಂದೆ – ತಾಯಿಯಾಗಿ ಇತಿಹಾಸ ಸೃಷ್ಟಿ ಮಾಡಿದೆ. ಅವರಿಬ್ಬರೂ ತೃತೀಯಲಿಂಗಿಗಳ ಪಟ್ಟಿಯಲ್ಲಿ ಗುರುತಿಸಿ ಕೊಂಡರು ಕೂಡ ಸಂಪೂರ್ಣವಾಗಿ ಜೈವಿಕ ಪರಿವರ್ತನೆಗೆ ಒಳಗಾಗಿಲ್ಲ ಎಂಬುದನ್ನು ಗಮನಿಸಬೇಕು. ಆದರೂ ಕೂಡ ಇವರಿಬ್ಬರೂ ಅನ್ಯೋನ್ಯವಾಗಿ ಜೀವಿಸುತ್ತಿದ್ದಾರೆ.
ಕೇಂದ್ರ ಸರ್ಕಾರದಿಂದ ಕೊಡುವ ತೃತೀಯಲಿಂಗಿ ಗುರುತಿನ ಚೀಟಿಯನ್ನು ಈ ಜೋಡಿಗಳಿಬ್ಬರು ಹೊಂದಿದ್ದಾರೆ. ಜಿಯಾ ಪೊವೆಲ್ ಈ ತೊಡಕನ್ನು ನಿವಾರಿಸಿ ಕೊಳ್ಳುವ ನಿಟ್ಟಿನಲ್ಲಿ, ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಕಾಲೇಜಿನ ತಾಯಿ ಮತ್ತು ಮಕ್ಕಳ ಆರೋಗ್ಯ ಸಂಸ್ಥೆಯ ಅಧೀಕ್ಷಕರಿಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮಗುವಿಗೆ ಜನ್ಮ ನೀಡಿರುವ ಜಹಾದ್ ಫಾಜಿಲ್ ಅವರನ್ನು ತಂದೆ ಎಂದು ಪರಿಗಣಿಸಿ ಜೊತೆಗೆ ತನ್ನನ್ನು ತಾಯಿ ಎಂದು ಪರಿಗಣಿಸಬೇಕೆಂದು ಜಿಯಾ ಮನವಿ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಮಗು ಜನಿಸಿದ ತಕ್ಷಣ ಸಿಹಿ ಹಂಚಲು ಹೋದ ಸಂದರ್ಭದಲ್ಲಿ ಮೆಡಿಕಲ್ ಕಾಲೇಜು ಅಧೀಕ್ಷಕರಿಗೆ ಈ ಜೋಡಿ ದಾಖಲೆಗಳಲ್ಲಿ ಜಹಾದ್‌ನನ್ನು ತಂದೆ ಎಂದು ಸೇರಿಸುವ ಸಲುವಾಗಿ ಮನವಿ ಮಾಡಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಮತ್ತು ಆರೋಗ್ಯ ಸಚಿವರು ಈ ವಿಚಾರದಲ್ಲಿ ಬೆಂಬಲ ನೀಡುವ ಭರವಸೆಯನ್ನು ಜೋಡಿಗಳಿಬ್ಬರು ಇಟ್ಟುಕೊಂಡಿದ್ದಾರೆ. ಜಹಾದ್ ಫಾಝಿಲ್ ಮಗುವಿಗೆ ಜನ್ಮ ನೀಡಿದ್ದರೂ ಸಹಿತ ಅವನೇ ತಂದೆಯಾಗಿರಬೇಕು ಎಂಬುದು ಅವರಿಬ್ಬರ ಇಂಗಿತವಾಗಿದ್ದು, ನಮ್ಮ ಉಳಿವಿನ ಪ್ರಶ್ನೆ ಎಂಬಂತೆ ನಾವು ಈ ಪ್ರಯತ್ನಕ್ಕೆ ಕೈ ಹಾಕಿದ್ದು, ಒಂದು ವೇಳೆ ಅವಶ್ಯಕ ಎಂದೆನಿಸಿದರೆ ಕಾನೂನು ಹೋರಾಟಕ್ಕೂ ಕೂಡ ನಾವು ರೆಡಿ ಎಂದು ಜಿಯಾ ಮಾಧ್ಯಮವೊಂದರಲ್ಲಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.