National Umbrella Day : ನ್ಯಾಷನಲ್‌ ಅಂಬ್ರೆಲ್ಲ ಡೇ ಕುರಿತ ಇಂಟೆರೆಸ್ಟಿಂಗ್‌ ಮಾಹಿತಿ ಇಲ್ಲಿದೆ!

ಬಿರು ಬಿಸಿಲಿನ ತಾಪ ಮೈಯನ್ನು ತಾಕದಂತೆ, ಧೋ ಎಂದು ಸುರಿಯುವ ಮಳೆಗೆ ರಕ್ಷಣೆ ನೀಡುವ ಛತ್ರಿಯ ಬಗ್ಗೆ ಕುತೂಹಲಕಾರಿ ಮಾಹಿತಿ ನಿಮಗಾಗಿ. ಮಳೆಯ ಸೂಚನೆ ಸಿಕ್ಕದಂತೆ ಮಳೆಯಿಂದ ರಕ್ಷಣೆ ನೀಡಲು ತಾತ್ಕಾಲಿಕವಾಗಿ ನೆರವಾಗುವ ಛತ್ರಿಗಳು ಆಕರ್ಷಕ ಬಣ್ಣ, ಆಕಾರದಿಂದಲೇ ಹೆಚ್ಚು ಗಮನ ಸೆಳೆಯುತ್ತವೆ ಎಂದರೂ ತಪ್ಪಾಗಲಾರದು. ಅದು ಬಿಡಿ, ಆದರೆ, ಕೊಡೆ ಎಂದ ಕೂಡಲೇ ಎಷ್ಟೋ ಬಾರಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಮರೆತು ಬಂದು ಮನೆಗೆ ತಲುಪಿದ ಮೇಲೆ ಕೊಡೆಯ ನೆನಪಾಗಿ, ಅಯ್ಯೋ !! ಕೊಡೆಯನ್ನು ಮರೆತೇಬಿಟ್ಟೆ ಎಂದು ಮರುಗುವುದು ಸರ್ವೇ ಸಾಮಾನ್ಯ.

ದೇಶಾದ್ಯಂತ ಫೆಬ್ರವರಿ 10 ರಂದು ರಾಷ್ಟ್ರೀಯ ಛತ್ರಿಯ ದಿನವನ್ನಾಗಿ (National Umbrella Day) ಆಚರಿಸಲಾಗುತ್ತದೆ. ನಾವು ಯಾವುದೆ ಹಬ್ಬ ಆಚರಣೆ ಮಾಡುವಾಗಲೂ ಅದರ ಹಿನ್ನೆಲೆ ತಿಳಿದುಕೊಳ್ಳೋದು ಅವಶ್ಯಕ. ಅದೇ ರೀತಿ, ಛತ್ರಿಯ ಹಿನ್ನೆಲೆ ಕೂಡ ಕುತೂಹಲ ಕರಿಯಾಗಿದೆ. ಕೆಲವು ವರ್ಷಗಳಿಂದ ಕೊಡೆ ಬಣ್ಣ, ವಿನ್ಯಾಸ, ಗಾತ್ರ, ತಂತ್ರಜ್ಞಾನದಲ್ಲಿ ಹೊಸ ಹೊಸ ಪ್ರಯೋಗಕ್ಕೆ ತನ್ನನ್ನು ತೆರೆದುಕೊಳ್ಳುತ್ತಿದೆ. ವಿಶೇಷ ರೀತಿಯ ಫೋಲ್ಡಿಂಗ್‌ ವಿನ್ಯಾಸ, ವಾತಾವರಣಕ್ಕೆ ತಕ್ಕಂತೆ ಹೊಳಪು ನೀಡುವ ಬಣ್ಣ, ಮಲ್ಟಿ ಲೇಯರ್‌, ವಿಭಿನ್ನ ಪ್ರಿಂಟ್‌ಗಳನ್ನೊಳಗೊಂಡ, ಆಯತ, ಚೌಕ, ತ್ರಿಕೋನ, ಉರುಟಾದ ಕೊಡೆಗಳು ಮಾರುಕಟ್ಟೆಯಲ್ಲಿ ಮೆರುಗು ಪಡೆದುಕೊಂಡಿವೆ.

ಕಾಲ ಬದಲಾದಂತೆ ತಂತ್ರಜ್ಞಾನದಲ್ಲಿ ಸಾಕಷ್ಟು ಆವಿಷ್ಕಾರಗಳಾಗಿ, ಸಾಮಾನ್ಯ ಕೊಡೆಗಳು ಕೂಡ ವಿಭಿನ್ನ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡಿವೆ. ಅದರಲ್ಲಿಯೂ ಸುಲಭವಾಗಿ ಮಕ್ಕಳ ಚಿತ್ತವನ್ನು ಸೆಳೆಯುವ ಗೊಂಬೆಗಳ ಕೊಡೆಗಳು. ಕೊಡೆಯ ಮೇಲಿನ ಗೊಂಬೆ ಜತೆಗೆ ಬಾರ್ಬಿ, ಸ್ಪೈಡರ್‌ಮೆನ್‌, ಸ್ನೋ ವೈಟ್‌, ಪ್ರಾಣಿ, ಪಕ್ಷಿಗಳ ಚಿತ್ತಾರ ಸೇರಿದಂತೆ ವೈವಿಧ್ಯಮಯ ಆ್ಯನಿಮೇಟೆಡ್‌ ಕೊಡೆಗಳು ಮಾರುಕಟ್ಟೆಯಲ್ಲಿ ಪಾರುಪತ್ಯ ಕಾಯ್ದುಕೊಳ್ಳುತ್ತಿವೆ. ಇದರ ಜೊತೆಗೆ ಸ್ಪರ್ಧೆ ಕೊಡುವಂತೆ ಪಾರದರ್ಶಕ ಕೊಡೆಗಳು, ವಿಭಿನ್ನ ಹಿಡಿಕೆಯಿರುವ ಕೊಡೆಗಳು ಚಿತ್ತಾಕರ್ಷಕವಾಗಿ ಮಳೆಗಾಲಕ್ಕೆ ಕಳೆ ಕಟ್ಟುತ್ತವೆ. ಆದರೆ, ಎಲ್ಲರ ಮನಸೋರೆಗೊಳಿಸುವ ಛತ್ರಿಯ ಹುಟ್ಟಿನ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ. ನಾವೆಲ್ಲ ಬಳಸುವ ಅಂಬ್ರೆಲ್ಲಾ ಎಂಬ ಪದವು ನೆರಳು ಎಂಬ ಅರ್ಥವನ್ನು ಸೂಚಿಸುತ್ತದೆ ಎನ್ನಲಾಗಿದ್ದು ಲ್ಯಾಟಿನ್ ಪದ umbera ನಿಂದ ಹುಟ್ಟಿಕೊಂಡಿದೆ ಎನ್ನಲಾಗಿದೆ.

ಮಳೆಯೆ ಇರಲಿ ಜೊತೆಗೆ ಬಿರು ಬಿಸಿಲೆ ಬಂದರೂ ನಿಮ್ಮನ್ನು ರಕ್ಷಿಸುವ ಛತ್ರಿಯನ್ನು 4,000 ವರ್ಷಗಳ ಹಿಂದೆ ಅನ್ವೇಷಣೆ ಮಾಡಲಾಗಿದೆ. ಈಜಿಪ್ಟ್, ಅಸಿರಿಯಾ, ಗ್ರೀಸ್ ಮತ್ತು ಚೀನಾದ ಆರಂಭಿಕ ನಾಗರಿಕತೆಗಳಲ್ಲಿ ಕೂಡ ಛತ್ರಿ ತನ್ನ ಅಸ್ತಿತ್ವ ಪಡೆದಿತ್ತು.
ಹಾಗೆಂದರೆ, ಪ್ರಾಚೀನ ಕಾಲದಲ್ಲಿ ಇಂದಿನಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗದಿದ್ದರೂ ಕೂಡ ಛತ್ರಿಗಳನ್ನು ಮರ ಮತ್ತು ಮೂಳೆಗಳಿಂದ ಮಾಡಲಾಗುತ್ತಿತ್ತು. ಪ್ರಾಚೀನ ಕಾಲದಲ್ಲಿ ಸೂರ್ಯನ ತಾಪದಿಂದ ರಕ್ಷಿಸಿಕೊಳ್ಳುವ ದೆಸೆಯಲ್ಲಿ ಛತ್ರಿಗಳನ್ನು ಬಳಕೆ ಮಾಡಲಾಗುತ್ತಿತ್ತು. ಇದರ ಬಳಿಕ ಪ್ರಾಚೀನ ರೋಮ್ ನಲ್ಲಿ ಮಳೆಗಾಗಿ ಛತ್ರಿಗಳನ್ನು ಬಳಕೆ ಮಾಡಲಾಗುತ್ತಿತ್ತು.

ಪ್ರಾಚೀನ ಚೀನಾದ ಜನರು ಛತ್ರಿಯ ಮೇಲೆ ಮೇಣದ ಪದರವನ್ನು ಹಾಕಿಕೊಂಡು , ಇದನ್ನು ಮಳೆಯಿಂದ ತಮ್ಮನ್ನು ಕಾಪಾಡಿಕೊಳ್ಳಲು ಬಳಸುತ್ತಿದ್ದರಂತೆ. ಅಷ್ಟೇ ಅಲ್ಲದೆ, 1800 ರ ದಶಕದ ಸುಮಾರಿಗೆ ಮಹಿಳೆಯರು ಈ ಛತ್ರಿಗಳನ್ನು ಸೌಂದರ್ಯ ಸಾಧನವಾಗಿ ಬಳಕೆ ಮಾಡುತ್ತಿದ್ದರು. ಪ್ರಪಂಚದಾದ್ಯಂತ ಫೆಬ್ರವರಿ 10 ರಂದು ಅಂಬ್ರೆಲಾ ದಿನವನ್ನು ಆಚರಿಸಲಾಗುತ್ತದೆ. ಇದಲ್ಲದೆ, ವಿಶ್ವದಲ್ಲಿ ಮೊದಲ ಬಾರಿಗೆ ಮಾರಾಟ ಮಾಡುತ್ತಿದ್ದ ಅಂಗಡಿಗಳು ಯಾವುದು ಗೊತ್ತಾ?? ಜೇಮ್ಸ್ ಸ್ಮಿತ್ ಮತ್ತು ಸನ್ಸ್ ಛತ್ರಿಗಳನ್ನು ಮಾರಾಟ ಮಾಡಲು ಆರಂಭಿಸಿದ ಅಂಗಡಿಗಳಾಗಿದ್ದು, ಒಂದು ಕಾಲದಲ್ಲಿ ಛತ್ರಿ ಯುರೋಪಿನಾದ್ಯಂತ ಸಜ್ಜನಿಕೆಯ ಸಂಕೇತವಾಗಿ ಪರಿಗಣಿಸಲಗಿತ್ತಿತ್ತು.

ಇನ್ನು ಈ ಛತ್ರಿಗಳ ಬಳಕೆ ಹೇಗೆ ಆರಂಭವಾಯಿತು ಎಂದು ತಿಳಿಯ ಬಯಸುವವರಿಗೆ,ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಮಾಹಿತಿ:
ಸೂರ್ಯನ ಪ್ರಖರ ಕಿರಣಗಳಿಂದ ನೆರಳು ಪಡೆಯುವ ಸಲುವಾಗಿ, ಛತ್ರಿಗಳನ್ನು ಬಳಕೆ ಮಾಡಲಾಯಿತು. ಆ ಬಳಿಕ ಚೀನಿಯರು ಮೇಣ ಮತ್ತು ಎಣ್ಣೆಯನ್ನು ಬಳಸಿ ವಾಟರ್ ಪ್ರೂಫ್ ಛತ್ರಿಯನ್ನು ಅನ್ವೇಷಣೆ ಮಾಡಿದರು ಎನ್ನಲಾಗಿದೆ. ಛತ್ರಿಯ ಬಳಕೆ ಆರಂಭವಾದ ಬಳಿಕ, ಶೈಲಿಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ ಎನ್ನಲಾಗಿದ್ದು, ಅದರ ತೂಕದ ವಿಷಯದಲ್ಲಿ ಕೊಂಚ ವ್ಯತ್ಯಾಸ ಮಾಡಲಾಗಿದೆ. ಪರ್ಷಿಯನ್ ಪ್ರವಾಸಿಗನಾಗಿದ್ದ ಬರಹಗಾರ ರೋನಾಸ್ ಹಾನ್ವೇ 30 ವರ್ಷಗಳ ಕಾಲ ಇಂಗ್ಲೆಂಡ್‌ನಲ್ಲಿ ಸಾರ್ವಜನಿಕವಾಗಿ ಒಂದೇ ಛತ್ರಿಯನ್ನು ಬಳಕೆ ಮಾಡಿದ್ದ ಎನ್ನಲಾಗಿದ್ದು, ಆ ಬಳಿಕ ಛತ್ರಿಯ ರೂಪವೇ ಬದಲಾಯಿತು ಎನ್ನಲಾಗಿದೆ. ಇತಿಹಾಸದ ಪುಟಗಳ ತಿರುವಿದರೆ, 16ನೇ ಶತಮಾನದಷ್ಟು ಹಿಂದೆಯೇ ಯೂರೋಪಿನಲ್ಲಿ ಮಹಿಳೆಯರು ಛತ್ರಿಗಳನ್ನು ಬಳಕೆ ಮಾಡುತ್ತಿದ್ದರು. ಮಹಿಳೆಯರಿಗಾಗಿ 2000 ನೇ ಶತಮಾನದಲ್ಲಿ ವಿಭಿನ್ನ ಬಣ್ಣ ಬಣ್ಣದ ಛತ್ರಿಗಳನ್ನು ಪರಿಚಯಿಸಲಾಗಿತ್ತು ಎನ್ನಲಾಗಿದೆ.

Leave A Reply

Your email address will not be published.