ಗಂಡ ಹೆಂಡಿರ ಜಗಳ: ಅನೈತಿಕ ಸಂಬಂಧದ ಹಿನ್ನೆಲೆ ಎರಡನೇ ಹೆಂಡತಿಯ ಸೀಮಂತದಲ್ಲಿ ಜಟಾಪಟಿ!!
ಪ್ರೀತಿ ಎಂಬ ನವಿರಾದ ಭಾವಕ್ಕೆ ನಂಬಿಕೆ ಅತ್ಯವಶ್ಯಕ. ನೈಜ ಪ್ರೀತಿ ಬಣ್ಣ ಧರ್ಮದ ಎಲ್ಲೆಯ ಗಡಿ ದಾಟಿ ಸ್ವಚ್ಚಂದ ಹಕ್ಕಿಯಂತೆ ಪ್ರೇಮಿಸಿ ಮದುವೆ ಎಂಬ ಬಂಧಕ್ಕೆ ಮುನ್ನುಡಿ ಬರೆಯುವುದು ಸಹಜ. ಪ್ರೀತಿಯ ನಿಜವಾದ ವ್ಯಾಖ್ಯಾನ ನೀಡುವಂತಹ ಅದೆಷ್ಟೋ ಆದರ್ಶ ಅಪರೂಪದ ಜೋಡಿಗಳನ್ನು ನಾವು ನೋಡಬಹುದು. ಪ್ರೀತಿ ಪ್ರೇಮ ಪ್ರಣಯ ಎಂದು ನಾಲ್ಕು ದಿನ ಅಲೆದಾಡಿ ಮತ್ತೆ ಮದುವೆ ಎಂಬ ಬಂಧಕ್ಕೆ ಕಟ್ಟು ಬಿದ್ದ ಮೇಲೆ ಅನುಮಾನ ಎಂಬ ಪೆಡಂಭೂತ ಮೈಗಂಟಿಕೊಂಡು ಬಿಟ್ಟರೆ ಅಲ್ಲಿಗೆ ಸಂಬಂಧ ಕೊನೆಗೊಳ್ಳಲು ಆರಂಭವೆಂದೇ ಅರ್ಥೈಸಬಹುದು.ಇದೆ ರೀತಿ ಅನುಮಾನದ ಪರಿಣಾಮ ಎರಡು ಜೋಡಿಗಳ ಮನಸ್ತಾಪ ಬೀದಿ ಗಲಾಟೆ ಮೂಲಕ ಬಯಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪೋಷಕರೇ ಮುಂದೆ ನಿಂತು ಹಾರೈಸಿ ನಡೆಸಿದ ಮಂಗಳ ಕಾರ್ಯಕ್ಕೆ ಜೋಡಿಗಳಿಬ್ಬರು ಒಮ್ಮತದಿಂದ ಸಮ್ಮತಿಸಿ ಸಪ್ತಪದಿ ತುಳಿದಿದ್ದರು. ಆದರೆ, ಮದುವೆಯಾದ ಮೇಲೆ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಸಂಬಂಧದ ನಡುವೆ ಬಿರುಕು ಮೂಡಿದೆ. ನಗರದ ಬಾಗಲೂರು ನಿವಾಸಿ ಚೈತ್ರಾ ಚಂದ್ರಲೇಔಟ್ ನಿವಾಸಿ ತೇಜಸ್ ಅನ್ನು ವರಿಸಿದ್ದು, ಆದರೆ ಮದುವೆಯಾಗಿ ಮಧು ಚಂದ್ರ ಮುಗಿಯುವ ಮೊದಲೇ ಇವರಿಬ್ಬರ ನಡುವೆ ಅನುಮಾನ ಭುಗಿಲೆದ್ದು, ಇಬ್ಬರು ಒಬ್ಬರ ಮೇಲೆ ಆರೋಪ- ಪ್ರತ್ಯಾರೋಪ ಮಾಡುವ ಮೂಲಕ ಮದುವೆ ಎಂಬ ಬಂಧಕ್ಕೆ ಇರುವ ವ್ಯಾಖ್ಯಾನವನ್ನೇ ಸುಳ್ಳು ಎಂದು ನಿರೂಪಿಸುವಲ್ಲಿ ನಿರತರಾಗಿದ್ದರು.
ನವ ದಂಪತಿಗಳಿಬ್ಬರಿಗೂ ಮದುವೆಯಾಗುವ ಮೊದಲೇ ಪ್ರೀತಿ ಪ್ರೇಮದ ಜೊತೆಗೆ ಅಕ್ರಮ ಸಂಬಂಧಗಳಿದ್ದವು ಎಂಬ ಗುಮಾನಿ ಮನೆಮಾಡಿ ಕೊನೆಗೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಈ ನಡುವೆ ತೇಜಸ್ ಮೊದಲ ಪತ್ನಿ ಇದ್ದರೂ ಕೂಡ ಮತ್ತೊಂದು ಮದುವೆಯಾಗಿದ್ದು , ಲೇಖಶ್ರೀ ಎಂಬ ಎರಡನೇ ಹೆಂಡತಿ ತುಂಬು ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಸದ್ಯ, ಲೇಖಶ್ರೀ ಅವರ ಸೀಮಂತ ಕಾರ್ಯ ಚಂದ್ರಲೇಔಟ್ ನಿವಾಸದಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿದು ಮೊದಲ ಪತ್ನಿ ಚೈತ್ರ ಮಹಿಳಾ ಸಂಘಟನೆಯ ಜೊತೆಗೆ ತೇಜಸ್ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಪತಿ ತನಗೆ ಮೋಸ ಮಾಡಿದ್ದಾರೆ ಎಂದು ಚೈತ್ರ ಆರೋಪಿಸಿದ ಹಿನ್ನೆಲೆ ಶುಭ ಕಾರ್ಯ ನಡೆಯಬೇಕಿದ್ದ ಸ್ಥಳದಲ್ಲಿ ಗಲಾಟೆ ನಡೆಯಲು ವೇದಿಕೆ ಕಲ್ಪಿಸಿದಂತಾಗಿದೆ. ಈ ನಡುವೆ ಚೈತ್ರ ತನ್ನ ಪತಿ ಲೇಖಶ್ರೀ ಸೀಮಂತ ಕಾರ್ಯಕ್ರಮದಲ್ಲಿ ತನ್ನ ಹಾಗೂ ತಾಯಿ ಮೇಲೆ ಹಲ್ಲೆ ನಡೆಸಿರುವ ಕುರಿತು ಆರೋಪ ಮಾಡಿದ್ದಾರೆ.
ಈ ನಡುವೆ ಮೊದಲನೇ ಮದುವೆಯ ವಿಚಾರ ತಿಳಿಯದ ಲೇಕಾಶ್ರೀ ಮನೆಯವರು, ಮೊದಲನೇ ಹೆಂಡತಿ ಇದ್ದರೂ ಮದುವೆಯಾಗಿದ್ದೇಕೆ ಜೊತೆಗೆ ಮಗಳ ಸೀಮಂತ ಕೂಡ ನಡೆಯುತ್ತಿದೆ ಎಂದು ಪ್ರಶ್ನಿಸಿದ್ದು, ತೇಜಸ್ ತನ್ನ ಮೊದಲ ಪತ್ನಿ ಚೈತ್ರ ಮೇಲೆ ಆರೋಪ ಮಾಡಿದ್ದು, ಆಕೆ ಹೇಳುತ್ತಿರುವುದೆಲ್ಲ ಸುಳ್ಳು ಎಂದಿದ್ದಾನೆ. ಆಕೆಗೆ ಮದ್ವೆಯ ಮೊದಲೇ ಬೇರೆ ಅಕ್ರಮ ಸಂಬಂಧವಿತ್ತು. ಆದರೂ ಕೂಡ ತಾನು ತನ್ನ ಮೊದಲ ಹೆಂಡತಿಯ ಸಲುವಾಗಿ ಕೋರ್ಟ್ ಮೆಟ್ಟಿಲೇರಿದ್ದು, ಆಕೆ ನ್ಯಾಯಾಲಯದಲ್ಲಿ 40 ಲಕ್ಷ ಪರಿಹಾರ ಕೇಳಿದ್ದು ಅಷ್ಟು ಕೊಡಲು ತನಗೆ ಸಾಧ್ಯವಿಲ್ಲ ಎಂದು ಹೇಳಿದ್ದೇನೆ ಎಂದು ತೇಜಸ್ ಹೇಳಿದ್ದಾನೆ. ಅಷ್ಟೆ ಅಲ್ಲದೆ, ಚೈತ್ರ ಮಹಿಳೆಯರನ್ನು ಕರೆಸಿ ನನ್ನ ತಂಗಿಯ ಮಗಳ ಹುಟ್ಟಿದ ಹಬ್ಬದ ಸಂದರ್ಭ ಕೂಡ ಗಲಾಟೆ ನಡೆಸಿ ದಾಂಧಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ. ತನ್ನ ಮೊದಲ ಪತ್ನಿ ಚೈತ್ರ ಮಾಡುತ್ತಿರುವ ಎಲ್ಲ ಆರೋಪಗಳನ್ನು ತೇಜಸ್ ಅಲ್ಲಗಳೆದಿದ್ದಾರೆ. ಇದರ ಜೊತೆಗೆ, ಚಂದ್ರಲೇಔಟ್ ಪೊಲೀಸರಿಗೆ ಚೈತ್ರ ಮತ್ತು ತೇಜಸ್ ತಂದೆ ಕೃಷ್ಣಪ್ಪ ದೂರನ್ನು ನೀಡಿದ್ದಾರೆ ಎನ್ನಲಾಗಿದೆ.
ಒಬ್ಬರ ಮೇಲೊಬ್ಬರು ಪ್ರತ್ಯಾರೋಪ ಮಾಡಿಕೊಳ್ಳುತ್ತಿರುವ ಈ ಜೋಡಿ ಸೋಶಿಯಲ್ ಮೀಡಿಯಾದ ಇನ್ಸ್ಟಾ, ಫೇಸ್ಬುಕ್, ವಾಟ್ಸ್ ಅಪ್ ನಲ್ಲಿ ತಮ್ಮ ಅನುಮಾನಕ್ಕೆ ಸಾಥ್ ನೀಡುವ ಜೊತೆಗೆ ಆರೋಪಕ್ಕೆ ಇಂಬು ನೀಡುವ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಪೊಲೀಸರೇ ಇವರ ಕಥೆ ಕೇಳಿ ಸುಸ್ತಾಗಿ ಬಿಟ್ಟಿದ್ದಾರೆ.