Muslim Women: ಮಹಿಳೆಯರಿಗೆ ಮಸೀದಿಗಳಲ್ಲಿ ಪ್ರಾರ್ಥಿಸಲು ನಿರ್ಬಂಧವಿಲ್ಲ!
ಮಸೀದಿ ಪ್ರವೇಶಿಸಲು ಮುಸ್ಲಿಂ ಮಹಿಳೆಯರಿಗೆ ಯಾವುದೇ ರೀತಿಯ ನಿರ್ಬಂಧ ಇರಬಾರದು. ಹಾಗೇ ನಿರ್ಬಂಧವನ್ನು ಹೇರಿದ್ದಲ್ಲಿ ಅದನ್ನು ಅಕ್ರಮ ಎಂದು ಘೋಷಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯ ಕುರಿತಂತೆ ಸದ್ಯ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸ್ಪಷ್ಟನೆ ನೀಡಿದೆ.
ಫೆಬ್ರುವರಿ 2020ರಲ್ಲಿ ವಕೀಲರಾದ ಸಂದೀಪ್ ತಿವಾರಿ ಮತ್ತು ರಾಮೆಶ್ವರ್ ಗೋಯಲ್ ಅವರ ಸುಪ್ರೀಂಕೋರ್ಟ್ಗೆ ಫರ್ಹಾ ಅನ್ವರ್ ಶೇಖ್ ಅವರು ಈ ಕುರಿತಾಗಿ ಅರ್ಜಿ ಸಲ್ಲಿಸಿದ್ದರು. ಮಸೀದಿ ಪ್ರವೇಶಕ್ಕೆ ಇರುವ ನಿರ್ಬಂಧವನ್ನು ಅಸಂವಿಧಾನಿಕ ಜೊತೆಗೆ ಅಕ್ರಮ ಎಂದು ಘೋಷಿಸಬೇಕೆಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಕಾರಣವನ್ನು ಕೂಡ ಅರ್ಜಿದಾರರು ನೀಡಿದ್ದು, ಈ ನಿರ್ಬಂಧವು ಎಲ್ಲ ಭಾರತೀಯರಿಗೆ ಸಮಾನತೆ, ತಾರತಮ್ಯ ಇಲ್ಲದ ಬದುಕು ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಖಚಿತಪಡಿಸುವ ಸಂವಿಧಾನದ 14, 15, 21, 25 ಮತ್ತು 29ನೇ ವಿಧಿಗಳನ್ನು ಉಲ್ಲಂಘಿಸುತ್ತವೆ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು.
ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಅಥವಾ ಪ್ರವಾದಿ ಮೊಹಮದ್ ಪೈಗಂಬರ್ ಅವರ ವಾಣಿಗಳಲ್ಲಿ ಮಹಿಳೆಯರಿಗೆ ಮಸೀದಿ ಪ್ರವೇಶ ನಿರಾಕರಣೆ ಮಾಡುವುದನ್ನು ಉಲ್ಲೇಖಿಸಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ. ಇದಲ್ಲದೇ ಪವಿತ್ರ ಯಾತ್ರಾಸ್ಥಳ ‘ಮೆಕ್ಕಾ’ದಲ್ಲಿ ನಡೆಯುವ ಯಾವುದೇ ಧಾರ್ಮಿಕ ವಿಧಿಗಳಲ್ಲಿ ಲಿಂಗ ತಾರತಮ್ಯವಿಲ್ಲ ಜೊತೆಗೆ ಕಾಬಾ ಪ್ರದಕ್ಷಿಣಿಗೆ ಪುರುಷರಂತೆ ಮಹಿಳೆಯರಿಗೂ ಅವಕಾಶವಿದೆ ಎಂದು ಮನವಿಯಲ್ಲಿ ಅವರು ತಿಳಿಸಿದ್ದರು. ಮಸೀದಿಯ ‘ಮುಸಲ್ಲಾ’ (ಪ್ರಾರ್ಥನಾ ಸ್ಥಳ) ಪ್ರದೇಶದಲ್ಲಿ ಯಾವುದೇ ತಾರತಮ್ಯ, ಅಡೆತಡೆ ಇಲ್ಲದೆ ಪ್ರಾರ್ಥಿಸಲು ಅವಕಾಶ ಕಲ್ಪಿಸಬೇಕು ಎಂದು ಅರ್ಜಿದಾರರು ಮನವಿ ಸಲ್ಲಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ , ಫರ್ಹಾ ಶೇಖ್ ಅವರ ಮನವಿಯನ್ನು ಅಂಗೀಕರಿಸಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಸ್.ಬೊಪಣ್ಣ ಮತ್ತು ಹೃಷಿಕೇಶ್ ರಾಯ್ ಅವರಿದ್ದ ನ್ಯಾಯಪೀಠವು ಮೇ 2020ರಲ್ಲಿ ಕೇಂದ್ರ ಸರ್ಕಾರ, ಕೇಂದ್ರ ವಕ್ಫ್ ಮಂಡಳಿ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಜಮಾತ್ ಉಲ್ಮಾ-ಎ-ಹಿಂದ್ ಮತ್ತು ದಾರುಲ್ ಉಲ್ಮಾ ದೇವಬಂದ್ ಸೇರಿ 10 ಸಂಸ್ಥೆಗಳಿಗೆ ನೊಟೀಸ್ ಜಾರಿ ಮಾಡಿ ಪ್ರತಿಕ್ರಿಯಿಸುವಂತೆ ಸೂಚಿಸಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ‘ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ (All India Muslim Personal Law Board – AIMPLB), ಇಸ್ಲಾಂ ಧಾರ್ಮಿಕ ಪಠ್ಯಗಳು ಮಸೀದಿಗಳಲ್ಲಿ ನಮಾಜ್ (Namaz) ಮಾಡಲು ಮಹಿಳೆಯರನ್ನು ನಿರ್ಬಂಧಿಸುವುದಿಲ್ಲ ಎಂಬುದಾಗಿ ಬುಧವಾರ ಸುಪ್ರೀಂಕೋರ್ಟ್ಗೆ (Supreme Court) ಸತ್ಯಾಪನಾ ಪ್ರಮಾಣಪತ್ರ ಸಲ್ಲಿಸಿ (ಅಫಿಡವಿಟ್) ಮಾಹಿತಿ ನೀಡಿದೆ.
ವಕೀಲ ಶಂಶದ್ ಅವರ ಮೂಲಕ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂಕೋರ್ಟ್ಗೆ ಪ್ರತಿಕ್ರಿಯೆ ನೀಡಿದ್ದು, ಮೆಕ್ಕಾ, ಮದೀನಾಗಳಲ್ಲಿ ಪೂರೈಸಬೇಕಿರುವ ಧಾರ್ಮಿಕ ವಿಧಿಗಳನ್ನು ವಿವರವಾಗಿ ತಿಳಿಸಲಾಗಿದೆ. ಅಲ್ಲಿ ನಡೆಯುವ ವಿಧಿಗಳು ಉಳಿದೆಲ್ಲೆಡೆ ಅನ್ವಯಿಸಬೇಕಿಲ್ಲ ಎಂದು ಅಫಿಡವಿಟ್ನಲ್ಲಿ ಹೇಳಲಾಗಿದೆ. ಮಸೀದಿಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಗ್ಗೂಡಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದು ಎಲ್ಲಿಯೂ ಹೇಳಿಲ್ಲ. ಮೆಕ್ಕಾದಲ್ಲಿಯೂ ಮಸ್ಜಿದ್-ಅಲ್-ಹರಾಮ್ ಅಕ್ಕಪಕ್ಕದಲ್ಲಿರುವ ಮಸೀದಿಗಳಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ರ ಕಾಲದಿಂದಲೂ ಪುರುಷ-ಮಹಿಳೆಯರು ಜೊತೆಗೂಡಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿರಲಿಲ್ಲ ಎಂಬುದನ್ನು ಗಮನಿಸಬೇಕು. ಮದೀನಾದ ನಬಾವಿ ಮಸೀದಿಯಲ್ಲಿ ‘ವಜು’ (ಶುದ್ಧಿಸ್ನಾನ) ಪ್ರಕ್ರಿಯೆಗೂ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ’ ಎಂದು ಮಂಡಳಿ ವಿವರಣೆ ನೀಡಿದೆ.
ಮಸೀದಿಗಳು ಖಾಸಗಿ ಆಸ್ತಿಗಳಾಗಿರುವ ಹಿನ್ನೆಲೆ ಮುತುವಲ್ಲಿಗಳು ಇದನ್ನು ನಿರ್ವಹಿಸುತ್ತಾರೆ. ಇಸ್ಲಾಂ ವೈಯಕ್ತಿಕ ಕಾನೂನು ಮಂಡಳಿಯು ಸಲಹೆಗಳ ಟಿಪ್ಪಣಿ ರವಾನೆ ಮಾಡಬಹುದಲ್ಲದೆ, ಹೀಗೆಯೇ ನಡೆದುಕೊಳ್ಳಬೇಕು ಎಂದು ಸೂಚಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದು ಸಂಪೂರ್ಣ ಖಾಸಗಿಯಾದ, ಧಾರ್ಮಿಕ ನಂಬಿಕೆಗಳನ್ನು ಅವಲಂಬಿತವಾಗಿರುವ ಸ್ಥಳಗಳ ವಿಚಾರದಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ನ್ಯಾಯಾಲಯಗಳು ಸಂವಿಧಾನದ 14, 15, 21, 25 ಮತ್ತು 29ನೇ ವಿಧಿಗಳ ಅನ್ವಯ ಯಾವುದೇ ಧಾರ್ಮಿಕ ಆಚರಣೆಗಳನ್ನು ಪರಿಶೀಲಿಸುವುದು ಇಲ್ಲವೇ ಸರಿಪಡಿಸುವುದು ತರವಲ್ಲ ಎಂದು ಅಫಿಡವಿಟ್ನಲ್ಲಿ ಮಂಡಳಿಯು ತಿಳಿಸಿದೆ ಎನ್ನಲಾಗಿದೆ.
‘ಮಹಿಳೆಯರ ಮಸೀದಿ ಪ್ರವೇಶಕ್ಕೆ ಇಸ್ಲಾಂ ಯಾವುದೇ ನಿರ್ಬಂಧ ಹೇರಿಲ್ಲ ಎಂದು ತಿಳಿಸಿದ್ದು, ಮಸೀದಿಯಲ್ಲಿ ಪುರುಷರು ಮತ್ತು ಮಹಿಳೆಯರು ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಲು ಸ್ಥಳಾವಕಾಶ ಇರಬೇಕು’ ಎಂಬುದನ್ನು ಸ್ಪಷ್ಟ ಪಡಿಸಿದೆ. ಮೆಕ್ಕಾ ಮತ್ತು ಮದೀನಾ ಪವಿತ್ರಸ್ಥಳಗಳಲ್ಲಿ ನಡೆಯುವ ಹಜ್ ಅಥವಾ ಉಮ್ರಾ ಧಾರ್ಮಿಕ ವಿಧಿಗಳಲ್ಲಿ ಪುರುಷ ಸಹವರ್ತಿಗಳೊಂದಿಗೆ ಪಾಲ್ಗೊಳ್ಳಲು ಮಹಿಳೆಯರಿಗೆ ಅವಕಾಶವಿದ್ದು, ಅದರಂತೆ ಮಸೀದಿಗಳಲ್ಲಿಯೂ ಅವಕಾಶ ಕಲ್ಪಿಸಬೇಕು ಎನ್ನುವ ಅರ್ಜಿದಾರರ ವಾದದಲ್ಲಿ ತಪ್ಪು ಮಾಹಿತಿಗಳು ಅಡಕವಾಗಿವೆ ಎಂದು ಮಂಡಳಿಯು ತಿಳಿಸಿದೆ ಎನ್ನಲಾಗಿದೆ.
ದೈನಂದಿನ ಪ್ರಾರ್ಥನೆಗಳಲ್ಲಿ ಮಸೀದಿಗಳಲ್ಲಿ ನಡೆಯುವ ಅಥವಾ ಶುಕ್ರವಾರದ ಪ್ರಾರ್ಥನೆಗಳಲ್ಲಿ ಭಾಗವಹಿಸುವ ವಿಚಾರದಲ್ಲಿ ಎಂಬ ವಿಧಿಯನ್ನು ಮಹಿಳೆಯರಿಗೆ ಇಸ್ಲಾಂ ಕಡ್ಡಾಯ ಮಾಡಿಲ್ಲ ಎಂದು ತಿಳಿಸಿದ್ದು, ಪ್ರಾರ್ಥನೆ ಸಲ್ಲಿಸುವ ಮಹಿಳೆ ಅಥವಾ ಪುರುಷರ ಪುಣ್ಯಪ್ರಾಪ್ತಿ ವಿಚಾರದಲ್ಲಿ ಯಾವುದೇ ರೀತಿಯ ಭೇಧ ಭಾವ ಮಾಡಿಲ್ಲ. ಆದರೆ ಮಹಿಳೆಯರಿಗೆ ಮಸೀದಿ ಅಥವಾ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಆಯ್ಕೆ ನೀಡಲಾಗಿರುವ ಕುರಿತು ಮಂಡಳಿಯು ವಿವರಣೆ ನೀಡಿದೆ. ಭಾರತದ ಹಲವೆಡೆ ಮಸೀದಿಗಳಲ್ಲಿ ನಡೆಯುವ ಈದ್ ಪ್ರಾರ್ಥನೆಗಳಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ‘ವಜು’, ಪ್ರಾರ್ಥನಾ ಸ್ಥಳ, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಒದಗಿಸಲಾಗುತ್ತದೆ.
ಅರ್ಜಿದಾರರು ಮಾಡಿರುವ ಮನವಿಯ ಅನುಸಾರ, ಮಸೀದಿಗಳಿಗೆ ಮಹಿಳೆಯರ ಪ್ರವೇಶ ನಿರಾಕರಿಸಿ ಹೊರಡಿಸಿರುವ ಫತ್ವಾ ರದ್ದುಪಡಿಸುವಂತೆ ಇಸ್ಲಾಂ ಮಂಡಳಿ ಪ್ರತಿಕ್ರಿಯಿಸಿದ್ದು, ಫತ್ವಾಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ತಿಳಿಸಿದೆ. ಅಷ್ಟೇ ಅಲ್ಲದೆ, ಅವು ಕೇವಲ ಧಾರ್ಮಿಕ ಪಠ್ಯಗಳು ಮತ್ತು ಸಿದ್ಧಾಂತಗಳನ್ನು ಅವಲಂಬಿಸಿರುವ ಅನಿಸಿಕೆ ಎಂದು ತಿಳಿಸಿದೆ. ಇಂಥ ಫತ್ವಾಗಳನ್ನು ಯಾವುದೇ ಮುಸ್ಲಿಂ ಧಾರ್ಮಿಕ ಪಠ್ಯಗಳ ಆಧಾರದ ಮೇಲೆ ನಿರಾಕರಣೆ ಮಾಡಲು ಅವಕಾಶವಿದ್ದು, ನ್ಯಾಯಾಲಯದ ಮೂಲಕ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ನ್ಯಾಯಾಲಯಗಳು ಮಧ್ಯಪ್ರವೇಶಿಸಿದರೆ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂದು ಮಂಡಳಿಯು ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
2019ರಲ್ಲಿ ಪುಣೆ ಮೂಲದ ದಂಪತಿಗಳು ಮಹಿಳೆಯರಿಗೆ ಮಸೀದಿ ಪ್ರವೇಶ ನೀಡಬೇಕೆಂದು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ಇದಕ್ಕೆ ಪ್ರತಿಕ್ರಿಯಿಸಿದ್ದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು, ‘ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ಅವಕಾಶವಿದೆ ಎಂಬುದನ್ನು ಸ್ಪಷ್ಟ ಪಡಿಸಿದೆ ಎನ್ನಲಾಗಿದೆ. ಮಹಿಳೆಯರಿಗೆ ಅವಕಾಶ ನಿರಾಕರಿಸುವ ಯಾವುದೇ ಫತ್ವಾಕ್ಕೆ ಮಾನ್ಯತೆ ಇಲ್ಲ ಎಂದು ತಿಳಿಸಿದ್ದು, ಅಂಥ ಫತ್ವಾಗಳನ್ನು ನಿರ್ಲಕ್ಷಿಸಬಹುದು’ ಎಂದು ಸೂಚಿಸಿದೆ ಎನ್ನಲಾಗಿದೆ.
ಆ ಬಳಿಕ ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ 9 ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ಪರಿಶೀಲನೆ ನಡೆಸಲು ರವಾನೆ ಮಾಡಲಾಗಿದ್ದು, ನ್ಯಾಯಾಲಯವು ಈ ಪ್ರಕರಣವನ್ನು ಶಬರಿಮಲೆ (ಕಾಂತಾರು ರಾಜೀವರು vs ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್) ಪ್ರಕರಣದೊಂದಿಗೆ ಜೊತೆಗೂಡಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿತ್ತು. ಧಾರ್ಮಿಕ ಆಚರಣೆಗಳನ್ನು ಪರಿಶೀಲನೆ ನಡೆಸಲು ಒಳಪಡುವ ಕುರಿತ ವಿಷಯದಲ್ಲಿ ನ್ಯಾಯಾಂಗದ ವ್ಯಾಪ್ತಿ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ನೈತಿಕತೆಯ ಬಗ್ಗೆ ನ್ಯಾಯಾಂಗದ ಪರಿಶೀಲನೆ ಮಾಡಬೇಕಾಗಿದೆ. ಸುಪ್ರೀಂಕೋರ್ಟ್ನಲ್ಲಿ ಪ್ರಕರಣವು ಇನ್ನೂ ವಿಚಾರಣೆ ನಡೆಯಬೇಕಾಗಿದ್ದು, 2018ರ ಶಬರಿಮಲೆ ತೀರ್ಪಿಗೆ ಸಂಬಂಧಿಸಿದಂತೆ ಕೂಡ ಮರುಪರಿಶೀಲನೆ ಅರ್ಜಿ ಸಲ್ಲಿಕೆಯಾಗಿದೆ ಎಂದು ತಿಳಿದು ಬಂದಿದೆ.