Walking Benefits : ರಾತ್ರಿ ಊಟದ ನಂತರ ವಾಕಿಂಗ್ ಮಾಡುವವರಿಗೆ ಇಲ್ಲಿದೆ ಮುಖ್ಯವಾದ ಮಾಹಿತಿ!
ನಾವು ಇತ್ತೀಚಿಗೆ ಬಹಳ ಸೋಮಾರಿಗಳಾಗಿದ್ದೇವೆ. ಕೇವಲ ತಿನ್ನಲು ಇಷ್ಟಪಡುತ್ತೇವೆ ಆದರೆ ದೇಹಕ್ಕೆ ದೈಹಿಕ ಕಸರತ್ತನ್ನು ನೀಡಲು ಮನಸ್ಸು ಮಾಡುವುದಿಲ್ಲ. ಇಂದಿನ ಬ್ಯುಸಿ ಷೆಡ್ಯೂಲ್’ನಲ್ಲಿ ನಮ್ಮ ಆರೋಗ್ಯ ಬಗ್ಗೆ ಕಾಳಜಿವಹಿಸಲು ಸಮಯವಿರುವುದಿಲ್ಲವಾದರೂ, ಫಿಟ್‌ನೆಸ್ ಮತ್ತು ಆರೋಗ್ಯದ ಬಗ್ಗೆ ಗಮನಹರಿಸಬೇಕಾದದ್ದು ಅತ್ಯಗತ್ಯ. ವ್ಯಾಯಾಮ ಮಾಡದಿದ್ದರು, ದಿನವಿಡೀ ಫಿಟ್ ಆಗಿರಲು, ರಾತ್ರಿ ಹೊತ್ತು ಊಟದ ನಂತರ ವಾಕಿಂಗ್ ಹೋದರೆ ಸಾಕು, ಇದರಿಂದ ಹಲವಾರು ಆರೋಗ್ಯ ಪ್ರಯೋಜನಗನ್ನು ಪಡೆಯಬಹುದು.
ಊಟ ಆದ ಮೇಲೆ ವಾಕಿಂಗ್ ಮಾಡುವುದು ಎಲ್ಲದಕ್ಕೂ ಒಳ್ಳೆಯದು. ನೀವು ಉತ್ತಮ ಆಹಾರ ಪದ್ಧತಿ ಯನ್ನು ಹೊಂದುವುದು ನಿಮ್ಮ ದೇಹಕ್ಕೆ ಎಷ್ಟು ಅವಶ್ಯಕವಾಗಿದೆಯೋ, ಹಾಗೆಯೇ ಆಹಾರ ಸೇವನೆ ಮಾಡಿದ ನಂತರ ಅದನ್ನು ಸರಿಯಾದ ರೀತಿಯಲ್ಲಿ ಜೀರ್ಣ ಮಾಡಿಕೊಳ್ಳುವುದು, ದೇಹದಲ್ಲಿ ಕ್ಯಾಲರಿಗಳನ್ನು ಉಪಯೋಗಿಸಿ ಕೊಳ್ಳುವುದು, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವುದು ಜೊತೆಗೆ ಟ್ರೈಗ್ಲಿಸರೈಡ್ ಅಂಶ ಗಳ ಮೇಲೆ ನಿಯಂತ್ರಣ ಹೊಂದುವುದು ಬಹಳ ಮುಖ್ಯವಾಗಿದೆ. ಹೀಗಾಗಿ ನೀವು ಊಟ ಆದ ತಕ್ಷಣ ಕನಿಷ್ಠ 15 ನಿಮಿಷಗಳ ಕಾಲ ವಾಕಿಂಗ್ ಮಾಡುವುದು ಅವಶ್ಯಕವಾಗಿದೆ.
ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ:- ಆಹಾರ ಪದ್ಧತಿಯು ಸಮತೋಲನದಿಂದ ಕೂಡಿದ್ದರೆ, ದೇಹದಲ್ಲಿ ಜೀರ್ಣಶಕ್ತಿ ಕೂಡ ಚೆನ್ನಾಗಿರುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಹೆಚ್ಚಿನ ಗ್ಯಾಸ್ಟ್ರಿಕ್ ಕಿಣ್ವಗಳನ್ನು ಉತ್ಪಾದಿಸಲು ವಾಕಿಂಗ್ ಮಾಡುವುದರಿಂದ ನಿಮ್ಮ ದೇಹಕ್ಕೆ ಸಹಾಯವಾಗುತ್ತದೆ.
ನಿದ್ರೆಯನ್ನು ಸುಧಾರಿಸುತ್ತದೆ: ಊಟ ಆದ ನಂತರ ವಾಕಿಂಗ್ ಮಾಡುವುದರಿಂದ ನಿಮಗೆ ಸಿಗುವ ಪ್ರಯೋಜನಗಳು ಒಂದೆರಡಲ್ಲ. ಊಟ ಮಾಡಿದ ತಕ್ಷಣ ಹಾಸಿಗೆಗೆ ಹೋಗಿ ಮಲಗಿಕೊಳ್ಳುವುದು ಅಷ್ಟು ಸಮಂಜಸವಲ್ಲ. ಅದರ ಬದಲು ಸ್ವಲ್ಪ ಹೊತ್ತು ವಾಕಿಂಗ್ ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತಸಂಚಾರ ಉತ್ತಮಗೊಳ್ಳುತ್ತದೆ ಜೊತೆಗೆ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ರಾತ್ರಿಯ ಸಮಯದಲ್ಲಿ ನಿಮಗೆ ನಿದ್ರೆ ತಾನಾಗಿಯೇ ಬರುತ್ತದೆ. ಬೇಕಾದರೆ ಒಮ್ಮೆ ಟ್ರೈ ಮಾಡಿ ನೋಡಿ.
ಚಯಾಪಚಯವನ್ನು ಹೆಚ್ಚಿಸುತ್ತದೆ:- ರಾತ್ರಿಯ ಊಟದ ನಂತರ ನಡೆಯುವುದರಿಂದ ದೇಹದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಇದು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಆದರೆ ಆಹಾರ ಸೇವಿಸಿದ ಕೂಡಲೇ ವಿಶ್ರಾಂತಿ ತೆಗೆದುಕೊಳ್ಳುವುದು ಅಥವಾ ಕುಳಿತುಕೊಳ್ಳುವುದರಿಂದ ದೇಹದ ತೂಕ ಇನ್ನಷ್ಟು ಹೆಚ್ಚಾಗುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:- ರಾತ್ರಿ ಊಟದ ನಂತರ ನೀವು ನಿಯಮಿತವಾಗಿ ವಾಕ್ ಮಾಡಿದರೆ, ಇದು ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುವುದಲ್ಲದೇ ದೇಹದಲ್ಲಿನ ಕಲ್ಮಶವನ್ನು ತೆಗೆದುಹಾಕಲು ಮತ್ತು ನಿಮ್ಮ ಅಂಗಗಳ ಸ್ಥಿತಿಯನ್ನು ಸುಧಾರಿಸಲು, ಸಕ್ರಿಯಗೊಳಿಸಲು ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ರಕ್ತದ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ:- ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ಜನರು ಈ ವಿಚಾರದ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ನೀವು ಸಹ ಭೋಜನದ ನಂತರ ರಾತ್ರಿ ವಾಕಿಂಗ್ ಮಾಡುವ ಅಭ್ಯಾಸ ಇಟ್ಟುಕೊಂಡರೆ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಇದ್ದಕ್ಕಿದ್ದಂತೆ ಹೆಚ್ಚಾಗುವ ಸಾಧ್ಯತೆ ಇರುವುದಿಲ್ಲ. ಏಕೆಂದರೆ ದೈಹಿಕ ವ್ಯಾಯಾಮದ ಸಮಯದಲ್ಲಿ ದೇಹವು ನಿಮ್ಮ ರಕ್ತದಲ್ಲಿನ ಕೆಲವು ಗ್ಲೂಕೋಸ್ ಅನ್ನು ಬಳಸಿಕೊಳ್ಳುತ್ತದೆ. ಹಾಗಾಗಿ, ಗ್ಲೂಕೋಸ್ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಆರೋಗ್ಯಕರವಾದ ದೇಹ ನಿಮ್ಮದಾಗುತ್ತದೆ.
ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ:- ಮಧ್ಯರಾತ್ರಿಯ ವೇಳೆ ಏನಾದರೂ ತಿನ್ನಬೇಕು ಎಂದು ಹಲವರಿಗೆ ಬಯಕೆಯಾಗುತ್ತದೆ. ಆದರೆ, ರಾತ್ರಿ ನಿಯಮಿತ ವಾಕಿಂಗ್ ಮಾಡುವುದರಿಂದ ಇದನ್ನು ಕಡಿಮೆ ಮಾಡಬಹುದು. ಹಲವಾರು ವರದಿಗಳ ಪ್ರಕಾರ, 15 ನಿಮಿಷಗಳ ಕಾಲ ಚುರುಕಾಗಿ ನಡೆಯುವುದರಿಂದ ಕಡುಬಯಕೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ:- ರಾತ್ರಿ ಊಟದ ನಂತರ ನೀವು 15 ನಿಮಿಷ ವಾಕಿಂಗ್ ಮಾಡಿದರೆ ಸಾಕು. ನಿಮ್ಮ ದೇಹದಲ್ಲಿರುವ ಟ್ರೈಗ್ಲಿಸರೈಡ್ ಅಂಶ ಮತ್ತು ಕೊಲೆಸ್ಟ್ರಾಲ್ ಅಂಶವು ಇಳಿಕೆಯಾಗುತ್ತದೆ. ಪ್ರತಿಯೊಂದು ರಕ್ತನಾಳಗಳಿಗೆ ರಕ್ತಸಂಚಾರವು ಉತ್ತಮಗೊಂಡು ದೈಹಿಕವಾಗಿ ನೀವು ಆರೋಗ್ಯದಿಂದ ಕೂಡಿರುತ್ತೀರಿ. ವಾಕಿಂಗ್ ಮಾಡುವುದರಿಂದ ದೇಹಕ್ಕೆ ಆಮ್ಲಜನಕದ ಪೂರೈಕೆ ಬಹಳ ಚೆನ್ನಾಗಿ ನಡೆಯುತ್ತದೆ. ಇದು ಕೂಡಾ ಉತ್ತಮವಾದ ರಕ್ತಸಂಚಾರ ಉಂಟಾಗಲು ಕಾರಣವಾಗಿದೆ.