ಪಿಎಂ-ಕಿಸಾನ್ ಫಲಾನುಭವಿಗಳ ಸಂಖ್ಯೆ 10.45 ಕೋಟಿಗೆ ಏರಿಕೆ
ನವದೆಹಲಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಅಡಿಯಲ್ಲಿ ಫಲಾನುಭವಿಗಳ ಸಂಖ್ಯೆ 2019ರ ಆರಂಭದಲ್ಲಿ ಇದ್ದ 3.16 ಕೋಟೆಯಿಂದ 2022ರ ಮಧ್ಯದಲ್ಲಿ 10.45 ಕೋಟಿಗೆ ಏರಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಸಂಸತ್ತಿಗೆ ತಿಳಿಸಿದರು.
ಇದರಿಂದ ಫಲಾನುಭವಿಗಳ ಸಂಖ್ಯೆಯಲ್ಲಿ ಶೇ.230ರಷ್ಟು ಏರಿಕೆಯಾಗಿದೆ. ಪ್ರಧಾನಮಂತ್ರಿ ಯೋಜನೆಯು ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಕೇಂದ್ರ ಜಾರಿಗೊಳಿಸಿದ ಯೋಜನೆಯಾಗಿದೆ.
ನೇರ ಲಾಭ ವರ್ಗಾವಣೆಯ ಮೂಲಕ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಷಕ್ಕೆ ತಲಾ 6,000 ರೂಪಾಯಿಗಳ ಆರ್ಥಿಕ ಲಾಭವನ್ನು ವರ್ಗಾಯಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 2019 ರಲ್ಲಿ ಪ್ರಾರಂಭಿಸಿದ ಈ ಮಹತ್ವಾಕಾಂಕ್ಷೆಯ ಯೋಜನೆಯು ವಿಶ್ವದ ಅತಿದೊಡ್ಡ ಡಿಬಿಟಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಮೂಲಕ ಆರ್ಥಿಕ ನೆರವು ಮಧ್ಯವರ್ತಿಗಳ ನೆರವು ಇಲ್ಲದೆ ಕೋಟ್ಯಂತರ ರೈತರನ್ನು ತಲುಪಲು ಸಾಧ್ಯವಾಗಿದೆ.
ಕರ್ನಾಟಕದಲ್ಲಿ ರಾಜ್ಯ ಸರಕಾರದಿಂದಲೂ ಹೆಚ್ಚುವರಿಯಾಗಿ ವಾರ್ಷಿಕವಾಗಿ ಕೃಷಿಕರಿಗೆ ರೂ. 4000 ನೀಡಲಾಗುತ್ತದೆ.