ಸುಬ್ರಹ್ಮಣ್ಯ : ರೈಲ್ವೇ ಟ್ಯಾಂಕರ್‌ನಲ್ಲಿ ಗ್ಯಾಸ್ ಸೋರಿಕೆ ಅನುಮಾನ | ಎಮರ್ಜೆನ್ಸಿ ರೆಸ್ಪಾನ್ಸ್ ತಂಡದಿಂದ ತೀವ್ರ ಪರಿಶೀಲನೆ
ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣದಲ್ಲಿ ಅಡುಗೆ ಅನಿಲ ಸೋರಿಕೆಯಾಗಿದೆ ಎಂಬ ಅನುಮಾನದ ಮೇರೆಗೆ ಅಗ್ನಿಶಾಮಕ ದಳ ಹಾಗೂ ಗ್ಯಾಸ್ ಕಂಪೆನಿಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ.
ಮಂಗಳೂರಿನಿಂದ ಆಗಮಿಸಿದ್ದ ಗ್ಯಾಸ್ ಟ್ಯಾಂಕರನ್ನು ಹೊತ್ತ ಗೂಡ್ಸ್ ರೈಲಿನಲ್ಲಿ ಅಡುಗೆ ಅನಿಲ ಸೋರಿಕೆಯಾಗುತ್ತಿದೆ ಎಂಬ ಶಂಕೆ ದಟ್ಟವಾಗಿ ಕಾಡಿತ್ತು. ಇದಕ್ಕೆ ಇಂಬು ನೀಡುವಂತೆ ಸುತ್ತಮುತ್ತಲಿನ ಪರಿಸರದಲ್ಲಿ ಗ್ಯಾಸ್ ವಾಸನೆ ಮೂಗಿಗೆ ಬಡಿಯುತ್ತಿತ್ತು ಎನ್ನಲಾಗಿದ್ದು ಹೀಗಾಗಿ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಪುತ್ತೂರಿನಿಂದ ಹಾಗೂ ಸುಳ್ಯದಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನ ನಡೆಸಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಅನಿಲ ಕಂಪೆನಿಯು ಎಮರ್ಜೆನ್ಸಿ ರೆಸ್ಪಾನ್ಸ್ ತಂಡವನ್ನು ಸ್ಥಳಕ್ಕೆ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ, ದಕ್ಷಿಣ ಕನ್ನಡ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ ಎಂದು ತಿಳಿದುಬಂದಿದೆ.