7th Pay Commission : ಇಲ್ಲಿದೆ ರಜೆ, ತುಟ್ಟಿಭತ್ಯೆ ಕುರಿತು ಕಂಪ್ಲೀಟ್ ಮಾಹಿತಿ!!!

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. ಈ ನಡುವೆ ರಾಜ್ಯ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಿದ್ದು, ಕರ್ನಾಟಕ ಸರ್ಕಾರ ಸರ್ಕಾರಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆಯ ಜೊತೆಗೆ ಇನ್ನಿತರ ಸೌಲಭ್ಯಗಳ ಪರಿಶೀಲಿಸಿ, ಪರಿಷ್ಕರಿಸಿ ವರದಿ ನೀಡಲು ಈ ಆಯೋಗವನ್ನು ರಚಿಸಲಾಗಿದೆ.

ಈ ಆಯೋಗವು ಪ್ರಶ್ನಾವಳಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಿದ್ದಪಡಿಸಿ ಬಿಡುಗಡೆ ಮಾಡಿದ್ದು, ಸರ್ಕಾರಿ ನೌಕರರು ಮತ್ತು ಪಿಂಚಣಿದಾರು, ಸರ್ಕಾರದ ಅಮುಕಾ/ ಪ್ರಕಾ/ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರಿಗೆ, ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿ ವರ್ಗದವರಿಗೆ, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ, ಸಾರ್ವಜನಿಕರಿಗೆ ಬೇರೆ ಬೇರೆ ಪ್ರಶ್ನಾವಳಿ ತಯಾರಿಸಲಾಗಿದೆ. ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಈ ಆಯೋಗ ರಚಿಸಲಾಗಿದ್ದು, ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರ ಜೊತೆಗೆ ಇಲಾಖೆ, ಸಂಸ್ಥೆಗಳಿಂದ ವಿವಿಧ ವಿಚಾರಗಳ ಕುರಿತಂತೆ ಮುಕ್ತ ಸಲಹೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.

ಆಸಕ್ತರು ಪ್ರಶ್ನಾವಳಿಯಲ್ಲಿನ ಅಂಶಗಳಿಗೆ ಉತ್ತರಗಳನ್ನು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಮುಕ್ತವಾಗಿ ನೀಡಬಹುದಾಗಿದೆ. ಸ್ವಯಂ ನಿವೃತ್ತಿ, ನಿಯಮ, ಭತ್ಯೆ, ರಜೆ ಸೌಲಭ್ಯ, ಸಮೂಹ ವಿಮಾ ಯೋಜನೆಗಳ ಕುರಿತಂತೆ ಪ್ರಶ್ನಾವಳಿಗಳನ್ನು ಕೇಳಲಾಗಿದೆ. 7ನೇ ರಾಜ್ಯ ವೇತನ ಆಯೋಗವು ವಾಹನ ಭತ್ಯೆ, ಸಮವಸ್ತ್ರ ಭತ್ಯೆ, ಅಪಾಯ ಸಂಭವ ಭತ್ಯೆ, ಪ್ರಭಾರ ಭತ್ಯೆ, ನಿಗಧಿತ ಪ್ರಯಾಣ ಭತ್ಯೆ, ಅನ್ಯ ಸೇವೆ ಭತ್ಯೆ, ವಿಶೇಷ ಭತ್ಯೆಗಳಿಗೆ ಇರುವ ಅರ್ಹತಾ ಷರತ್ತು ಮತ್ತು ಮೊತ್ತದ ಕುರಿತು ಸಲಹೆಗಳಿವೆಯೇ ಎಂದು ಪ್ರಶ್ನಾವಳಿಯಲ್ಲಿ ಕೇಳಿದೆ. ವರ್ಗಾವಣೆಯಾಗಿರುವ ಒಬ್ಬ ನೌಕರನಿಗೆ ಮಂಜೂರು ಮಾಡುವ ಈಗಿರುವ ವರ್ಗಾವಣೆ ಅನುದಾನ ಮತ್ತು ಸಾಮಾನು ಸರಂಜಾಮು ಸಾಗಣೆ ಭತ್ಯೆಗಳ ಕುರಿತು ಅಭಿಪ್ರಾಯ ಕೇಳಿದೆ.

7ನೇ ರಾಜ್ಯ ವೇತನ ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾಂಶಗಳಲ್ಲಿ ಕೆಲ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ. ಸರ್ಕಾರಿ ನೌಕರರಿಗೆ ಅನ್ವಯಿಸುವ ಪ್ರಸಕ್ತ ಸಮೂಹ ವಿಮಾ ಯೋಜನೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ನಿಮ್ಮ ಅಭಿಪ್ರಾಯ ಸಲಹೆಗಳೇನು ಎಂದು ಪ್ರಶ್ನಿಸಿ ಉತ್ತರವನ್ನು ಬಯಸಿದೆ.ಜಂಟಿ ಕಾರ್ಯದರ್ಶಿ 7ನೇ ರಾಜ್ಯ ವೇತನ ಆಯೋಗ ಜಿ. ಬಿ. ಹೇಮಣ್ಣ ರಾಜ್ಯಪತ್ರದಲ್ಲಿ ಪ್ರಕಟಿಸಿದ ಅನುಸಾರ ಅಧಿಕೃತ ಪ್ರಯಾಣ/ ಪ್ರವಾಸದ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆಗಳ ದರಗಳನ್ನು ಮಾರ್ಪಡಿಸುವ ಅಗತ್ಯವಿದೆಯೆ?? ಹೌದು ಎನ್ನುವುದಾದರೆ, ನಿಮ್ಮ ಪ್ರಕಾರ ಸೂಕ್ತ ಭತ್ಯೆ ಎಷ್ಟೆಂದು ಆಯೋಗ ಪ್ರಶ್ನೆ ಮಾಡಿದೆ.

ತಮ್ಮಿಚ್ಚೆ ಯಂತೆ ಸ್ವನಿವೃತ್ತಿಗೆ ಸಂಬಂಧಪಟ್ಟ ನಿಯಮಗಳ ಬಗ್ಗೆ , ಪಿಂಚಣಿ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಪ್ರಶ್ನಾವಳಿ ಕೇಳಲಾಗಿದ್ದು, ಇದಲ್ಲದೇ, ಸದ್ಯ 30 ವರ್ಷಗಳ ಅರ್ಹತಾ ಸೇವೆಯನ್ನು ಪೂರ್ಣಗೊಳಿಸಿದ ಸರ್ಕಾರಿ ನೌಕರರಿಗೆ ಮಾತ್ರ ಪೂರ್ಣನಿವೃತ್ತಿ ವೇತನ ಒದಗಿಸಲಾಗುತ್ತದೆ. ನಿವೃತ್ತಿಯ ಉಪದಾನವನ್ನು ಲೆಕ್ಕ ಹಾಕುವಾಗ ಮೂಲ ವೇತನವನ್ನಷ್ಟೇ ಪರಿಗಣಿಸಲಾಗುತ್ತದೆ. ಇದರ ಮಾರ್ಪಾಡಿಗೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯವೇನು ಈ ಮಾರ್ಪಾಡಿಗೆ ಕಾರಣಗಳನ್ನು ನೀಡಿ ಎಂದು ವಿವರಣೆಯನ್ನು ಕೂಡ ಕೇಳಲಾಗಿದೆ.

ಕೆಳಗೆ ಸೂಚಿಸಿದ ಸೌಲಭ್ಯಗಳಲ್ಲಿ ಮಾಡಬೇಕಾದ ಬದಲಾವಣೆಗಳ ಬಗ್ಗೆ ಸಲಹೆ ಮತ್ತು ಸೂಚನೆಗಳನ್ನು ತಿಳಿಸಲು ಆಯೋಗ ಮನವಿ ಮಾಡಿದ್ದು, ಅದರಲ್ಲಿ ರಜೆ ಸೌಲಭ್ಯಗಳು ಮತ್ತು ಸೇವೆಯಲ್ಲಿ ಇರುವಾಗ ಮತ್ತು ನಿವೃತ್ತಿ ಸಂದರ್ಭದಲ್ಲಿ ಗಳಿಕೆ ರಜೆ ನಗದೀಕರಣ ಸೌಲಭ್ಯ, ಬೈಸಿಕಲ್, ಮೋಟಾರು ವಾಹನ, ಗೃಹ ನಿರ್ಮಾಣ, ಗೃಹ ರಿಪೇರಿ ಮುಂಗಡ ಇತ್ಯಾದಿ, ಅಂಧ ಮತ್ತು ಅಂಗವಿಕಲ ನೌಕರರಿಗೆ ಈಗ ನೀಡಲಾಗುತ್ತಿರುವ ಮಾಹೆಯಾನ ಮೂಲ ವೇತನದ ಶೇಕಡ 6 ರಂತೆ ವಾಹನ ಭತ್ಯೆಯನ್ನು ಕೂಡ ಒಳಗೊಂಡು ಅಭಿಪ್ರಾಯ ಕೇಳಲಾಗಿದೆ.

ಪ್ರಸ್ತುತ ಕನಿಷ್ಠ ಪಿಂಚಣಿ ಮತ್ತು ಕುಟುಂಬ ವಿಶ್ರಾಂತಿ ವೇತನವು ಮಾಹೆಯಾನ ರೂ. 8,500 ಜೊತೆಗೆ ತುಟ್ಟಿ ಭತ್ಯೆಯನ್ನು ಕೂಡ ನೀಡಲಾಗುತ್ತದೆ. ಆದರೆ, ನಿವೃತ್ತಿ ವೇತನದ ಗರಿಷ್ಠ ಮೊತ್ತವು ರೂ. 45,180 ಆಗಿರುತ್ತದೆ. ಈ ಮೊತ್ತವು ಸಮಂಜಸವೇ?? ಇಲ್ಲ ಎನ್ನುವುದಾದರೆ ಕನಿಷ್ಟ ಮತ್ತು ಗರಿಷ್ಠ ಕುಟುಂಬ ಪಿಂಚಣಿಯು ಎಷ್ಟಿರಬೇಕು?ಎಂದು ಪ್ರಶ್ನಿಸಿದೆ. ನಿವೃತ್ತಿದಾರರಿಗೆ ಇನ್ನಿತರ ಯಾವ ಸೌಲಭ್ಯಗಳನ್ನು ನೀಡಬಹುದೆಂದು ನೀವು ಭಾವಿಸುತ್ತೀರಿ??. ನಿವೃತ್ತಿ ವೇತನದ 15 ವರ್ಷಗಳ ನಂತರ ಇದರ ಪುನಃ ಸ್ಥಾಪನೆಯ ವ್ಯವಸ್ಥೆ ಇರಲಿದ್ದು, ಇದರ ಮಾರ್ಪಾಡಿಗೆ ನಿಮ್ಮ ಅಭಿಪ್ರಾಯವೇನು?? ಎಂದು ಆಯೋಗ ಕೇಳಿದೆ. ಫೆಬ್ರವರಿ 10ರ ತನಕ ಸಲಹೆ ಸ್ವೀಕಾರ ಮಾಡಲು ಅವಕಾಶವಿದ್ದು, ದಿನಾಂಕ ವಿಸ್ತರಣೆಯಾಗುವ ಸಂಭವವಿದೆ ಎನ್ನಲಾಗಿದೆ.

Leave A Reply

Your email address will not be published.