‘ಹೋಂಡಾ ಆಕ್ಟೀವಾ 6G Smart’ ಮೈಲೇಜ್‌ಗೆ ಗ್ರಾಹಕರಿಂದ ದೊರೆಯಿತು ಗುಡ್ ರೆಸ್ಪಾನ್ಸ್!
ಇತ್ತೀಚಿಗೆ ಜನರು ಅತಿಯಾಗಿ ಮೆಚ್ಚಿ ಹೆಚ್ಚು ಪ್ರಸಿದ್ಧಿ ಯಲ್ಲಿರುವ ಹೋಂಡಾ ಆಕ್ಟಿವಾ ಈಗಾಗಲೇ ಮಾರುಕಟ್ಟೆಯಲ್ಲಿ ಮಿಂಚುತ್ತಿದೆ. ಹೌದು ಭಾರತದಲ್ಲಿ ದ್ವಿಚಕ್ರ ವಾಹನಗಳು ಎಂದೊಡನೆ ಹೋಂಡಾ ಆಕ್ಟಿವಾ ನೆನಪಿಗೆ ಬರುತ್ತೆ. ಇದೀಗ ಪ್ರಸಿದ್ಧ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹೋಂಡಾ, ಭಾರತದಲ್ಲಿ ಅತ್ಯಾಧುನಿಕ ವೈಶಿಷ್ಟ್ಯದೊಂದಿಗೆ ಕೆಲವು ದಿನಗಳ ಹಿಂದೆ ‘ಆಕ್ಟಿವಾ 6G ಸ್ಮಾರ್ಟ್ ಸ್ಕೂಟರ್’ ಬಿಡುಗಡೆ ಮಾಡಿತ್ತು. ಸದ್ಯ, ಈ ಸ್ಕೂಟರ್ ವಿತರಣೆ ಆರಂಭವಾಗಿದ್ದು, ಖರೀದಿದಾರನೊಬ್ಬ ಆಕ್ಟಿವಾ ಸ್ಮಾರ್ಟ್ ಆವೃತ್ತಿ ಎಷ್ಟು ಮೈಲೇಜ್ ನೀಡುತ್ತದೆ ಎಂಬುದನ್ನು ಪರೀಕ್ಷೆ ಮಾಡಿದ್ದು ಫಲಿತಾಂಶ ಕಂಡುಕೊಂಡಿದ್ದಾನೆ.
ಈಗಾಗಲೇ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಭಾರತೀಯ ಗ್ರಾಹಕರಿಗಾಗಿ ಹೋಂಡಾ 6Gಯ ನವೀಕರಿಸಿದ ಆವೃತ್ತಿಗಳನ್ನು ಪರಿಚಯಿಸಿತ್ತು. ಈ ಸ್ಕೂಟರ್ ಒಟ್ಟು ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಸ್ಟ್ಯಾಂಡರ್ಡ್, ಡಿಲಕ್ಸ್ ಮತ್ತು ಸ್ಮಾರ್ಟ್ ಕೀ ವಿತ್ ಅಲಾಯ್ ವೀಲ್ಸ್. ಎಕ್ಸ್ ಶೋರೂಂ ಪ್ರಕಾರ, ಇವುಗಳು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಕ್ರಮವಾಗಿ ರೂ.74,536, ರೂ.77,036 ಮತ್ತು ರೂ.80,537 ದರವಿವೆ.
ಸದ್ಯ ಆಕ್ಟಿವಾ 6G ಸ್ಮಾರ್ಟ್ ಸ್ಕೂಟರ್’ ಹೋಂಡಾ ಆಕ್ಟಿವಾ ಸ್ಮಾರ್ಟ್ ರೂಪಾಂತರವನ್ನು ಖರೀದಿಸಿದ ಗ್ರಾಹಕನೊಬ್ಬ ಇದರ ಮೈಲೇಜ್ ಸಂಬಂಧಿಸಿದಂತೆ ನಡೆಸಿದ ಪರೀಕ್ಷೆಯ ವಿಡಿಯೋವನ್ನು Gear Update ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಅದರ ಪ್ರಕಾರ, ಈ ಸ್ಕೂಟರ್ ಅರ್ಧ ಲೀಟರ್ ಪೆಟ್ರೋಲ್ ಬಳಕೆಯಲ್ಲಿ ಗರಿಷ್ಠ 26 ಕಿ.ಮೀ ಮೈಲೇಜ್ ನೀಡಿದ್ದು, ಒಂದು ಲೀಟರ್ ಪೆಟ್ರೋಲ್ ಹಾಕಿದರೆ, ಸುಮಾರು 52 ಕಿ.ಮೀ ಮೈಲೇಜ್ ಅನ್ನು ಈ ಸ್ಕೂಟರ್ ಕೊಡಬಹುದು. ಆದರೆ, ಮೊದಲ ಸರ್ವಿಸ್ ಬಳಿಕವಷ್ಟೇ, ನೂತನ ಹೋಂಡಾ ಆಕ್ಟಿವಾ ಸ್ಕೂಟರ್ ಎಷ್ಟು ಮೇಲೆ ನೀಡಲಿದೆ ಎಂಬುದು ತಿಳಿಯಲಿದೆ ಎಂದು ಮಾಹಿತಿ ನೀಡಲಾಗಿದೆ.
ಹೋಂಡಾ ಆಕ್ಟಿವಾ 6G ಸ್ಮಾರ್ಟ್ ವೈಶಿಷ್ಟ್ಯಗಳು :
• ಇದು ಸ್ಮಾರ್ಟ್ ಅನ್‌ಲಾಕ್, ಸ್ಮಾರ್ಟ್ ಸ್ಟಾರ್ಟ್, ಸ್ಮಾರ್ಟ್ ಫೈಂಡ್ ಮತ್ತು ಸ್ಮಾರ್ಟ್ ಸೇಫ್ ಎಂಬ ಪ್ರಮುಖ ಫೀಚರ್ಸ್ ಗಳನ್ನು ಹೊಂದಿದೆ.
• ಸ್ಮಾರ್ಟ್ ಅನ್‌ಲಾಕ್ ವೈಶಿಷ್ಟ್ಯವು ಸವಾರರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಬಹುದು. ಇದು ನಿಮ್ಮ ಹ್ಯಾಂಡಲ್‌ಬಾರ್‌ಗಳು, ಸ್ಟೋರೇಜ್ ಏರಿಯಾ ಹಾಗೂ ಫ್ಯುಯೆಲ್ ಫಿಲ್ಲರ್ ಕ್ಯಾಪ್ ಲಾಕ್/ಅನ್‌ಲಾಕ್ ನೆರವಾಗುತ್ತದೆ (ಸ್ಕೂಟರ್ ನಿಂದ 2 ಮೀಟರ್ ಒಳಗಿರಬೇಕು).
- ಇದು ತನ್ನ ಹಿಂದಿನ ಮಾದರಿ ಹೋಂಡಾ ಆಕ್ಟಿವಾ 6Gಯಲ್ಲಿರುವ ಎಂಜಿನ್‌ನ್ನೇ ಇಲ್ಲಿಯೂ ಉಪಯೋಗ ಮಾಡಲಾಗಿದೆ. ಸದ್ಯ 109.51 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 7.73 bhp ಗರಿಷ್ಠ ಪವರ್ ಹಾಗೂ 8.9 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5.3 ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಪಡೆದಿದೆ.
- ತೂಕದಲ್ಲಿ ಹಿಂದಿನ ಮಾದರಿಗಿಂತ 1 ಕೆಜಿ ಹಗುರವಾಗಿದೆ ಎಂದು ಹೇಳಬಹುದು. ಈ ಆಕ್ಟಿವಾ ಸ್ಕೂಟರ್ ಬಣ್ಣಗಳ ಆಯ್ಕೆ ಕುರಿತು ಹೇಳುವುದಾದರೆ, ಇದು ಡಿಸೆಂಟ್ ಬ್ಲೂ, ರೆಬೆಲ್ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಬ್ಲಾಕ್, ಪರ್ಲ್ ಪ್ರೆಶಿಯಸ್ ವೈಟ್ ಮತ್ತು ಪಿಯರ್ ಸೈರನ್ ಬ್ಲೂ ಬಣ್ಣಗಳಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ.
ಸದ್ಯ ಈ ಹೋಂಡಾ ಆಕ್ಟಿವಾ ಸ್ಕೂಟರ್ ಗಳು ಮೈಲೇಜ್ ನಿಂದ ಸಾಕಷ್ಟು ಭಾರತೀಯ ಗ್ರಾಹಕರನ್ನು ಆಕರ್ಷಿಸುತ್ತವೆ. ಇದೀಗ ಗ್ರಾಹಕನೊಬ್ಬ ನಡೆಸಿರುವ ಪರೀಕ್ಷೆಯಲ್ಲಿ ಅತ್ಯುನ್ನತ ಫಲಿತಾಂಶ ಕಂಡುಬಂದಿದ್ದು, ಇದು ಆಕ್ಟಿವಾ ಸ್ಕೂಟರ್ ಖರೀದಿಸಲು ಹೆಚ್ಚಿನ ಸಂಖ್ಯೆಯ ಯುವ ಜನರನ್ನು ಆಕರ್ಷಿಸಬಹುದು.