ಕೊರಗಜ್ಜನ ಕೋಲಕ್ಕೆ ಅಡ್ಡಿ ಬೇಡ ಎಂದು ಅಮಿತ್‌ ಶಾ ಈ ದೊಡ್ಡ ನಿರ್ಧಾರಕ್ಕೆ ಕೈ ಹಾಕಿದ್ರು!

Share the Article

ವಿಧಾನಸಭೆ ಚುನಾವಣೆಯು ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಯು ಬಿರುಸುಗೊಂಡಿದ್ದು ಟಿಕೆಟ್ ಗಾಗಿ ಹಣಾಹಣಿ ಏರ್ಪಟ್ಟಿದೆ. ಈ ನಡುವೆ ರಾಜಕೀಯ ಪಕ್ಷಗಳು ಗೆಲುವು ಸಾಧಿಸಲು ನಾನಾ ಪ್ರಯೋಗ ನಡೆಸುತ್ತಿದೆ. ಈ ನಡುವೆ ಕಮಲ ಪಾಲಯದಲ್ಲಿಯು ಕರಾವಳಿಯಲ್ಲಿ ತಮ್ಮ ಪಾರುಪತ್ಯ ಕಾಯ್ದುಕೊಳ್ಳಲು ಭರದ ಸಿದ್ಧತೆ ನಡೆಯುತ್ತಿದೆ.

ಚುನಾವಣೆಯ ಕಾವು ಗರಿಗೆದರುವ ಮುನ್ನವೇ ಚುನಾವಣೆ ಪ್ರಚಾರದ ನಿಮಿತ್ತ ಕೇಂದ್ರ ಮುಖಂಡರು ರಾಜ್ಯಕ್ಕೆ ಭೇಟಿ ನೀಡೋದು ವಾಡಿಕೆ. ಇದೀಗ ಫೆಬ್ರವರಿ 11ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಅಮಿತ್ ಶಾ ಅವರ ಭೇಟಿಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಫೆ.11 ರಂದು ಕರಾವಳಿಯಲ್ಲಿ ಕೆಲವು ಸರ್ಕಾರಿ ಕಾರ್ಯಕ್ರಮದ ಜೊತೆಗೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗಿಯಾಗುವ ಕೇಂದ್ರ ಮುಖಂಡರಾದ ಅಮಿತ್ ಶಾ ಅವರು ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ಬಿಜೆಪಿಯ ಘಟಾನುಘಟಿ ನಾಯಕರು ಕೂಡ ಪಾಲ್ಗೊಳ್ಳಲಿದ್ದಾರೆ. ಅಮಿತ್ ಶಾ ಭೇಟಿ ಹಿನ್ನೆಲೆ ಮಂಗಳೂರಿನಲ್ಲಿ ಒಂದು ಕಡೆ ರೋಡ್ ಶೋ ನಡೆಸಲು ತಯಾರಿ ಕೂಡ ನಡೆದಿತ್ತು ಎನ್ನಲಾಗಿದೆ. ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯ ಮೈದಾನದಲ್ಲಿ ಅಮಿತ್ ಶಾ ಅವರ ಸಮಾವೇಶ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಸಂಗವಾಗಿ ಸಮಾವೇಶ ನಡೆಯಲಿದ್ದು,ಈ ಸಮಾವೇಶಕ್ಕೆ ಲಕ್ಷ ಗಟ್ಟಲೆ ಜನರು ಭಾಗಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಕಾವೂರಿನಿಂದ ಪದವಿನಂಗಡಿ ಮೇರಿಹಿಲ್ ವರೆಗೆ ಸುಮಾರು ಎರಡೂವರೆ ಕಿಮೀ ಉದ್ದಕ್ಕೆ ರೋಡ್ ಶೋ ನಲ್ಲಿ ಅಮಿತ್ ಶಾ ಪಾಲ್ಗೊಳ್ಳುವ ಯೋಜನೆ ರೂಪಿಸಲಾಗಿತ್ತು. ಇದರ ನಡುವೆ ರೋಡ್ ಶೋ ನಡೆಸಲು ಆಯೋಜಿಸಿರುವ ದಾರಿಯಲ್ಲಿ ಬೋಂದೆಲ್ ನಿಂದ ಪದವಿನಂಗಡಿ ನಡುವೆ ಬರುವ ಕೊರಗಜ್ಜನ ಗುಡಿಯಲ್ಲಿ ಫೆ.11 ರಂದು ಕೋಲ ನಡೆಯಲಿದೆ ಎಂದು ತಿಳಿದುಬಂದಿದೆ. ಹೀಗಾಗಿ, ಒಂದು ವೇಳೆ, ಆ ದಿನ ರೋಡ್ ಶೋ ನಡೆಸಿದಲ್ಲಿ ಕೋಲಕ್ಕೆ ಹಾಗೂ ಅಲ್ಲಿನ ಜನರಿಗೆ ಸಮಸ್ಯೆ ಉಂಟಾಗುತ್ತದೆ ಎಂಬ ವಿಚಾರವನ್ನು ಬಿಜೆಪಿ ನಾಯಕರು ಅಮಿತ್ ಶಾ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಕೊರಗಜ್ಜನ ಕೋಲಕ್ಕೆ ತೊಂದರೆಯಾಗುವುದಾದರೆ ರೋಡ್ ಶೋ ವನ್ನೇ ರದ್ದು ಮಾಡಿ ಎಂದು ಅಮಿತ್ ಶಾ ಬಿಜೆಪಿ ನಾಯಕರಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಮಂಗಳೂರಿನಲ್ಲಿ ಆಯೋಜನೆಗೊಂಡ ರೋಡ್ ಶೋ ರದ್ದು ಮಾಡಲಾಗಿದ್ದು, ಮತ್ತೊಂದೆಡೆ ರೋಡ್ ಶೋ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.