Good News : ಕೇಂದ್ರ ಸರಕಾರದಿಂದ ರೈತರೇ ನಿಮಗೊಂದು ಸಿಹಿ ಸುದ್ದಿ !
ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದು ಕೃಷಿ ಚಟವಟಿಕೆಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಇದೀಗ, ಪ್ರಧಾನಮಂತ್ರಿ ಮೋದಿಯವರು ರೈತರಿಗೆ ಭರ್ಜರಿ ಶುಭ ಸುದ್ದಿ ನೀಡಿದ್ದಾರೆ. ರೈತರ ಆರ್ಥಿಕ ಹೊರೆಯನ್ನು ಇಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕೇಂದ್ರ ಮುಂದಾಗಿದೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 3,00,000 ವರೆಗಿನ ಅಲ್ಪಾವಧಿ ಕೃಷಿ ಸಾಲದ ಮೇಲೆ ವಾರ್ಷಿಕ ಶೇಕಡ 1.5ರಷ್ಟು ಬಡ್ಡಿ ಕಡಿಮೆ ಮಾಡುವ ಜೊತೆಗೆ ರೈತರಿಗೆ ಮತ್ತಷ್ಟು ಸಾಲ ಸೌಲಭ್ಯ ಒದಗಿಸಲು ನೆರವಾಗುವ ಯೋಜನೆಗೆ ಕೇಂದ್ರ ಅನುಮೋದನೆ ನೀಡಿದೆ.ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಠಾಕೂರ್ ಅವರು ಯೋಜನೆಯ ಕುರಿತಂತೆ ಮಾಹಿತಿ ನೀಡಿದ್ದಾರೆ.
ಕೃಷಿ ವಲಯದಲ್ಲಿ ರೈತರ ಸಾಲದ ಹರಿವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದು, “ರೈತರು ಸಾಲವನ್ನು ಪಡೆದ ಬಳಿಕ ನಿಗದಿತ ಸಮಯಕ್ಕೆ ಮರುಪಾವತಿಸುವ ಸಂದರ್ಭದಲ್ಲಿ ವರ್ಷಕ್ಕೆ ಶೇಕಡ ನಾಲ್ಕರ ಬಡ್ಡಿ ದರದಲ್ಲಿ ಅಲ್ಪಾವಧಿಯ ಕೃಷಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಅನುವು ಮಾಡಿಕೊಡುವ ಜೊತೆಗೆ ರೈತರು ಲೇವಾದೇವಿಗಾರರ ಕಾಟದಿಂದ ಪಾರಾಗಲು ನೆರವಾಗುತ್ತದೆ.
ಯೋಜನೆಯ ಉದ್ದೇಶವೇನು?? ಎಂದು ಗಮನಿಸಿದರೆ,
ದೇಶದಲ್ಲಿ ಕೃಷಿಯನ್ನು ನೆಚ್ಚಿಕೊಂಡಿರುವ ಅನ್ನದಾತರಿಗೆ ಸೂಕ್ತ ಸಮಯದಲ್ಲಿ ಬೇಕಾದ ಮಳೆ ಇಲ್ಲದೆ ಇಲ್ಲವೇ ಪ್ರಾಣಿಗಳ ಕಾಟ, ಹೀಗೆ ನಾನಾ ಕಾರಣಗಳಿಂದ ನಿರೀಕ್ಷಿತ ಫಸಲು ಪಡೆಯಲು ಸಾಧ್ಯವಾಗದೇ ತೊಂದರೆ ಎದುರಿಸಬೇಕಾಗುತ್ತದೆ. ಇದರ ಜೊತೆಗೆ, ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆಯ ಬಿಸಿಯಿಂದ ಸಾಲ ಮಾಡಬೇಕಾದ ಅನಿವಾರ್ಯತೆ ಉಂಟಾಗಿ ಕೆಲವೊಮ್ಮೆ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ, ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲವನ್ನು ಒದಗಿಸುವುದರಿಂದ ಸಾಲದ ಸುಳಿಯಲ್ಲಿ ಸಿಲುಕಿದ ರೈತರಿಗೆ ಆರ್ಥಿಕ ಬೆಂಬಲ ದೊರೆದಂತಾಗುತ್ತದೆ.
ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಮುಕ್ತ ಸಾಲ ಒದಗಿಸುವ ಸೌಕರ್ಯ ಮಾಡಿಕೊಡುವ ಉದ್ದೇಶವನ್ನು ಹೊಂದಿದೆ. ಕೃಷಿ ವಲಯದಲ್ಲಿ ಸಾಕಷ್ಟು ಸಾಲದ ಹರಿವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಜೊತೆಗೆ ಕೃಷಿಯೇತರ ಚಟುವಟಿಕೆಗಳಾದ ಹೈನುಗಾರಿಕೆ, ಪಶು ಸಂಗೋಪನೆ, ಕೋಳಿ ಸಾಕಾಣಿಕೆ ಮೀನುಗಾರಿಕೆ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಅಲ್ಪಾವಧಿಯ ಕೃಷಿ ಸಾಲವನ್ನು ನೀಡುವುದರಿಂದ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ.
ರೈತರಿಗೆ ಸಾಲವನ್ನು ನಿಗದಿತ ಸಮಯಕ್ಕೆ ಮರುಪಾವತಿ ಮಾಡಲು ರೈತರಿಗೆ ಹೆಚ್ಚುವರಿಯಾಗಿ ಶೇಕಡ ಮೂರರ ಅನುದಾನವನ್ನು ಕೂಡ ಒದಗಿಸಲಾಗುತ್ತದೆ. ಹೀಗಾಗಿ, ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿದ್ದಲ್ಲಿ ವರ್ಷಕ್ಕೆ ಶೇಕಡ ನಾಲ್ಕರ ದರದಲ್ಲಿ ಸಾಲ ಸೌಲಭ್ಯ ಪಡೆಯಬಹುದು.
ಈ ಯೋಜನೆಯು 2022-23 ರಿಂದ 2024-25 ರವರೆಗೆ ಜಾರಿಯಲ್ಲಿರಲಿದ್ದು, ಈ ಕಾಲಾವಧಿಯಲ್ಲಿ ರೈತರಿಗೆ ಸಾಲ ನೀಡುವ ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕ್, ಸಣ್ಣ ಹಣಕಾಸು ಬ್ಯಾಂಕ್ ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳಿಂದ ಶೇಕಡ 1.5ರಷ್ಟು ಬಡ್ಡಿ ರಿಯಾಯಿತಿಯನ್ನು ಪಡೆಯಲು ಅನುವು ಮಾಡಿಕೊಡಲಾಗಿದೆ. ರೈತರಿಗೆ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಅಲ್ಪಾವಧಿಯ ಕೃಷಿ ಸಾಲ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಯೋಜನೆಯು ಬಡ್ಡಿ ಅನುದಾನದ ಬೆಂಬಲದ ಯೋಜನೆಯಾಗಿರುವುದರಿಂದ 2022-23ರಿಂದ 2024- 25 ಅವಧಿಗೆ 34,856 ಕೋಟಿ ರೂಪಾಯಿ ಹೆಚ್ಚುವರಿ ಬಜೆಟ್ ನ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ.