ಬೆಳ್ತಂಗಡಿ : ಎಸ್‌ಪಿ ನೇತೃತ್ವದಲ್ಲಿ ಉಜಿರೆ ಲಾಡ್ಜ್‌ಗಳ ಮೇಲೆ ಏಕಕಾಲದಲ್ಲಿ ದಾಳಿ!

ಕರಾವಳಿಯ ಕೆಲವೆಡೆ ಅನೈತಿಕ ಚಟುವಟಿಕೆಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎಂಬ ಆರೋಪ ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿವೆ. ಇದೀಗ, ಬೆಳ್ತಂಗಡಿ ತಾಲೂಕಿನ ಉಜಿರೆಯ ಆಸುಪಾಸಿನಲ್ಲಿರುವ ಲಾಡ್ಜ್ ಗಳಲ್ಲಿ ಅನೈತಿಕ ಹಾಗೂ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ ಎಂಬ ನಿಖರ ಮಾಹಿತಿಯ ಅನುಸಾರ ಫೆ.6 ರಂದು ರಾತ್ರಿ ಇಪತ್ತಕ್ಕೂ ಹೆಚ್ಚು ಮಂದಿಯಿದ್ದ ಪೋಲಿಸ್ ತಂಡ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಪೊಲೀಸ್ ವರಿಷ್ಠಾಧಿಕಾರಿ ಅಮಟೆ ವಿಕ್ರಮ್ ಮಾರ್ಗದರ್ಶನದ ಮೇರೆಗೆ ಬಂಟ್ವಾಳ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಬಂಟ್ವಾಳ ಉಪ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡಗಳು ಏಕಕಾಲದಲ್ಲಿ ಏಲ್ಲಾ ಲಾಡ್ಜ್ ಗಳ ಮೇಲೆ ದಾಳಿ ನಡೆಸಿದ್ದು ಈ ದಾಳಿಯ ಸಂದರ್ಭ 7 ಕ್ಕೂ ಅಧಿಕ ವಾಹನಗಳಲ್ಲಿ 20 ಕ್ಕೂ ಅಧಿಕ ಮಂದಿಯ ತಂಡ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ.

ಉಜಿರೆಯ ಆಸುಪಾಸಿನ ಲಾಡ್ಜ್ ನಲ್ಲಿ ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆಯ ಬಗ್ಗೆ ಅನುಮಾನದ ಜೊತೆಗೆ ಖಚಿತ ಮಾಹಿತಿಯ ಮೇರೆಗೆ ಲಾಡ್ಜ್ ಗಳ ರಿಜಿಸ್ಟರ್ ಗಳನ್ನು ಪರಿಶೀಲನೆ ನಡೆಸಿ ಆಧಾರ್ ಕಾರ್ಡ್ ಸಹಿತ ಇನ್ನಿತರ ಮೂಲ ದಾಖಲೆಗಳನ್ನು ಪೋಲಿಸ್ ತಂಡ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಯಾವುದೇ ರೀತಿಯ ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಇದಲ್ಲದೆ, ಮುಂದಿನ ದಿನಗಳಲ್ಲಿ ಲಾಡ್ಜ್ ನಲ್ಲಿ ತಂಗುವಂತಹ ಪ್ರವಾಸಿಗರ ಜೊತೆಗೆ ಭಕ್ತರ ಸಂಪೂರ್ಣ ಮಾಹಿತಿ ಪಡೆದ ಬಳಿಕವಷ್ಟೇ ರೂಮು ಒದಗಿಸಬೇಕು ಎಂದು ಬಂಟ್ವಾಳ ಪೊಲೀಸ್ ಅಧಿಕಾರಿಗಳ ತಂಡ ಎಚ್ಚರಿಕೆಯ ಸಂದೇಶ ನೀಡಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.