Crime News : ‘ ಕಾರ್ಮಿಕ ಕಾರ್ಡ್’ ನ್ನು ಸುಳ್ಳು ಮಾಹಿತಿ ನೀಡಿ ಪಡೆದಿದ್ದೀರಾ? ಇಲ್ಲಿದೆ ಶಾಕಿಂಗ್ ನ್ಯೂಸ್!
ಕರ್ನಾಟಕ ಸರ್ಕಾರವು ಕರ್ನಾಟಕ ಕಾರ್ಮಿಕ ಕಾರ್ಡ್‌ಗಳ (Labour Card) ನೋಂದಣಿಗಾಗಿ ಆನ್‌ಲೈನ್ ಇ-ಪೋರ್ಟಲ್ ಅನ್ನು ಪರಿಚಯಿಸಿದ್ದು, ಎಲ್ಲಾ ಕಾರ್ಮಿಕರು ಮತ್ತು ನಿರ್ಮಾಣ ಕಾರ್ಮಿಕರು ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಕಾರ್ಮಿಕ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದೀಗ, ಕಾರ್ಮಿಕ ಇಲಾಖೆಯಿಂದ ನಕಲಿ ದಾಖಲಾತಿ ಸೃಷ್ಠಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.
ಗುರುತಿನ ಚೀಟಿ ಪಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದೆ ಇರುವವರ ನಕಲಿ ಕಾರ್ಡುಗಳನ್ನು ರದ್ದುಪಡಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಫೆಬ್ರವರಿ 25 ರವರೆಗೆ ಬೋಗಸ್ ಕಾರ್ಡ್ ನೋಂದಣಿ ರದ್ಧತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಕಲಿ ದಾಖಲಾತಿ ಸೃಷ್ಠಿಸಿ ಗುರುತಿನ ಚೀಟಿ ಪಡೆದಿರುವ ಫಲಾನುಭವಿಗಳಿಗೆ ಸ್ವ-ಇಚ್ಛೆಯಿಂದ ಮಂಡಳಿಗೆ ಗುರುತಿನ ಚೀಟಿಯನ್ನು ಹಿಂತಿರುಗಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ನಕಲಿ ಕಾರ್ಡುಗಳನ್ನು ಹಿಂತಿರುಗಿಸದ್ದಿದ್ದಲ್ಲಿ ಮುಂದಿನ ಕಾನೂನು ಕ್ರಮವನ್ನು ಕೈಬಿಡಲಾಗುವ ಕುರಿತು ಬೆಂಗಳೂರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯವರು ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಫಲಾನುಭವಿಯು ನಕಲು ದಾಖಲಾತಿಯನ್ನು ಸೃಷ್ಠಿಸಿ ನೋಂದಣಿಯಾಗಿದ್ದು ಕಂಡುಬಂದರೆ ಸರ್ಕಾರದ ಅಧಿಸೂಚನೆ 2022ರ ಆಗಸ್ಟ್ 18ರ ತಿದ್ದುಪಡಿ ನಿಯಮ-20(7)ರ ಅನುಸಾರ ಕಾರ್ಮಿಕರ ನೋಂದಣಾಧಿಕಾರಿಯು ತನ್ನ ಅಧಿಕಾರವನ್ನು ಚಲಾಯಿಸಿ, ಸೇವಾಸಿಂಧು ತಂತ್ರಾಂಶದಲ್ಲಿ ಈ ರೀತಿಯ ಫಲಾನುಭವಿಯ ನೋಂದಣಿಯನ್ನು ‘ಫ್ರೀಜ್’ ಮಾಡುವುದಲ್ಲದೆ ಆ ಫಲಾನುಭವಿಯ ವೈಯಕ್ತಿಕ ಕಡತದಲ್ಲೂ ರದ್ಧತಿಯನ್ನು ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಅಭಿಯಾನದ ನಂತರ ಕೂಡ ಸಂಬಂಧಪಟ್ಟ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರು ಅಥವಾ ನೋಂದಣಾಧಿಕಾರಿಯು ತಮ್ಮ ಕಾರ‍್ಯವ್ಯಾಪ್ತಿಯಲ್ಲಿ ಒಳಪಡುವ ಬೋಗಸ್ ಕಾರ್ಡುಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 25 ರವರೆಗೆ ಬೋಗಸ್ ಕಾರ್ಡು ನೋಂದಣಿ ರದ್ಧತಿ ಅಭಿಯಾನ ನಡೆಯಲಿರುವ ಕುರಿತು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.