ನಿಮಗೇನಾದರೂ ಬೆಳಗ್ಗೆ ಅನ್ನ ತಿನ್ನುವ ಅಭ್ಯಾಸವೇನಾದರೂ ಇದೆಯೇ? ಹಾಗಾದರೆ ಈ ಮಾಹಿತಿ ಖಂಡಿತ ಓದಿ!
ಸಾವಿರಾರು ವರ್ಷಗಳಿಂದ ‘ಅನ್ನ’ ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದು ಸರಳವಾದ ಅಡುಗೆಯಾಗಿದ್ದು, ಅಕ್ಕಿಯಲ್ಲಿ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ವ್ಯಾಪಕವಾಗಿ ತುಂಬಿದೆ. ಅನೇಕ ದೇಶಗಳಲ್ಲಿ ಅನ್ನವೇ ಪ್ರಧಾನ ಆಹಾರವಾಗಿದ್ದು, ಪ್ರಪಂಚದ ಅರ್ಧದಷ್ಟು ಜನರು ಸರಿಸುಮಾರು 50% ಕ್ಯಾಲೋರಿಯನ್ನು ಕೇವಲ ಅನ್ನದಿಂದಲೇ ಪಡೆಯುತ್ತಾರೆ. ಹಲವು ವಿಧದ ಆಹಾರ ತಿಂದರೂ ಸಹ ಭಾರತೀಯರಿಗೆ ಅದರ ಜೊತೆಗೆ ಅನ್ನ ಇರಲೇಬೇಕು ಅಷ್ಟರ ಮಟ್ಟಿಗೆ ಅನ್ನಕ್ಕೆ ಒಗ್ಗಿ ಹೋಗಿದ್ದಾರೆ. ಆದರೆ, ಬೆಳಿಗ್ಗೆ ಅನ್ನ ತಿನ್ನುವುದು ನಿಜವಾಗಿಯೂ ಒಳ್ಳೆಯ ಅಭ್ಯಾಸವೇ? ಇದು ಆರೋಗ್ಯಕ್ಕೆ ಹಾನಿಕಾರವೇ? ಇಲ್ಲಿದೆ ನೋಡಿ ಮಾಹಿತಿ.
ಕೆಲವೊಬ್ಬರು ತಮ್ಮ ಆಹಾರದಲ್ಲಿ ಅಕ್ಕಿ ಸೇವನೆ ಮಾಡಿಲ್ಲವೆಂದ್ರೆ ಅವರು ಸರಿಯಾಗಿ ಊಟ ಮಾಡಿಲ್ಲವೇನೋ ಎಂಬಂತೆ ಅನುಭವವಾಗುತ್ತದೆ. ಮತ್ತೊಂದೆಡೆ, ಇದಕ್ಕೆ ವಿರುದ್ಧವಾಗಿ, ಕೆಲ ಜನರು ಪ್ರತಿದಿನ ಅನ್ನವನ್ನು ತಿನ್ನುವುದರಿಂದ ದೂರವಿರುತ್ತಾರೆ. ಆದರೆ ತಜ್ಞರು ಹೇಳುವ ಪ್ರಕಾರ ಪ್ರತಿದಿನ ಅನ್ನವನ್ನು ತಿನ್ನಲು ಹೆದರುವ ಅಗತ್ಯವಿಲ್ಲ. ಏಕೆಂದರೆ ಅವು ಸಾಕಷ್ಟು ಕಾರ್ಬೋಹೈಡ್ರೇಟ್ ಅನ್ನು ಹೊಂದಿರುತ್ತವೆ. ಆದ್ದರಿಂದ ಇದು ಶಕ್ತಿಯ ಶಕ್ತಿ ಕೇಂದ್ರವೆಂದರೆ ತಪ್ಪಾಗಲಾರದು.
ಇತರ ಕಾರ್ಬೋಹೈಡ್ರೇಟ್‌ಗಳಂತೆ, ಅನ್ನವು ನಿಮಗೆ ಶೀಘ್ರದಲ್ಲೇ ಹಸಿವನ್ನುಂಟು ಮಾಡುತ್ತದೆ. ನಾರಿನಂಶ ಅಥವಾ ಪ್ರೊಟೀನ್-ಸಮೃದ್ಧವಾಗಿರುವ ಹೆಚ್ಚು ತರಕಾರಿಗಳೊಂದಿಗೆ ಅನ್ನ ಸೇವಿಸುವುದು ಉತ್ತಮ. ಅನ್ನದೊಂದಿಗೆ ಬೀನ್ಸ್, ಕ್ಯಾರೆಟ್, ಶತಾವರಿ, ಕೋಸುಗಡ್ಡೆ, ಅಥವಾ ಚಿಕನ್ ಅನ್ನು ಸೇರಿಸಿ ತಿನ್ನಬಹುದು.
ನಿಮ್ಮ ದೈನಂದಿನ ಕಾರ್ಬೋಹೈಡ್ರೇಟ್ ಗಳ ಹೆಚ್ಚಿನ ಭಾಗವನ್ನು ದಿನದ ಆರಂಭದಲ್ಲಿ ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ದೇಹವು ಹೆಚ್ಚು ಸಕ್ರಿಯವಾಗಿರುತ್ತದೆ ಹಾಗೂ ಹೆಚ್ಚಿನ ಶಕ್ತಿಯ ಅಗತ್ಯವಿರುವ ಸಮಯ ಕೂಡ ಇದು. ತಮ್ಮ ತೂಕವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಅಥವಾ ಮಧುಮೇಹ ಹೊಂದಿರುವ ಜನರಿಗೆ, ಬೆಳಿಗ್ಗೆ ಅನ್ನವನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆ ಸ್ಪೈಕ್ಗಳನ್ನು (ಅಧಿಕ ರಕ್ತದ ಸಕ್ಕರೆ ಮಟ್ಟದ ರೋಗಲಕ್ಷಣಗಳು) ತಡೆಯಲು ಸಹಾಯ ಮಾಡುತ್ತದೆ. ದೇಹವು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕೆಲವು ವಿಧದ ನಾರುಗಳಿವೆ. ಆದರೆ ಆರೋಗ್ಯಕರ ಕರುಳಿಗೆ ಸಹಾಯ ಮಾಡುವ ಪ್ರೋಬಯಾಟಿಕ್‌ಗಳಿಗೆ ಅವು ಮುಖ್ಯವಾಗಿವೆ. ಅಕ್ಕಿಯಲ್ಲಿ ಇಂಥ ನಾರುಗಳಿದ್ದು ಅನ್ನ ಸೇವನೆ ಅಗತ್ಯವಾಗಿದೆ.
ರಾತ್ರಿಯ ಊಟಕ್ಕೆ ಬ್ರೌನ್ ರೈಸ್ ತಿನ್ನಬಹುದು. ಇದು ಲೈಟ್ ಆಹಾರವಾಗಿದ್ದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಬ್ರೌನ್ ರೈಸ್‌ನಲ್ಲಿ ಫೈಬರ್, ಮೆಗ್ನೀಶಿಯಮ್ ಅಧಿಕವಾಗಿದೆ. ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಚರ್ಮದ ರಂಧ್ರಗಳ ವಿರುದ್ಧ ಹೋರಾಡಲು ಹೆಚ್ಚಿನ ಪ್ರೋಟೀನ್ ಇರುವ ಈ ಬ್ರೌನ್ ರೈಸ್ ಸಹಾಯ ಮಾಡುತ್ತದೆ. ಉತ್ತಮ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.
‘ಅತಿ ಸರ್ವತ್ರ ವರ್ಜಯೇತ್’ ಎಂಬ ಈ ಸಂಸ್ಕೃತ ಶ್ಲೋಕದಂತೆ ಯಾವುದನ್ನೇ ಆದರೂ ಮಿತಿಗಿಂತ ಹೆಚ್ಚಾಗಿ ಸೇವಿಸಿದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚು ಅನ್ನ ತಿನ್ನುವವರು ಇದನ್ನು ಮಿತವಾಗಿ ಮತ್ತು ಸಮತೋಲಿತ ಆಹಾರದ ಭಾಗವಾಗಿ ತಿನ್ನಬೇಕು, ಆಗ ಮಾತ್ರ ಅನ್ನವು ನಮ್ಮ ದೇಹಕ್ಕೆ ಪರಿಣಾಮಕಾರಿಯಾಗಿರುತ್ತದೆ.