Earwax Removing: ಎಚ್ಚರ | ಈ ರೀತಿ ಕಿವಿಯನ್ನು ಕ್ಲೀನ್ ಮಾಡಿದರೆ ಕಿವುಡುತನ ಬರುತ್ತೆ!
ಮನುಷ್ಯನ ದೇಹದ ನವರಂಧ್ರಗಳಲ್ಲಿ ಕಿವಿ ಕೂಡ ಒಂದು. ಬಹತೇಕ ಜನರ ಕಿವಿಯಲ್ಲಿ ಮೇಣ ಉತ್ಪಾದನೆಯಾಗುವುದು ಮತ್ತು ಕಸ ಕಟ್ಟಿಕೊಳ್ಳುವುದು ಸಾಮಾನ್ಯವಾಗಿದೆ. ಆದ್ದರಿಂದ ನೋವು, ಕಿರಿಕಿರಿ ಮತ್ತು ತುರಿಕೆಯಿಂದ ತಪ್ಪಿಸಿಕೊಳ್ಳಬೇಕೆಂದರೆ ಕಾಲಕಾಲಕ್ಕೆ ನಮ್ಮ ಕಿವಿಗಳನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಹಾಗಂತ ಕಿವಿಗೆ ಪಿನ್ನು, ಕಡ್ಡಿ ಈ ರೀತಿಯ ವಸ್ತುಗಳನ್ನು ಹಾಕಿ ಸ್ವಚ್ಛ ಮಾಡಲು ಹೋಗಬಾರದು. ಏಕೆಂದರೆ ಈ ರೀತಿ ಮಾಡಿದರೆ ಕಿವಿಯ ತಮಟೆಗೆ ಹಾನಿ ಉಂಟಾಗುತ್ತದೆ. ಕಿವಿಯ ಮೇಣವನ್ನು ಸ್ವಚ್ಛಗೊಳಿಸುವಾಗ ಜಾಗರೂಕರಾಗಿರಬೇಕು. ಇಲ್ಲವಾದರೆ ಕಿವುಡುತನದಂತಹ ಸಮಸ್ಯೆ ನಿಮ್ಮನ್ನು ಬಾಧಿಸಬಹುದು.
ಅನೇಕ ಜನರು ಈಗಿನ ಮಾರುಕಟ್ಟೆಗಳಲ್ಲಿ ಸುಲಭವಾಗಿ ಲಭ್ಯವಿರುವ ಹತ್ತಿ ಸ್ವಾಬ್ ಅನ್ನು ತೆಗೆದುಕೊಂಡು ತಮಗೆ ಬೇಕಾದ ರೀತಿಯಲ್ಲಿ ತುಂಬಾ ಅಜಾಗರೂಕತೆ ವಹಿಸಿ ಕಿವಿಯ ಸ್ವಚ್ಛತೆ ಮಾಡಲು ಮುಂದಾಗುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಕಾಟನ್ ಸ್ವಾಬ್ ಅನ್ನು ಕೇವಲ ಕಿವಿಯ ಹೊರ ಭಾಗವನ್ನು ಸ್ವಚ್ಛ ಮಾಡಿಕೊಳ್ಳಲು ಮಾತ್ರ ಬಳಸಬೇಕು.ಯಾವುದೇ ಕಾರಣಕ್ಕೂ ಕಿವಿಯ ಒಳಗೆ ಅಂದರೆ ಕಿವಿಯ ನಾಳಕ್ಕೆ ಹತ್ತಿ ಕಡ್ಡಿಯನ್ನು ಹಾಕಬಾರದು. ಇದರಿಂದ ನಿಮ್ಮ ಕಿವಿಯ ಗುಗ್ಗೆ ಇನ್ನಷ್ಟು ಒಳ ಹೋಗುವ ಸಾಧ್ಯತೆ ಇರುತ್ತದೆ. ಸಹಜವಾಗಿ ಇದರಿಂದ ನಿಮ್ಮ ಕಿವಿಯ ತಮಟೆ ಸಂಪೂರ್ಣವಾಗಿ ಮುಚ್ಚಿಕೊಂಡು ಹಾನಿಯಾಗುವ ಸಾಧ್ಯತೆ ದಟ್ಟವಾಗಿರುತ್ತದೆ. ಇದರಿಂದ ನಿಮಗೆ ಕಿವುಡುತನದ ಸಮಸ್ಯೆ ಆವರಿಸಬಹುದು.
ಕೆಲ ಜನರಂತೂ ಸ್ವಲ್ಪ ಕಿವಿಯಲ್ಲಿ ತುರಿಕೆ ಆರಂಭವಾದರೆ ಸಾಕು ಅಥವಾ ಕಿವಿಗಳನ್ನು ಸ್ವಚ್ಛಗೊಳಿಸಲು ಟೂತ್ಪಿಕ್ಸ್, ಸೇಫ್ಟಿ ಪಿನ್ಗಳು, ಕೀಗಳು, ಹೇರ್ ಕ್ಲಿಪ್ಗಳಂತಹ ವಸ್ತುಗಳನ್ನು ಬಳಸುತ್ತಾರೆ. ಈ ಅಭ್ಯಾಸವು ಬಹಳ ಅಪಾಯಕಾರಿಯಾಗಿದ್ದು, ಕಿವಿಯಲ್ಲಿ ಗಾಯ ಅಥವಾ ರಕ್ತಸ್ರಾವದಂತಹ ಅಪಾಯ ಕಾಡಬಹುದು.
ಇತ್ತೀಚಿನ ಮಾಡರ್ನ್ ಯುಗದಲ್ಲಿ ಕಿವಿ ಮೇಣದಬತ್ತಿ ಅಥವಾ ಇಯರ್ ಕ್ಯಾಂಡಲ್ ಬಹಳ ಟ್ರೆಂಡಿಂಗ್ ಆಗುತ್ತಿದೆ. ಆದರೆ ಹೆಚ್ಚಿನ ಓಟೋಲರಿಂಗೋಲಜಿಸ್ಟ್ಗಳು ಇದನ್ನು ಪರಿಣಾಮಕಾರಿ ಎಂದು ಪರಿಗಣಿಸುವುದಿಲ್ಲ. ಇದು ಮುಖ, ಕೂದಲು, ಹೊರ ಕಿವಿ ಮತ್ತು ಒಳಗಿನ ಕಿವಿಯನ್ನು ಸುಡುವ ಸಾಧ್ಯತೆಯಿರುವುದರಿಂದ ಅಪಾಯದ ಮಟ್ಟ ಹೆಚ್ಚು.
ವಾಸ್ತವವಾಗಿ ಒಬ್ಬ ವ್ಯಕ್ತಿಯು ತನ್ನಷ್ಟಕ್ಕೆ ತಾನೇ ಕಿವಿ ಮೇಣವನ್ನು ಎಂದಿಗೂ ಸ್ವಚ್ಛಗೊಳಿಸಬಾರದು ಅಥವಾ ತೆಗೆದುಹಾಕಬಾರದು. ಆದರೆ ಕೆಲವೊಮ್ಮೆ ಮೇಣವನ್ನು ತೆಗೆಯುವುದು ಮುಖ್ಯ ಮತ್ತು ಗುಣಮಟ್ಟದ ವೈದ್ಯಕೀಯ ಆರೈಕೆ ಬೇಕು. ಇಂತಹ ಸಂದರ್ಭ ಎದುರಾದಾಗ ನೀವು ಇಎನ್ಟಿ ತಜ್ಞರನ್ನು ಸಂಪರ್ಕಿಸಿ. ನಂತರ ಯಾವುದೇ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ನೀವೇ ಸ್ವಚ್ಛಗೊಳಿಸಬೇಕೆಂದಿದ್ದರೆ, ನಿಮ್ಮ ಕಿವಿಗೆ ಕೆಲವು ಹನಿ ಗ್ಲಿಸರಿನ್, ಖನಿಜ ತೈಲ ಅಥವಾ ಸಾಸಿವೆ ಎಣ್ಣೆಯನ್ನು ಹಾಕುವ ಮೂಲಕ ಇಯರ್ವಾಕ್ಸ್ ಅನ್ನು ಮೃದುಗೊಳಿಸಿ ನಂತರ ಮೃದುವಾದ ಅಂಗಾಂಶದ ಸಹಾಯದಿಂದ ಸ್ವಚ್ಛಗೊಳಿಸಿ.
ಸಾಮಾನ್ಯವಾಗಿ ಸ್ವಲ್ಪ ಮಟ್ಟದಲ್ಲಿಯೆ ಕಂಡುಬರುವ ಕಿವಿ ಸಮಸ್ಯೆಯನ್ನು ಮನೆಯಲ್ಲೇ ಹೋಗಲಾಡಿಸಬಹುದಾದರೂ ವೈದ್ಯರ ಸಲಹೆ ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಹಾಗಾಗಿ, ಕಿವಿ ಸಮಸ್ಯೆಗಳಿದ್ದಲ್ಲಿ ಮನೆ ಮದ್ದುಗಳಿಂದಲೂ ಅದು ಸರಿ ಹೋಗದೆ ಇದ್ದ ಸಂದರ್ಭದಲ್ಲಿ ವೈದ್ಯರನ್ನು ಖಂಡಿತ ಭೇಟಿ ಮಾಡಿ.