Crime News : ಚಲಿಸುವ ಬಸ್ಸಿನಿಂದ ಆಯ ತಪ್ಪಿ ಬಿದ್ದ ವಿದ್ಯಾರ್ಥಿ, ಚಕ್ರದಡಿ ಸಿಲುಕಿ ದಾರುಣ ಸಾವು!
ಸರ್ಕಾರ ಅದೆಷ್ಟೇ ಸಂಚಾರಿ ನಿಯಮಗಳನ್ನು ಜಾರಿಗೆ ತಂದರೂ ಕೂಡ ಅದನ್ನು ಗಾಳಿಗೆ ತೂರಿ ರೂಲ್ಸ್ ಬ್ರೇಕ್ ಮಾಡುವವರೇ ಹೆಚ್ಚು. ಅದರಲ್ಲೂ ಕೂಡ ವಾಹನ ಚಾಲನೆ ಮಾಡುವಾಗ ನಿಯಮಗಳನ್ನು ಪಾಲಿಸದೇ ಅಪಾಯಕ್ಕೆ ಆಹ್ವಾನ ಮಾಡಿಕೊಡುವ ಅನೇಕ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತಿನಂತೆ ಅತಿ ವೇಗದಲ್ಲಿ ವಾಹನ ಚಾಲನೆ ಮಾಡಿದ ಪರಿಣಾಮ ದುರ್ಘಟನೆ ನಡೆದು ವ್ಯಕ್ತಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಕೊಯಮತ್ತೂರಿನಲ್ಲಿ (Coimbatore) ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ನಿಂದ ಬಿದ್ದ ವಿದ್ಯಾರ್ಥಿಯೊಬ್ಬ ಅದೆ ಬಸ್ನ ಚಕ್ರದಡಿ ಸಿಲುಕಿ ಮೃತ ಪಟ್ಟಿರುವ ಘಟನೆ ವರದಿಯಾಗಿದೆ. ಮೃತ ಪಟ್ಟಿರುವ ಯುವಕನನ್ನು ಮದನ್ ಲಾಲ್ ಎನ್ನಲಾಗಿದೆ. ಕೇರಳದ ಮರೈಯೂರ್ನ 22 ಹರೆಯದ ಮದನ್ಲಾಲ್ ಪೊಲ್ಲಾಚಿಯ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ನಲ್ಲಿ 3ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಮದನ್ಲಾಲ್ ಉಡುಮಲೈನಲ್ಲಿ ರೂಂ ಮಾಡಿಕೊಂಡಿದ್ದ. ಮದನ್ಲಾಲ್ ಕೊಯಮತ್ತೂರಿನಿಂದ ಪಳನಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಹತ್ತಿದ ಸಂದರ್ಭ ಈ ದುರ್ಘಟನೆ ನಡೆದಿದೆ.
ಅತೀ ವೇಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ ತಿರುವು ತೆಗೆದುಕೊಳ್ಳುತ್ತಿದ್ದ ಸಂದರ್ಭ ಬ್ಯಾಲೆನ್ಸ್ ತಪ್ಪಿದ ಮದನಲಾಲ್ ಕೆಳಗೆ ಬಿದ್ದಿದ್ದು ಜೊತೆಗೆ ಬಸ್ನ ಹಿಂಬದಿ ಚಕ್ರದಡಿ ಸಿಲುಕಿ ಅಪ್ಪಚ್ಚಿಯಾಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕೋರಮಂಗಲಂ ಪೊಲೀಸರು ಸ್ಥಳಕ್ಕೆ ಧಾವಿಸಿ, ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಅಪಘಾತವಾದ ಬಸ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಪ್ರಕರಣದ ಕುರಿತು ಖಾಕಿ ಪಡೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.