ಹೊಸದಾಗಿ ಕಾರು ಖರೀದಿಸುವವರೇ ನಿಮಗೊಂದು ಉಪಯುಕ್ತ ಮಾಹಿತಿ | ಈ 10 ಸುರಕ್ಷತಾ ವೈಶಿಷ್ಟ್ಯಗಳನ್ನು ಖಂಡಿತಾ ಪರಿಶೀಲಿಸಿ, ನಂತರ ಖರೀದಿಸಿ
ಹೆಚ್ಚಿನ ಜನರು ಕಾರು ಖರೀದಿಸಬೇಕಾದರೆ ಫೀಚರ್, ಬೆಲೆ, ಕಾರಿನ ಮೈಲೇಜ್ ನೋಡಿ ಖರೀದಿಸುತ್ತಾರೆ. ಆದರೆ ಕಾರಿನಲ್ಲಿರುವ ಸುರಕ್ಷತಾ ವೈಶಿಷ್ಟ್ಯದ ಬಗ್ಗೆ ಗಮನ ಕೊಡುವುದಿಲ್ಲ. ಅದರಲ್ಲೂ ಕಾರು ನೋಡೋದಿಕ್ಕೆ ಸೂಪರ್ ಆಗಿದೆ ಅಂದ್ರೆ ಸಾಕು, ಬಣ್ಣ ನೋಡಿನೇ ಕಾರು ಬೇಕು ಅಂತ ನಿರ್ಧಾರ ಮಾಡುತ್ತಾರೆ. ಆದರೆ ನೀವು ಸುರಕ್ಷತೆಯ ಬಗ್ಗೆನೂ ಗಮನಹರಿಸಬೇಕು. ಅದು ತುಂಬಾ ಮುಖ್ಯ ಕೂಡ. ಕಾರಿನಲ್ಲಿ ಸುರಕ್ಷತಾ ವೈಶಿಷ್ಟ್ಯಗಳ ಕೊರತೆ ಇದ್ದರೆ, ಒಂದು ವೇಳೆ ಪ್ರಯಾಣದ ಸಂದರ್ಭದಲ್ಲಿ ಅಪಘಾತವಾದರೆ ಗಂಭೀರ ಗಾಯಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ನೀವು ಕಾರು ಖರಿದಿಸಬೇಕಾದರೆ ಸುರಕ್ಷತಾ ವೈಶಿಷ್ಟ್ಯದ ಬಗ್ಗೆನೂ ತಿಳಿದುಕೊಳ್ಳಿ. ಇನ್ನು, ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳನ್ನು ಇಲ್ಲಿ ನೀಡಲಾಗಿದೆ.
ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು :
ಸದ್ಯ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಕಡ್ಡಾಯವಾಗಿದೆ. ಹಾಗಾಗಿ ಕಾರು ಕಂಪನಿಗಳು ಎಂಟ್ರಿ ಲೆವೆಲ್ ಕಾರುಗಳಲ್ಲಿ ಡ್ರೈವರ್ ಸೈಡ್ ಏರ್‌ಬ್ಯಾಗ್ ಜೊತೆಗೆ ಫ್ರಂಟ್ ಪ್ಯಾಸೆಂಜರ್, ಸೈಡ್ ಪ್ಯಾಸೆಂಜರ್ ಏರ್‌ಬ್ಯಾಗ್ ಅನ್ನು ಕೂಡ ನೀಡುತ್ತಿವೆ. ಅಪಘಾತದ ಸಮಯದಲ್ಲಿ ಈ ಏರ್‌ಬ್ಯಾಗ್‌ಗಳು ಕಾರು ಚಾಲಕ ಹಾಗೂ ಪ್ರಯಾಣಿಕರನ್ನು ರಕ್ಷಿಸುತ್ತದೆ.
ಸ್ಪೀಡ್ ಸೆನ್ಸಿಂಗ್ ಡೋರ್‌ಲಾಕ್ :
ಇಂದಿನ ಕಾರುಗಳಲ್ಲಿ ಕಂಡುಬರುವ ಪ್ರಮುಖ ವೈಶಿಷ್ಟ್ಯಗಳಲ್ಲಿ ಇದೂ ಒಂದು. ನೀವು ಕಾರು ಸ್ಟಾರ್ಟ್ ಮಾಡಿ, ಡೋರ್ ಸರಿಯಾಗಿ ಲಾಕ್ ಮಾಡಲು ಮರೆತರೆ, ಸ್ಪೀಡ್ ಸೆನ್ಸಿಂಗ್ ಡೋರ್‌ಲಾಕ್ ಕಾರು ನಿರ್ದಿಷ್ಟ ವೇಗವನ್ನು ತಲುಪಿದ ತಕ್ಷಣ ಸ್ವಯಂಚಾಲಿತವಾಗಿ ಕಾರಿನ ಡೋರ್ ಲಾಕ್ ಮಾಡುತ್ತದೆ.
ಸ್ಪೀಡ್ ಸೆನ್ಸಿಂಗ್ ಡೋರ್ ಅನ್ಲಾಕ್ :
ಕಾರು ಅಪಘಾತದ ಸಂದರ್ಭದಲ್ಲಿ ಸ್ಪೀಡ್ ಸೆನ್ಸಿಂಗ್ ಡೋರ್ ಅನ್ಲಾಕ್ ವೈಶಿಷ್ಟ್ಯ ಉಪಯೋಗಕ್ಕೆ ಬರಲಿದೆ. ಅಪಘಾತದ ಸಂದರ್ಭದಲ್ಲಿ ಇದು ಕಾರಿನ ಸ್ಥಾನವನ್ನು ಅವಲಂಬಿಸಿ ಸಿಸ್ಟಮ್ ಸ್ವಯಂಚಾಲಿತವಾಗಿ ಡೋರ್‌ಗಳನ್ನು ಅನ್ಲಾಕ್ ಮಾಡುತ್ತದೆ. ಇದರಿಂದ ಕಾರು ಅಪಘಾತದ ವೇಳೆ ಪ್ರಯಾಣಿಕರು ಆದಷ್ಟು ಬೇಗ ಕಾರಿನಿಂದ ಹೊರಬರಲು ಸಹಕಾರಿಯಾಗಿದೆ.
ರಿವರ್ಸ್ ಪಾರ್ಕಿಂಗ್ ಸೆನ್ಸಾರ್ :
ಈ ವೈಶಿಷ್ಟ್ಯವು ಪಾರ್ಕಿಂಗ್ ವೇಳೆ ಪ್ರಮೋಜನಕಾರಿಯಾಗಿದ್ದು,
ಕಾರು ನಿಲ್ಲಿಸಿದಾಗ ಮಾತ್ರವಲ್ಲ, ಕಾರಿನ ಹಿಂದೆ ವ್ಯಕ್ತಿ ಇದ್ದರೆ, ರಿವರ್ಸ್ ಪಾರ್ಕಿಂಗ್ ಸೆನ್ಸರ್ ಅಲಾರಂ ಮೂಲಕ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ. ಇದರಿಂದ ಚಾಲಕ ಸುಲಭವಾಗಿ ರಿವರ್ಸ್ ನಲ್ಲಿ ಬರಬಹುದು.
ಕಾರ್ನರಿಂಗ್ ಸ್ಟೆಬಿಲಿಟಿ ಕಂಟ್ರೋಲ್ :
ಈ ವೈಶಿಷ್ಟ ರಸ್ತೆಯಲ್ಲಿ ಕಾರನ್ನು ವೇಗವಾಗಿ ತಿರುಗಿಸುವಾಗ ಸಾಧ್ಯವಾದಷ್ಟು ಕಾರು ಪಲ್ಟಿಯಾಗುವುದನ್ನು ಮತ್ತು ಸ್ಕಿಡ್ ಆಗುವುದನ್ನು ತಡೆಯುತ್ತದೆ. ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗ, ಈ ವ್ಯವಸ್ಥೆಯು ಕಾರಿನ ಚಕ್ರಗಳ ವೇಗಕ್ಕೆ ಅನುಗುಣವಾಗಿ ಬ್ರೇಕ್ ಫೋರ್ಸ್ ಅನ್ನು ವಿತರಿಸುತ್ತದೆ.
ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ :
ಇದು ಕೂಡ ಪಾರ್ಕಿಂಗ್ ಮಾಡುವಾಗ ಪ್ರಯೋಜನಕಾರಿ. ರಿವರ್ಸ್ ಗೇರ್ ತೆಗೆದ ತಕ್ಷಣ, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಸಕ್ರಿಯಗೊಳ್ಳುತ್ತದೆ. ಕಾರಿನ ಒಳಗಿನ ಡಿಸ್ಪ್ಲೇಯಲ್ಲಿ ನೀವು ಹಿಂಬದಿಯ ಚಿತ್ರಣ ನೋಡಬಹುದು. ಸುಲಭವಾಗಿ ಪಾರ್ಕಿಂಗ್ ಮಾಡಬಹುದು.
ಬಲವರ್ಧಿತ ಬಿ-ಪಿಲ್ಲರ್ :
ಹೆಚ್ಚಾಗಿ ವಾಹನಗಳಿಗೆ ಮುಖಾಮುಖಿಯಾಗಿ ಅಪಘಾತ ಆಗುತ್ತದೆ.
ಅದರಲ್ಲಿ ಹೆಚ್ಚು ಕಾರುಗಳಲ್ಲಿ A ಮತ್ತು B ಪಿಲ್ಲರ್‌ಗಳು ಬಲವರ್ಧಿತ ಉಕ್ಕಿನಿಂದ ಮಾಡಿರುತ್ತವೆ. ಇದು ಮುಂಭಾಗದಿಂದ ಕಾರಿನ ರಚನೆಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಕಾರಿನಲ್ಲಿ ಬಲವರ್ಧಿತ ಉಕ್ಕಿನ ಬಳಕೆಯು ಕಾರಿನ ಕ್ರ್ಯಾಶ್ ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ಇದರಿಂದ ಕಾರು ಮುಖಾಮುಖಿ ಡಿಕ್ಕಿಯಾದಾಗ ಪ್ರಯಾಣಿಕರಿಗೆ ಸುರಕ್ಷತೆ ಒದಗುತ್ತದೆ.
ಐಸೊಫಿಕ್ಸ್ ಚೈಲ್ಡ್ ಆಂಕರ್ :
ಇದು ಮಕ್ಕಳ ಸುರಕ್ಷತೆಗೆ ಇರುವ ವೈಶಿಷ್ಟ್ಯವಾಗಿದೆ. ಐಸೊಫಿಕ್ಸ್ ಚೈಲ್ಡ್ ಆಂಕರ್ ವೈಶಿಷ್ಟ್ಯದಿಂದ ಮಗುವಿನ ಆಸನವನ್ನು ಕಾರಿನಲ್ಲಿ ಅಡ್ಜಸ್ಟ್ ಮಾಡಬಹುದು. ಈ ಆಸನದ ಬಳಕೆಯು ಕಾರಿನಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ನವಜಾತ ಶಿಶುಗಳು ಹಾಗೂ ಮಕ್ಕಳು ಸುರಕ್ಷತೆಯಿಂದ ಪ್ರಯಾಣಿಸಬಹುದು.