‘ಕಾಂತಾರ’ ಸಿನಿಮಾ ಹೆಸರಿನಿಂದ ಪ್ರೇರಣೆ | ಉದ್ಯಮ, ಹೋಂ ಸ್ಟೇಗಳಿಗೆ ಈ ಹೆಸರಿಟ್ಟ ಮಾಲೀಕರು, ಕೈ ಹಿಡಿದ ಗ್ರಾಹಕ!
ವಿಶ್ವದಾದ್ಯಂತ ಸಂಚಲನ ಮೂಡಿಸಿರುವ ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾ, ಇದೀಗ ಮತ್ತೊಂದು ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಿದೆ. ಹೇಗಪ್ಪಾ ಅಂದ್ರೆ, ಹೋಮ್ ಸ್ಟೇ ಮತ್ತು ಡಾಬಾಗಳಿಗೆ ‘ಕಾಂತಾರ’ ಹೆಸರನ್ನು ಇಡಲಾಗಿದ್ದು, ಸದ್ಯ ಈ ವಿಶೇಷವಾದ ಹೆಸರು ಪ್ರವಾಸಿಗರನ್ನು ಸೆಳೆಯುತ್ತಿದ್ದು, ಎಲ್ಲರೂ ಈ ಹೆಸರನ್ನು ಮೆಚ್ಚಿಕೊಂಡಿದ್ದಾರೆ. ಈ ಹೆಸರನ್ನು ಯಾರು ಇಟ್ಟಿರೋದು ? ಯಾವ ಸ್ಥಳಕ್ಕೆ ಇಡಲಾಗಿದೆ ? ಬನ್ನಿ ಈ ಲೇಖನದ ಮೂಲಕ ತಿಳಿಯೋಣ.
ಹೋಟೆಲ್ ಹಾಗೂ ಹೋಂಸ್ಟೇಗಳಿಗೆ ಆಕರ್ಷಕ ಹೆಸರಿಡಬೇಕಾದರೆ ಸಾಕಷ್ಟು ಯೋಚಿಸಬೇಕು. ಇದು ಮಾತ್ರವಲ್ಲ, ಮನೆಗಳಿಗೆ ಹೆಸರಿಡಬೇಕಾದರೂ ತಲೆಗೆ ಹುಳ ಬಿಟ್ಕೊಂಡ ಅನುಭವ ಆಗುತ್ತದೆ. ಯಾಕಂದ್ರೆ ಸುಲಭವಾಗಿ ಉತ್ತಮವಾದ ಹೆಸರು ಸಿಗೋದಿಲ್ಲ. ಅದರಲ್ಲೂ ಪ್ರವಾಸಿಗರನ್ನು ಆಕರ್ಷಿಸಲು ಹೋಟೆಲ್ ಹಾಗೂ ಹೋಂಸ್ಟೇಗಳಿಗೆ ಆಕರ್ಷಕ ಹೆಸರಿಡುವುದು ದೊಡ್ಡ ಸವಾಲಿನ ಸಂಗತಿ ಎಂದೇ ಹೇಳಬಹುದು. ಈ ನಿಟ್ಟಿನಲ್ಲಿ ಕೆಲ ಉದ್ಯಮಿಗಳು ತಮ್ಮ ಹೋಟೆಲ್ ಹಾಗೂ ಹೋಂಸ್ಟೇಗಳಿಗೆ ವಿಶ್ವದಾದ್ಯಂತ ಸಂಚಲನ ಮೂಡಿಸಿದ ‘ಕಾಂತಾರ’ ಸಿನಿಮಾದ ಹೆಸರನ್ನು ಇಡಲು ಮುಂದಾಗುತ್ತಿದ್ದಾರೆ.
ಸದ್ಯ ದಾಂಡೇಲಿ ಬಳಿಯ ಹೋಮ್ ಸ್ಟೇ ಮತ್ತು ಹಳಿಯಾಳ ಬಳಿಯ ಡಾಬಾಗಳಿಗೆ ‘ಕಾಂತಾರ’ ಹೆಸರನ್ನು ಇಡಲಾಗಿದ್ದು, ಈ ಹೆಸರು ಗ್ರಾಹಕರು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಜೊಯಿಡಾ ತಾಲೂಕಿನ ಪ್ರದಾನಿ ಗ್ರಾಮದ ಕಾಂತಾರ ಹೋಂಸ್ಟೇ ಮಾಲೀಕ ಮಹೇಶ್ ದಂಡಗಲಿ ಈ ಬಗ್ಗೆ ಮಾತನಾಡಿ, ಕಾಂತಾರ ಸಿನಿಮಾ ನೋಡಿದ್ದೇನೆ. ಅದ್ಭುತ ಸಿನಿಮಾ, ನನಗೆ ಬಹಳಷ್ಟು ಇಷ್ಟವಾಗಿತ್ತು. ಕಾಡಿನಲ್ಲಿ ನಡೆಯುವ ಕಥೆಯ ಸಿನಿಮಾ ಆಗಿರೋದ್ರಿಂದ, ಜೊಯಿಡಾ ತಾಲೂಕಿನ ದಟ್ಟವಾದ ಅರಣ್ಯದಲ್ಲಿ ನಮ್ಮ ಹೋಂಸ್ಟೇ ಇರುವುದರಿಂದ, ಇದಕ್ಕೆ ಸಿನಿಮಾ ಹೆಸರು ಇಡುವುದು ಚೆನ್ನಾಗಿರುತ್ತದೆ, ಸೂಕ್ತ ಎಂದು ಭಾವಿಸಿದ್ದೇನೆ. ನನಗೆ ದೈವದ ಮೇಲೆ ನಂಬಿಕೆಯಿದೆ. ಹಾಗಾಗಿ ಈ ಹೆಸರು ಇಟ್ಟಿದ್ದೇನೆ ಎಂದು ಹೇಳಿದರು. ಆನ್ಲೈನ್ನಲ್ಲಿ ಇನ್ನೂ ಹೆಸರು ಪ್ರಸಿದ್ಧವಾಗಿಲ್ಲ, ಆದರೆ, ಹೋಂಸ್ಟೇಗೆ ‘ಕಾಂತಾರ’ ಹೆಸರು ಇಟ್ಟಿರುವುದರಿಂದ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಈ ಹೆಸರು ಪ್ರವಾಸಿಗರನ್ನು ಆಕರ್ಷಿಸುತ್ಣಿದೆ ಎಂದು ಹೇಳಿದ್ದಾರೆ.
ಇನ್ನು ಹಳಿಯಾಳ-ಧಾರವಾಡ ರಸ್ತೆಯಲ್ಲಿರುವ ಡಾಬಾದ ಮಾಲೀಕರು ಮಾತನಾಡಿ, ಸಸ್ಯಾಹಾರಿ-ಮಾಂಸಾಹಾರಿ ಡಾಬಾ ತೆರೆಯಲು ಚಿಂತನೆ ನಡೆಸಿದಾಗ ಮನಸ್ಸಿನಲ್ಲಿ ಸಾಕಷ್ಟು ಹೆಸರುಗಳು ಇದ್ದವು. ಆದರೆ, ಯಾವುದೂ ಸರಿಯಾಗಲಿಲ್ಲ. ಕೊನೆಗೆ ‘ಕಾಂತಾರ’ ಹೆಸರಿಡಲು ನಿರ್ಧರಿಸಿದೆವು. ಕಾಂತಾರ ಚಿತ್ರವು ಅರಣ್ಯವಾಸಿಗಳ ದೈನಂದಿನ ಜೀವನವನ್ನು ಆಧರಿಸಿದ್ದು, ಚಿತ್ರದುದ್ದಕ್ಕೂ ಆಹಾರ ಪದ್ಧತಿಯನ್ನು ಗೌರವಯುತವಾಗಿ ತೋರಿಸಲಾಗಿದೆ ಎಂದು ಹೇಳಿದ್ದಾರೆ. ಕಾಂತಾರ ಹೆಸರಿನಿಂದ ಗ್ರಾಹಕರನ್ನು ಆಕರ್ಷಿತಗೊಳಿಸಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು. ಒಟ್ಟಾರೆ ‘ಕಾಂತಾರ’ ಸಿನಿಮಾ ಜನಮನದಲ್ಲಿ ಅಚ್ಚೊತ್ತಿದೆ.