ಖ್ಯಾತ ಗಾಯಕಿ ವಾಣಿ ಜಯರಾಂ ಸಾವು : ಮರಣೋತ್ತರ ಪರೀಕ್ಷೆಯಲ್ಲಿ ಶಾಕಿಂಗ್ ಹೇಳಿಕೆ ಬಹಿರಂಗ!!!
ದಕ್ಷಿಣ ಭಾರತದ ಖ್ಯಾತ ಗಾಯಕಿ ವಾಣಿಜಯರಾಂ ಶನಿವಾರ (ಫೆಬ್ರವರಿ 04) ಚೆನ್ನೈನಲ್ಲಿರುವ ತಮ್ಮ ಸ್ವಗೃಹದಲ್ಲಿ ಮೃತಪಟ್ಟಿದ್ದರು. ಸಂಗೀತ ಲೋಕದ ಹೆಸರಾಂತ ಗಾಯಕಿ ವಾಣಿ ಜಯರಾಂ ಸಾವಿನ ಕುರಿತಂತೆ ಅನೇಕ ಊಹಾಪೋಹ ಹರಿದಾಡಿತ್ತು. ಅಷ್ಟೆ ಅಲ್ಲದೆ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿತ್ತು. ಹೀಗಾಗಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.ಇದೀಗ, ಗಾಯನ ಲೋಕದ ಗಾನಕೋಗಿಲೆಯ ಸಾವಿನ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ.
ತಮಿಳು, ತೆಲಗು, ಕನ್ನಡ, ಮಲಯಾಳಂ, ಹಿಂದಿ, ಉರ್ದು, ಮರಾಟಿ, ಬೆಂಗಾಲಿ, ಬೋಜ್‌ಪುರಿ, ತುಳು ಮತ್ತು ಓಡಿಯಾ ಭಾಷೆಗಳಲ್ಲಿ ಹಾಡಿರುವ ವಾಣಿ ಜಯರಾಂ ಮೊನ್ನೆಯಷ್ಟೇ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದರು. ಕನ್ನಡದಲ್ಲಿ 50 ಹೆಚ್ಚು ಸಿನಿಮಾಗಳಿಗೆ ಹಾಡಿದ ಅನುಭವ, ಶಿವ ಮೆಚ್ಚಿದ ಕಣ್ಣಪ್ಪ, ರಣರಂಗ, ಮಲಯ ಮಾರುತ, ಒಲವಿನ ಉಡುಗೊರೆಯಂತಹ ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ. ಗಾಯಕಿ ವಾಣಿ ಜಯರಾಂ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಸಂಶಯ ದಟ್ಟವಾಗಿ ಕಾಡುವಂತೆ ಅಲ್ಲಿನ ಚಿತ್ರಣ ಕೂಡ ಸಾಕ್ಷಿಯಾಗಿತ್ತು ಎನ್ನಲಾಗಿದೆ. ವಾಣಿ ಜಯರಾಂ ತಲೆಗೆ ಪೆಟ್ಟಾಗಿದ್ದು ಮಾತ್ರವಲ್ಲದೆ ಅವರು ಬಿದ್ದಿದ್ದ ಸ್ಥಳದಲ್ಲಿ ನೆತ್ತರಿನ ಕುರುಹು ಎದ್ದು ಕಾಣುತ್ತಿತ್ತು. ಹೀಗಾಗಿ ಪೋಲಿಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಆರಂಭಿಸಿದ್ದರು. ಈ ನಿಮಿತ್ತ ಗಾಯಕಿ ವಾಣಿ ಜಯರಾಂ ಅವರ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಸದ್ಯ, ನೆನ್ನೆ ( ಫೆಬ್ರವರಿ 05) ಗಾಯಕಿ ವಾಣಿ ಜಯರಾಮ್ ಅವರ ಮರಣೋತ್ತರ ವರದಿ ಬಂದಿದ್ದು, ಇದರಲ್ಲಿ ಗಾಯಕಿ ಸಾವು ಅಸಹಜವಲ್ಲ ಎಂದು ತಿಳಿದುಬಂದಿದೆ. ಯಾವುದೇ ರೀತಿಯ ಅನುಮಾನಾಸ್ಪದ ಅಂಶಗಳು ವರದಿಯಲ್ಲಿ ದೃಡಪಟ್ಟಿಲ್ಲ ಎಂದು ತಿಳಿದುಬಂದಿದೆ. ಇದರ ಜೊತೆಗೆ ಅಕ್ಕ ಪಕ್ಕದ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಯಾರು ಕೂಡ ವಾಣಿ ಜಯರಾಂ ಅವರ ಮನೆಗೆ ತೆರಳಿರುವ ಅಥವಾ ವಾಣಿ ಅವರ ಮನೆಯಿಂದ ಬಂದಿರುವ ಕುರಿತು ದಾಖಲೆಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಗಾಯಕಿಯ ಸಾವು ಹೃದಯಾಘಾತದಿಂದ ಆಗಿದ್ದು, ಬೇರೆ ಯಾವುದೇ ಅನುಮಾನವಿಲ್ಲ ಎಂದು ಪೊಲೀಸರು ಗಾಯಕಿ ಸಾವಿನ ಬಗ್ಗೆ ಎದ್ದಿದ್ದ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ವಾಣಿ ಜಯರಾಂ ಅವರು ಮಲಗಿದ್ದ ಮಂಚದ ಪಕ್ಕದಲ್ಲಿ ಮರದ ಟೇಬಲ್ ಇದ್ದ ಹಿನ್ನೆಲೆ, ಈ ಟೇಬಲ್ ಮೇಲೆ ವಾಣಿ ಜಯರಾಂ ಬಿದ್ದ ಪರಿಣಾಮ ತಲೆಗೆ ಬಲವಾಗಿ ಪೆಟ್ಟಾಗಿದೆ ಎನ್ನಲಾಗಿದೆ. ಹೀಗಾಗಿ, ವಾಣಿ ಜಯರಾಮ್ ಅವರಿಗೆ ತೀವ್ರ ರಕ್ತಸ್ರಾವವಾಗಿ ರಕ್ತದ ಕಲೆಗಳು ನೆಲದ ಮೇಲೆ ಆಗಿದೆ. ಹೀಗಾಗಿ ಗಾನಲೋಕದ ಗಾನ ಕೋಗಿಲೆಯ ಸಾವನ್ನು ಸಹಜ ಸಾವು ಎಂಬ ನಿರ್ಧಾರಕ್ಕೆ ಪೊಲೀಸ್ ಅಧಿಕಾರಿಗಳು ಬಂದಿದ್ದಾರೆ ಎಂದು ವರದಿಯಾಗಿದೆ.
ವಾಣಿ ಜಯರಾಂ ಚೆನ್ನೈನ ನುಂಗಂಬಾಕ್ಕಂನ ಹಡ್ಡೋಸ್ ರಸ್ತೆಯಲ್ಲಿರುವ ಮನೆಯಲ್ಲಿ ಏಕಾಂಗಿಯಾಗಿ ನೆಲೆಸಿದ್ದರು. ಇವರ ನೆರವಿಗಾಗಿ ಪ್ರತಿದಿನ ಮನೆ ಕೆಲಸ ಕೆಲಸದಾಕೆ ಬರುತ್ತಿದ್ದಳು ಎನ್ನಲಾಗಿದೆ. ಎಂದಿನಂತೆ ಬೆಳಗ್ಗೆ ಮನೆಕೆಲಸದವರು ಬಾಗಿಲು ಬಡಿದರೂ ಗಾಯಕಿ ವಾಣಿ ಬಾಗಿಲು ತೆರೆಯದ ಹಿನ್ನೆಲೆ ಕೆಲಸದಾಕೆ ಪಕ್ಕದ ಮನೆಯವರಿಗೆ ತಿಳಿಸಿ, ಆ ಬಳಿಕ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ. ಆ ಬಳಿಕ ವಾಣಿ ಜಯರಾಂ ಅವರನ್ನು ಆಸ್ಪತ್ರೆ ಕರೆದೊಯ್ಯಲಾಗಿದೆ.