ಪ್ರಿಯತಮೆಯ ಭೇಟಿಗೆ ಮಧ್ಯರಾತ್ರಿ ಪ್ರಿಯಕರ ಮಾಡಿದ ಸಾಹಸ ಪ್ರದರ್ಶನ | ಆಮೇಲೆ ನಡೆದಿದ್ದು ಭಯಾನಕ !
ಪ್ರೀತಿ ಕುರುಡು ಎಂಬ ಮಾತಿನಂತೆ ಪ್ರೇಮದ ಸುಳಿಯಲ್ಲಿ ಸಿಲುಕಿದ ಯುವಕನೊಬ್ಬ ಯುವತಿಯನ್ನು ಭೇಟಿಯಾಗುವ ಧಾವಂತದಲ್ಲಿ ಸಾವಿನ ಮನೆಗೆ ಆಹ್ವಾನ ಪಡೆದ ಘಟನೆ ವರದಿಯಾಗಿದೆ.ಸೇಲಂ ನಲ್ಲಿ ಪ್ರೇಯಸಿಯನ್ನು ರಾತ್ರಿ ಭೇಟಿಯಾಗಲು ಯುವತಿಯ ಮನೆಯ ಟೆರೇಸ್ ಏರಿದ್ದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಮಧ್ಯರಾತ್ರಿ ಟೆರೇಸ್ ಮೇಲೆ ಗೆಳತಿ ಜೊತೆ ಲವ್ವಿ ಡವ್ವಿ ಯುವಕನ ಜೀವಕ್ಕೆ ಕುತ್ತು ತಂದ ಘಟನೆ ನಡೆದಿದೆ. ಯುವಕನ ಪ್ರೇಯಸಿಯ ಮನೆ ಸೇಲಂನ ಚಿನ್ನ ಕೊಲ್ಲಪಟ್ಟಿ ಎಂಬ ಪ್ರದೇಶದಲ್ಲಿತ್ತು ಎನ್ನಲಾಗಿದೆ. ಪ್ರೇಯಸಿಯನ್ನು ಭೇಟಿಯಾಗುವ ಸಲುವಾಗಿ 2 ಅಂತಸ್ತಿನ ಕಟ್ಟಡವನ್ನು ಯುವಕ ಏರಿದ್ದಾನೆ. ಈ ವೇಳೆ, ಯುವತಿಯ ತಾಯಿ ತನ್ನನ್ನು ನೋಡಬಹುದು ಎಂಬ ಭಯದಿಂದ ಯುವಕ ಕಟ್ಟಡದಿಂದ ಕೆಳಗೆ ಹಾರಿದ್ದು, ಯುವಕನ ಈ ಸಾಹಸ ಜೀವವನ್ನು ಬಲಿ ಪಡೆದಿದೆ.ಮೃತ ಯುವಕನನ್ನು ಸಂಜಯ್ ಎನ್ನಲಾಗಿದ್ದು, ಸೇಲಂನ ಚಿನ್ನ ಕೊಲ್ಲಪಟ್ಟಿಯಲ್ಲಿ ಇರುವ ಕೇಂದ್ರೀಯ ಕಾನೂನು ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ ಎನ್ನಲಾಗಿದೆ.
ತನ್ನ ಕಾಲೇಜಿನ ಸಹಪಾಠಿಯಾಗಿದ್ದ ಯುವತಿಯನ್ನು ಸಂಜಯ್ ಶಾಲಾ ದಿನಗಳಿಂದಲೂ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈತ ಮೂಲತಃ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಾಮರಾಜ ನಗರದ ನಿವಾಸಿಯಾಗಿದ್ದ. ಸುಮಾರು 6 ರಿಂದ 8 ಕುಟುಂಬಗಳು ವಾಸ ಇರುವ ಅಪಾರ್ಟ್ಮೆಂಟ್ನಲ್ಲಿ ಯುವತಿ ತನ್ನ ತಾಯಿಯ ಜೊತೆ ಇದ್ದಳು. ಹೀಗಾಗಿ, ತನ್ನ ಸಹಪಾಠಿಗಳ ಜೊತೆಗೆ ಇದೇ ಪ್ರದೇಶದಲ್ಲಿ ಒಂದು ರೂಂ ಬಾಡಿಗೆಗೆ ಪಡೆದುಕೊಂಡಿದ್ದ ಎನ್ನಲಾಗಿದೆ.
ತನ್ನ ಪ್ರೇಯಸಿಯನ್ನು ನೋಡುವ ಸಲುವಾಗಿ ಶನಿವಾರ ಬೆಳಗಿನ ಜಾವ 1 ಗಂಟೆಗೆ ಯುವಕ ಸಂಜಯ್ ಕಟ್ಟಡ ಪ್ರವೇಶಿಸಿದ್ದ. ಕಟ್ಟಡದ ಕಾಂಪೌಂಡ್ ದಾಟಿ ಮೆಟ್ಟಿಲುಗಳ ಸಹಾಯದಿಂದ ಟೆರೇಸ್ ಪ್ರವೇಶಿಸಿದ್ದ ಎನ್ನಲಾಗಿದೆ. ತನ್ನ ಗೆಳತಿಯನ್ನು ಸಂಜಯ್ ಈ ರೀತಿ ಭೇಟಿಯಾಗೋದು ಕಾಮನ್ ಆಗಿತ್ತು. ಅಷ್ಟೆ ಅಲ್ಲದೆ ಇದು ಇವರಿಬ್ಬರ ಹಾಟ್ ಸ್ಪಾಟ್ ಆಗಿತ್ತು ಎನ್ನಲಾಗಿದೆ. ಆದರೆ, ಇವರ ಕಣ್ಣಾಮುಚ್ಚಾಲೆ ಆಟಕ್ಕೆ ಶನಿವಾರ ತೆರೆಬಿದ್ದಿದೆ.
ಯುವತಿಯ ತಾಯಿ ಮಗಳನ್ನು ಹುಡುಕಿಕೊಂಡು ಟೆರೇಸ್ಗೆ ಬಂದಿದ್ದು ಯುವತಿಯ ತಾಯಿಯನ್ನು ಕಂಡು ಯುವಕ ಸಂಜಯ್ ಗಾಬರಿಯಾಗಿದ್ದಾನೆ. ಹೇಗಾದರೂ ಯುವತಿಯ ಕೈಗೆ ಸಿಗದೇ ತಪ್ಪಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಇದ್ದಕ್ಕಿದಂತೆ ಯವಕ ಸಂಜಯ್ ಟೆರೇಸ್ನಿಂದ ಹಾರಿದ್ದಾನೆ. ಹೀಗೆ ಹಾರಿದ ವೇಳೆ, ಸಂಜಯ್ ತಲೆಗೆ ಬಲವಾದ ಪೆಟ್ಟು ಬಿದ್ದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸೇಲಂನ ಕಣ್ಣಕುರಿಚಿ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ.
ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಯುವಕನ ಶವವನ್ನು ಸೇಲಂನ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಮೃತನ ಪೋಷಕರಿಗೆ ಹಸ್ತಾಂತರ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.