New PF withdrawal rule : ಗಮನಿಸಿ, ಪಿಎಫ್ ವಿತ್ಡ್ರಾ ನಿಯಮದಲ್ಲಿ ಬದಲಾವಣೆ!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲೆ ಟಿಡಿಎಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ಯಾನ್ ಕಾರ್ಡ್ ಹೊಂದಿಲ್ಲದವರ ಇಪಿಎಪ್ಗೆ ಟಿಡಿಎಸ್ ಕಡಿತ ಮಾಡುವ ಪ್ರಮಾಣವನ್ನು ಶೇ 30ರಿಂದ 20ಕ್ಕೆ ಇಳಿಕೆ ಮಾಡುವ ಪ್ರಸ್ತಾಪವನ್ನು ವಿತ್ತ ಸಚಿವೆ ಈ ಸಂದರ್ಭದಲ್ಲಿ ಮಾಡಿದ್ದಾರೆ. ಹಾಗೂ ಇತರ ಆದಾಯ ತೆರಿಗೆಗಳು ಹಿಂದಿನಂತೆಯೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ಆದಾಯ ತೆರಿಗೆ ನಿಯಮದ ಪ್ರಕಾರ ನೀವು ಪಿಎಫ್ ಖಾತೆಯನ್ನು ತೆರೆದು 5 ವರ್ಷಗಳಾಗಿಲ್ಲದಿದ್ದರೆ, ಪಿಎಫ್ ಮೊತ್ತದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಹಾಗೆಯೇ ವಾರ್ಷಿಕವಾಗಿ 2.5 ಲಕ್ಷ ರೂಪಾಯಿಗಿಂತ ಅಧಿಕ ಆದಾಯವನ್ನು ಹೊಂದಿದ್ದರೂ ನಿಮಗೆ ಪಿಎಫ್ ಮೊತ್ತದ ಮೇಲೆ ತೆರಿಗೆ ವಿಧಿಸಲಾಗುತ್ತದೆ.
ಐದು ವರ್ಷಕ್ಕೂ ಮುನ್ನ ತೆರಿಗೆಯನ್ನು ಪಾವತಿ ಮಾಡಿದರೆ ನಿಮ್ಮ ಪಿಎಫ್ ಮೊತ್ತದ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆ. ಪಿಎಫ್ ಖಾತೆಯಲ್ಲಿ ಪ್ಯಾನ್ ಕಾರ್ಡ್ ಲಿಂಕ್ ಆಗಿದ್ದರೆ, ಹಣ ವಿತ್ಡ್ರಾ ಮಾಡಿದರೆ ಯಾವುದೇ ಟಿಡಿಎಸ್ ವಿಧಿಸಲಾಗುವುದಿಲ್ಲ. ಪ್ಯಾನ್ ಲಿಂಕ್ ಆಗಿಲ್ಲದಿದ್ದರೆ ಪಿಎಫ್ ಖಾತೆಯ ಮೊತ್ತವನ್ನು ತೆರಿಗೆಗೆ ಅನ್ವಯವಾಗುವ ಆದಾಯಕ್ಕೆ ಸೇರ್ಪಡೆ ಮಾಡಲಾಗುತ್ತದೆ ಎಂದು ಮುಂಬೈ ಮೂಲದ ತೆರಿಗೆ ತಜ್ಞ ಬಲ್ವಂತ್ ಜೈನ್ ಹೇಳಿರುವುದಾಗಿ ‘ಲೈವ್ ಮಿಂಟ್ ಡಾಟ್ಕಾಂ’ ವರದಿ ಮಾಡಿದೆ.
ಪ್ರಾವಿಡೆಂಟ್ ಫಂಡ್ ಖಾತೆಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿಲ್ಲದಿದ್ದರೆ, ಪಿಎಫ್ ಖಾತೆಯ ಒಟ್ಟು ಮೊತ್ತದಿಂದ ನಿವ್ವಳ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಟಿಡಿಎಸ್ ದರ ಪ್ರಸ್ತುತ ಶೇ. 30ರಷ್ಟು ಇದ್ದು, ಇದನ್ನು ಏಪ್ರಿಲ್ 2023ರಿಂದ ಅಥವಾ ಹಣಕಾಸು ವರ್ಷ 2023-2024ರಿಂದ ಶೇ. 20ಕ್ಕೆ ಇಳಿಸಲಾಗುತ್ತದೆ ಎಂದು ಕೂಡಾ ಮಾಹಿತಿ ನೀಡಿದ್ದಾರೆ.
ಆದಾಯ ತೆರಿಗೆ ನಿಯಮಕ್ಕೆ ಬಜೆಟ್ನಲ್ಲಿ ಮಹತ್ವದ ಪರಿಷ್ಕರಣೆ ಮಾಡಲಾಗಿದೆ. ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು 7 ಲಕ್ಷ ರೂ.ಗೆ ವಿಸ್ತರಿಸಲಾಗಿದೆ. ಹೊಸ ತೆರಿಗೆ ಪದ್ಧತಿಯಡಿ ಈ ಘೋಷಣೆ ಮಾಡಲಾಗಿದೆ. ಇದುವೇ ಡಿಫಾಲ್ಟ್ ತೆರಿಗೆ ಪದ್ಧತಿಯಾಗಿರಲಿದೆ ಎಂದೂ ಹಣಕಾಸು ಸಚಿವರು ತಿಳಿಸಿದ್ದಾರೆ. ಹಳೆಯ ತೆರಿಗೆ ಪದ್ಧತಿಯೂ ಅಸ್ತಿತ್ವದಲ್ಲಿರಲಿದ್ದು, 3 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ, ಈ ತೆರಿಗೆ ವಿಧಾನದಲ್ಲಿ ಆದಾಯ ತೆರಿಗೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ.