ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ನಾಯಕನಿಗೆ ಟಿಕೆಟ್ ಘೋಷಿಸಿದ ಜೆಡಿಎಸ್! ಹಾಸದಲ್ಲಾಯ್ತು ಮತ್ತೊಂದು ರಾಜಕೀಯ ಬೆಳವಣಿಗೆ!!
ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಾಸನ ಕ್ಷೇತ್ರದಲ್ಲಿ ಟಿಕೆಟ್ ವಿಚಾರ ಗದಿಗೆದರಿ, ಕುಟುಂಬ ಕೋಲಾಹಲಕ್ಕೂ ಕಾರಣವಾಗಿ ತಣ್ಣಗಾಗುವ ಮಟ್ಟಕ್ಕೆ ಬಂದಿದೆ. ಆದರೂ ಈ ಟಿಕೆಟ್ ಪೈಟ್, ಮುಗಿಯದ ವಿಚಾರವಾಗಿ ಉಳಿದಿರುವಾಗಲೇ ಜಿಲ್ಲೆಯಲ್ಲಿ ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಎ ಮಂಜುಗೆ ಜೆಡಿಎಸ್ ರೆಡ್ ಕಾರ್ಪೆಟ್ ಹಾಕಿದೆ.
ಹೌದು, ಹಾಸನ ಜಿಲ್ಲೆಯ ಮತ್ತೊಂದು ಕ್ಷೇತ್ರವಾದ ಅರಕಲಗೂಡಿನಲ್ಲಿ ಹಾಲಿ ಜೆಡಿಎಸ್ ಶಾಸಕ ಎ. ಟಿ. ರಾಮಸ್ವಾಮಿ ಇದ್ದರೂ ಸಹ ಕುಮಾರಸ್ವಾಮಿ ಅವರು ತಮ್ಮ ರಾಜಕೀಯ ವಿರೋಧಿ ಎ.ಮಂಜುಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಪಕ್ಷದ ಹಾಲಿ ಶಾಸಕರಿದ್ದರೂ ಸಹ ತಮ್ಮ ಕುಟುಂಬದ ರಾಜಕೀಯ ವಿರೋಧಿ ಎಂದೇ ಗುರ್ತಿಸಿಕೊಂಡ ಮಂಜುಗೆ ,ಕುಮಾರಸ್ವಾಮಿ ಟಿಕೆಟ್ ಆಫರ್ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಜೆಡಿಎಸ್ ನಲ್ಲಿ ಏನು ಬೇಕಿದರೂ ಮಿರಾಕಲ್ ನಡಿಬಹುದು ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.
ಮಂಜು ಅವರು ಮರದಿಂದ ಮರಕ್ಕೆ ಹಾರುವ ಮಂಗನಂತೆ ಚುನಾವಣೆ ಬಂದಾಗಲೆಲ್ಲ ಪಕ್ಷ ಬದಲಿಸುತ್ತಿದ್ದಾರೆ. ಸದ್ಯ ಅವರು ಬಿಜೆಪಿಯಲೂಲಿದ್ದರೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡುವ ಮೊದಲೇ ಹೆಚ್ಡಿಕೆ ಜೆಡಿಎಸ್ನಿಂದ ಟಿಕೆಟ್ ಆಫರ್ ನೀಡಿದ್ದು, ಹಾಸನ ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ಅರಕಲಗೂಡು ಕ್ಷೇತ್ರದಿಂದ ಮಂಜು ಅವರು ಜೆಡಿಎಸ್ ಅಭ್ಯರ್ಥಿ ಆಗಲಿದ್ದಾರೆ. ಈಗಾಗಲೇ ಮಂಜು ಜೊತೆ ಮಾತುಕತೆ ನಡೆದಿದ್ದು, ಬಹುತೇಕ ಅಂತಿಮ ಹಂತದಲ್ಲಿದೆ’ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಎ.ಮಂಜು ಪ್ರತಿಕ್ರಿಯಿಸಿದ್ದು, ‘ನಾನು ಅವರು ಮಾತನಾಡಿದ್ದು ನಿಜ. ದೇವೇಗೌಡರು, ರೇವಣ್ಣ ಮಾತನಾಡಿದ್ದು ಸತ್ಯ, ನಾನು ಸೀರಿಯಸ್ ಆಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಕಾಂಗ್ರೆಸ್‌ನವರು ನಮ್ಮನ್ನು ಗುರುತಿಸುವಲ್ಲಿ ವಿಫಲರಾದರು. ಅವರು ಅವಕಾಶ ಕೊಡಲಿಲ್ಲ, ಜೆಡಿಎಸ್ನವರು ಅವಕಾಶ ಕೊಟ್ಟಿದ್ದಾರೆ. ನಾನು ಸ್ವತಂತ್ರವಾಗಿ ಸ್ಪರ್ಧಿಸಬೇಕು ಎಂದು ತೀರ್ಮಾನ ಮಾಡಿದ್ದೆ. ಜನ ಯಾವುದಾದರೂ ಒಂದು ಪಕ್ಷದಿಂದ ಸ್ಪರ್ಧಿಸಬೇಕು ಎಂದಿದ್ದರು. ಅದರಂತೆ ನಾನು ಜೆಡಿಎಸ್ನಿಂದ ಸ್ಪರ್ಧೆ ಮಾಡುತ್ತೇನೆ. ಈ ಹಿಂದೆ HDK ಜತೆ ಚರ್ಚಿಸಿದ್ದೆ, ಆದ್ರೆ ಟಿಕೆಟ್ ಬಗ್ಗೆ ಮಾತಾಡಿರಲಿಲ್ಲ. ಆಗ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ಗೆ ಆಹ್ವಾನ ಮಾಡಿದ್ದು ನಿಜ. ಆಗ ನಾನು ನೋಡೋಣ ಜನರ ಜೊತೆ ಮಾತಾಡಿ ಹೇಳ್ತೀನಿ ಎಂದಿದ್ದೆ. ಆದ್ರೆ ಇದೀಗ ಎಲ್ಲವೂ ಕ್ಲಿಯರ್ ಆಗಿದೆ’ ಎಂದು ಹೇಳಿದ್ದಾರೆ.
ಮಂಜು ಅವರು ನಡೆದು ಬಂದು ರಾಜಕೀಯ ಹಾದಿಯನ್ನು ನೋಡುವುದಾದರೆ, 1999 ರಲ್ಲಿ ಬಿಜೆಪಿಯಿಂದ ಅರಕಲಗೂಡು ವಿಧಾನಸೌಧದಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 2008ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. 2008 ಮತ್ತು 2013 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಅರಕಲಗೂಡು ಶಾಸಕರಾಗಿ ಪುನರಾಯ್ಕೆಯಾಗಿದ್ದರು. ಅಲ್ಲದೇ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಿಂದ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡು 2019 ರಲ್ಲಿ ಹಾಸನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಕಳೆದ ಕೆಲ ತಿಂಗಳಿಂದ ಬಿಜೆಪಿಯಿಂದ ದೂರ ಉಳಿದಿದ್ದ ಎ ಮಂಜು, ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಸಿಗಲಿಲ್ಲ ಎಂದು ಕಾಂಗ್ರೆಸ್ ಸೇರ್ಪಡೆಗೆ ತಯಾರಿ ನಡೆಸಿದ್ದರು. ಆದ್ರೆ, ಕಾಂಗ್ರೆಸ್ ಟಿಕೆಟ್ ನೀಡಲು ನಿರಾಕರಣೆ ಹಿನ್ನೆಲೆಯಲ್ಲಿ ಜೆಡಿಎಸ್ನಿಂದ ಆಫರ್ ಸದುಪಯೋಗ ಪಡಿಸಿಕೊಳ್ಳಬೇಕು ತೀರ್ಮಾನಿಸಿದ್ದಾರೆ. ಒಟ್ನಲ್ಲಿ ಹಾಸನ ಬಿಜೆಪಿ ಕಾಂಗ್ರೆಸ್ ಪಕ್ಷದಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದ ಎ ಮಂಜು ಜೆಡಿಎಸ್ನಿಂದ ಸ್ಪರ್ಧಿಸುವುದು ಖಚಿತವಾಗಿದೆ.