‘ಹೇರ್ ಕಟ್ ‘ ಮಾಡಬೇಡಿ : ಭಾರತದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿಯ ಉದ್ದನೆಯ ಕೂದಲನ್ನು ಹೊಗಳಿ ‘ ಕ್ಷೌರ ಬೇಡ ‘ ಎಂದಿದ್ದ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ !
ಇಂದು ಭಾನುವಾರ ನಿಧನರಾದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಕ್ರಿಕೆಟ್ ಪ್ರೇಮಿಯಾಗಿದ್ದರು. ಅವರು ಯಾವಾಗಲೂ ಭಾರತ-ಪಾಕಿಸ್ತಾನ ಕ್ರಿಕೆಟ್ ಪೈಪೋಟಿಯನ್ನು ಆನಂದಿಸುತ್ತಿದ್ದರು. ಒಮ್ಮೆ ಅವರು ತಮ್ಮ ಉದ್ದನೆಯ ತಲೆ ಕೂದಲನ್ನು ಟ್ರಿಮ್ ಮಾಡದಂತೆ ಭಾರತೀಯ ಕ್ರಿಕೆಟ್ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಸಲಹೆ ನೀಡಿದ್ದರು ಎನ್ನುವ ಸುದ್ದಿ ಈಗ ಕ್ರಿಕೆಟ್ ವಲಯಗಳಿಂದ ಕೇಳಿಬರುತ್ತಿದೆ.
ಅವತ್ತು 2006. ಅಂದು ಕೊನೆಯ ಬಾರಿಗೆ ಭಾರತವು ದ್ವಿಪಕ್ಷೀಯ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಅಂದು ಲಾಹೋರ್ನಲ್ಲಿ ನಡೆದ ಏಕದಿನ ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಪಾಕಿಸ್ತಾನದ ಆಗಿನ ಅಧ್ಯಕ್ಷರಾಗಿದ್ದ ಮುಷರಫ್ ಅವರು ಧೋನಿ ಅವರ ಆಗಿನ ಕೇಶವಿನ್ಯಾಸವನ್ನು ಹೊಗಳಿದ್ದರು. ಧೋನಿಯ ಇಳಿಬಿದ್ದ ಕೂದಲನ್ನು ಪರ್ವೇಜ್ ಮೆಚ್ಚಿಕೊಂಡಿದ್ದರು. ಅಂದು ಪಂದ್ಯವನ್ನು ಗೆದ್ದಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಅಭಿನಂದಿಸಿದ ಮುಷರಫ್ ಗೆ ‘ಅತ್ಯುತ್ತಮವಾಗಿ’ ಆಡಿದ್ದೀರಾ ಎಂದು ಅಭಿನಂದಿಸಿದ್ದರು. ಆ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಕೇವಲ 46 ಎಸೆತಗಳಲ್ಲಿ ಅಜೇಯ 72 ರನ್ ಗಳಿಸಿದ್ದರು. ಅವರಿಗೆ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಅವತ್ತು ‘ಈ ಗೆಲುವಿನ ಶಿಲ್ಪಿಯಾಗಿರುವ ಧೋನಿಯನ್ನು ನಾನು ಅಭಿನಂದಿಸುತ್ತೇನೆ. ಧೋನಿಗೆ ಕ್ಷೌರ ಮಾಡಿಸಿಕೊಳ್ಳಿ ಎಂದು ಕೇಳುವವರನ್ನು ನಾನು ನೋಡಿದ್ದೇನೆ. ಆದರೆ, ನೀವು ನನ್ನ ಅಭಿಪ್ರಾಯವನ್ನು ಕೇಳಲು ಬಯಸಿದರೆ, ಈ ಹೇರ್ಕಟ್ನಲ್ಲಿ ನೀವು ತುಂಬಾ ಚೆನ್ನಾಗಿ ಕಾಣುತ್ತೀರಿ. ಹೀಗಾಗಿ ಹೀಗೆಯೇ ಉದ್ದ ಕೂದಲೇ ಬಿಡಿ, ಕ್ಷೌರ ಮಾಡಬೇಡಿ’ ಎಂದು ಹೇಳಿದ್ದರು.
ಸಾಂಪ್ರದಾಯಿಕ ವೈರಿಗಳಾದ ಭಾರತ-ಪಾಕಿಸ್ತಾನ ನಡುವಿನ ರಾಜಕೀಯ -ಧಾರ್ಮಿಕ ಮೇಲಾಟವು ಎರಡೂ ದೇಶಗಳಲ್ಲಿನ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ. ಈಗ ಮುಷರಫ್ ಸತ್ತು ಹೋದ ಸಂದರ್ಭದಲ್ಲಿ ಮುಷರಫ್ ಅವರ ಹೇಳಿಕೆಯನ್ನು ಕ್ರಿಕೆಟ್ ಬಳಗ ನೆನಪಿಸಿಕೊಳ್ಳುತ್ತಿದೆ. ಮುಷರಫ್ (79) ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ದುಬೈನ ಅಮೆರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ತೀರಿಕೊಂಡಿದ್ದಾರೆ.