ನದಿ ತೀರದಲ್ಲಿ ರಾತ್ರಿ ಯುವಕ- ಯುವತಿಯರ ತಂಡ ಮಾದಕ ದ್ರವ್ಯ ನೀಡಿ ಅನೈತಿಕ ಚಟುವಟಿಕೆ ?
ಉಪ್ಪಿನಂಗಡಿ: ಯುವತಿಯರಿಬ್ಬರನ್ನು ರಾತ್ರಿ ನದಿ ತೀರಕ್ಕೆ ಯುವಕರ ತಂಡವೊಂದು ಕರೆದುಕೊಂಡು ಬಂದಿದ್ದು, ಈ ಸಂದರ್ಭ ಹಿಂದೂ ಪರ ಸಂಘಟನೆಯ ಯುವಕರು ಅವರನ್ನು ಹಿಂಬಾಲಿಸಿದ್ದನ್ನು ಕಂಡು ಯುವತಿಯರನ್ನು ಅಲ್ಲಿಯೇ ಬಿಟ್ಟು ಯುವಕರು ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಪೆರ್ನೆಯ ಬಿಳಿಯೂರು ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಓರ್ವ ಮುಸ್ಲಿಂ ಹಾಗೂ ಓರ್ವ ಹಿಂದೂ ಯುವತಿ ಮಂಗಳೂರು ಕಡೆಯಿಂದ ದ್ವಿಚಕ್ರ ವಾಹನವೊಂದರಲ್ಲಿ ಬಂದಿದ್ದರು. ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿರುವ ಟಿಕ್ಕಾ ಅಂಗಡಿಯೊಂದರ ಬಳಿಗೆ ಬಂದ ಅವರು ಅಲ್ಲಿ ಜೊತೆ ಸೇರಿದ 3-4 ಮಂದಿ ಮುಸ್ಲಿಮ್ ಹುಡುಗರೊಂದಿಗೆ ಗುಂಪುಗೂಡಿ ಮಾತನಾಡಿಕೊಂಡಿದ್ದರು. ಆಗ ಹಿಂದೂಪರ ಸಂಘಟನೆಯ ಯುವಕರನ್ನು ಅಲ್ಲಿ ನೋಡಿದ್ದ ಅವರು ಅಲ್ಲಿಂದ ಕಾಲ್ಕಿತ್ತಿದ್ದರು.
ರಾತ್ರಿ 11:30ರ ಸುಮಾರಿಗೆ ಹುಡುಗಿಯರು ಹಾಗೂ ಹುಡುಗರಿದ್ದ ಈ ತಂಡ ಬಿಳಿಯೂರು ಬಳಿ ನೇತ್ರಾವತಿ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಬಳಿ ಹೋಗಿದ್ದಾರೆ. ಈ ಬಗ್ಗೆ ವಿಷಯ ತಿಳಿದ ಹಿಂದೂಪರ ಸಂಘಟನೆಯವರು ಅವರನ್ನು ಹಿಂಬಾಲಿಸಿದ್ದು, ಆಗ ಯುವಕರು ಸೇತುವೆಯ ಮೂಲಕ ನದಿಯ ಮತ್ತೊಂದು ದಡವಾದ ಸರಳೀಕಟ್ಟೆ ಕಡೆ ಓಡಿ ಪರಾರಿಯಾಗಿದ್ದಾರೆ. ಅಲ್ಲಿದ್ದ ಯುವತಿಯರನ್ನು ಬಳಿಕ ಪೊಲೀಸರಿಗೊಪ್ಪಿಸಲಾಯಿತು.
ಈ ಸಂದರ್ಭ ಯುವಕರು ಯುವತಿಯರಿಗೆ ಮಾದಕ ದ್ರವ್ಯ ನೀಡಿ ಅನೈತಿಕ ಚಟುವಟಿಕೆಗೆ ಕರೆದುಕೊಂಡು ಬಂದಿದ್ದಾರೆ. ಇದೊಂದು ಲವ್ ಜಿಹಾದ್ ಕೃತ್ಯ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ.
ಹುಡುಗಿಯರನ್ನು ಹಾಗೂ ಸ್ಥಳದಲ್ಲಿದ್ದ ಮೂರು ಆ್ಯಕ್ಟಿವಾ ಹಾಗೂ ಒಂದು ಬೈಕ್ ಅನ್ನು ವಶಕ್ಕೆ ತೆಗೆದುಕೊಂಡು, ಮಾದಕ ದ್ರವ್ಯ ಸೇವನೆಯ ಆರೋಪದ ಹಿನ್ನೆಲೆಯಲ್ಲಿ ಹುಡುಗಿಯರನ್ನು ದೇರಳಕಟ್ಟೆಯ ಮೆಡಿಕಲ್ ಸೆ೦ಟರ್‌ಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದ್ದು, ಅಲ್ಲಿ ನೆಗೆಟಿವ್ ರಿಪೋರ್ಟ್ ಬಂದ ಕಾರಣ ಯುವತಿಯರನ್ನು ಬಿಟ್ಟು ಕಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಾದಕ ದ್ರವ್ಯ ಸೇವನೆ, ಅನೈತಿಕ ಚಟುವಟಿಕೆ ಹಾಗೂ ಲವ್ ಜಿಹಾದ್ ಷಡ್ಯಂತ್ರ ಆರೋಪಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಹುಡುಗಿಯರಲ್ಲಿ ಓರ್ವರು ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಸುಮಾರು 30 ವರ್ಷದಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಮತ್ತೋರ್ವಾಕೆ ಮಂಗಳೂರಿನ ನಿವಾಸಿ ಎನ್ನಲಾಗಿದೆ.