Viral Video: ವಿವಾಹಿತ ಮಹಿಳೆಯನ್ನು ‘ಕಾಂತಾರ’ ಮಾದರಿಯಲ್ಲಿ ಮದುವೆಯಾಗುವುದಾಗಿ ಹೇಳಿದ ಪಾತ್ರಿ | ವಿಡಿಯೋ ವೈರಲ್, ನೆಟ್ಟಿಗರಿಂದ ತೀವ್ರ ತರಾಟೆ
ಕನ್ನಡದ ಹಿಟ್ ಸಿನಿಮಾದಲ್ಲಿ ಕಾಂತಾರ ತನ್ನ ಪಾರುಪತ್ಯ ಕಾಯ್ದು ಕೊಂಡಿದೆ. ತುಳುನಾಡಿನ ಆಚರಣೆ, ಸಂಸ್ಕೃತಿಯನ್ನು ಬಿಂಬಿಸುವ ಈ ಸಿನಿಮಾದಲ್ಲಿ ಪಂಜುರ್ಲಿ ದೈವದ ಪಾತ್ರವನ್ನು ರಿಷಬ್ ಶೆಟ್ಟಿ ಅವರು ತುಂಬಾ ಶ್ರದ್ಧೆಯಿಂದ ಜೊತೆಗೆ ನೋಡುಗರ ಮೈಮನ ರೋಮಾಂಚನ ಗೊಳಿಸುವಂತೆ ನಟಿಸಿದ್ದಾರೆ. ಆದರೆ, ಈ ಸಿನಿಮಾ ಬಿಡುಗಡೆಯಾದ ಬಳಿಕ ಏಷ್ಟೋ ಮಂದಿ ದೈವದ ಪ್ರತಿರೂಪ ಎಂಬಂತೆ ರಿಷಬ್ ಶೆಟ್ಟಿ ಅವರ ಕಾಲು ಹಿಡಿಯಲು ಕೂಡ ಮುಂದಾಗಿದ್ದು ಅದನ್ನು ಅಷ್ಟೆ ನಯವಾಗಿ ಶೆಟ್ರು ತಿರಸ್ಕರಿಸಿದ್ದು ಕೂಡ ಇದೆ.
ಕಾಂತಾರ ಸಿನಿಮಾದ ಹಾಡು ಎಷ್ಟು ಸಂಚಲನ ಮೂಡಿಸಿತ್ತೋ ಅಷ್ಟೆ ಮಟ್ಟಿಗೆ ದೈವದ ಕೂಗು ಕೂಡ ದೇಶದ್ಯಂತ ತನ್ನದೇ (Kantara Viral) ಟ್ರೆಂಡ್ ಕ್ರಿಯೇಟ್ ಮಾಡಿದೆ. ಈ ಒಂದು ಕೂಗು ಸಿನಿಮಾ ರಿಲೀಸ್ ಆದ ದಿನದಿಂದಲೂ ಹೆಚ್ಚು ವೈಬ್ ಕ್ರಿಯೆಟ್ ಮಾಡಿದ್ದು ಸುಳ್ಳಲ್ಲ. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದೈವವನ್ನೂ ನಂಬುವ ಜನತೆಯ ನಂಬಿಕೆಯನ್ನು ಪ್ರಶ್ನಿಸುವ ರೀತಿಯಲ್ಲಿ ಕಂಡು ಬಂದಿದೆ.
ಕಾಂತಾರ ಸಿನಿಮಾದಲ್ಲಿ ತುಳುನಾಡಿನ ಆಚರಣೆ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಅದೇ ರೀತಿ, ತುಳುನಾಡಿನ ಜನ ಭಕ್ತಿಯಿಂದ ದೈವವನ್ನೂ ಆರಾಧಿಸುತ್ತಾರೆ. ಅಷ್ಟೇ ಏಕೆ ದೇವರು ನಮ್ಮ ಕೈ ಬಿಟ್ಟರೂ ಕೂಡ ನಂಬಿದ ದೈವ ನಮ್ಮನ್ನು ಕಾಪಾಡುತ್ತದೆ ಎನ್ನುವ ಮಟ್ಟಿಗೆ ಜನರಲ್ಲಿ ದೈವದ ಮೇಲೆ ನಂಬಿಕೆ ಇದೆ.
ಕನ್ನಡದ ಕಾಂತಾರ(Kantara) ಸಿನಿಮಾ ಬಿಡುಗಡೆಯಾದ ಬಳಿಕ ಕರಾವಳಿಯ ದೈವಾರಾಧನೆಗೆ (Daivaradhane) ವಿಶೇಷ ಸ್ಥಾನಮಾನ ದೊರೆತಿದೆ. ಜನರಲ್ಲಿ ದೈವದ ಕುರಿತು ಭಕ್ತಿ, ನಂಬಿಕೆ ಹೆಚ್ಚಾಗಿದ್ದು, ದೈವಾರಾಧನೆ ನೋಡಲು ದೇಶ, ರಾಜ್ಯ, ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿರೋದು ವಿಶೇಷ. ಆದರೆ, ಈ ನಡುವೆ ಜನರ ನಂಬಿಕೆಯ ಜೊತೆಗೆ ಚೆಲ್ಲಾಟ ಆಡುತ್ತಿರುವ ಆರೋಪ ಕೂಡ ಕೇಳಿ ಬರುತ್ತಿವೆ. ದೈವದ ಹೆಸರಿನಲ್ಲಿ ಜನರಿಗೆ ಮರುಳು ಮಾಡಿ ದುಡ್ಡು ಹೊಡೆಯುವ ಪ್ರಯತ್ನ ಇತ್ತೀಚಿಗೆ ಕೆಲವೆಡೆ ನಡೆದಿದ್ದು ಗೊತ್ತಿರುವ ವಿಚಾರವೇ. ಇದೀಗ, ಮತ್ತೊಮ್ಮೆ ದೈವ ದರ್ಶನಗಳನ್ನು ದುರ್ಬಳಕೆ ಮಾಡಿಕೊಂಡು ಜನರಿಗೆ ಮೋಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬಾರಕೊಡ್ಲೆ ಗ್ರಾಮದಲ್ಲಿ ದೈವ ದರ್ಶನದ ಸಂದರ್ಭದಲ್ಲಿ ಪಾತ್ರಿಯನೊಬ್ಬ ವಿವಾಹಿತ ಮಹಿಳೆಗೆ ಮದುವೆಯಾಗುವುದಾಗಿ ನುಡಿದಿದ್ದು , ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದು ಮಾತ್ರವಲ್ಲದೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ದೈವ ದರ್ಶನಕ್ಕೆಂದು ಬೆಳಗಾವಿಯಿಂದ ಬಂದಿದ್ದ ಮದುವೆಯಾದ ಮಹಿಳೆಯೊಬ್ಬರಿಗೆ ದುರ್ಗಾದೇವಿ ಅವಾಹನೆಯಾಗುತ್ತದೆ ಎಂದು ನಂಬಿಸಿ ಪಾತ್ರಿಯೊಬ್ಬರು ಮದುವೆಯಾಗುವುದಾಗಿ ವಚನ ನೀಡಿದ ಘಟನೆ ವರದಿಯಾಗಿದೆ. ದೈವಿಕ ಕಾರ್ಯದಲ್ಲಿ ತೊಡಗಿಸಿಕೊಂಡ ವ್ಯಕ್ತಿ ಪಂಜೆಯನ್ನುಟ್ಟು ಮೈ ಮೇಲೆ ಅರಿಶಿಣ ಚೆಲ್ಲಿಕೊಳ್ಳುತ್ತಾ ಕಾಂತಾರ ಸಿನಿಮಾದಲ್ಲಿ ಬರುವಂತೆ ಓ… ಎಂದು ಕೂಗುತ್ತ ಈ ಬಾಲಕಿಯನ್ನು ಈ ಬಾಲಕ ವರಿಸುತ್ತಾನೆ. ಇಂದಿನಿಂದ ಈ ಬಾಲಕಿ ತನ್ನ ಅರ್ಧಾಂಗಿಯಾಗಿ, ಅರ್ಧನಾರೀಶ್ವರಿಯಾಗಿ ನನ್ನ ಹೃದಯದಲ್ಲಿ ವಿರಾಜಮಾನಳಾಗುತ್ತಾಳೆ. ಇಂದು ಇಲ್ಲವೇ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುವುದು ನಿಶ್ಚಿತ. ಇದು ಸತ್ಯ ಸತ್ಯ ಎಂದು ಪಾತ್ರಿ ನುಡಿದಿದ್ದು, ಈ ರೀತಿ ಪಾತ್ರಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಡಿಕೆ ಹಿಂಗಾರದಿಂದ ಬಡಿದುಕೊಳ್ಳುತ್ತ ಡಮರು, ಡಕ್ಕೆ, ತಾಳದ ಲಯಕ್ಕೆ ನರ್ತನ ಮಾಡುತ್ತ ಪಾತ್ರಿ ವರ್ತಿಸಿದ ವೈಖರಿ ಕಂಡು ನೆಟ್ಟಿಗರು ಕೋಪಗೊಂಡಿದ್ದು, ವಿವಾಹಿತ ಮಹಿಳೆಯನ್ನ ಮದುವೆಯಾಗುವ ದೆಸೆಯಲ್ಲಿ ದೈವದ ಹೆಸರನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪಾತ್ರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಇನ್ನು ನರ್ತಕ ಪಾತ್ರಿಗೆ ಹೆಂಡತಿ ಬಿಟ್ಟು ಹೋಗಿದ್ದು, ಇನ್ನೊಂದೆಡೆ ವಿವಾಹಿತ ಮಹಿಳೆಗೂ ಗಂಡ ಬಿಟ್ಟಿರುವ ಮಾಹಿತಿ ಇದೆ ಎನ್ನಲಾಗಿದೆ. ಹೀಗಾಗಿ, ದೇವರ ಹೆಸರಿನಲ್ಲಿ ಪಾತ್ರಿ ಈ ರೀತಿ ನಟಿಸಿರುವ ಸಾಧ್ಯತೆ ಹೆಚ್ಚಿದೆ. ಪಾತ್ರಿಯ ಮೇಲೆ ದುರ್ಗಾದೇವಿ ಆಹ್ವಾನವಾಗುತ್ತದೆ ಎಂದು ನಂಬಿ ಭಕ್ತರು ಇವರನ್ನು ಭೇಟಿಯಾಗಲು ಆಗಮಿಸುತ್ತಾರೆ ಎನ್ನಲಾಗಿದೆ. ಹತ್ತಾರು ವರ್ಷಗಳಿಂದ ಈ ಸ್ಥಳದಲ್ಲಿ ಈ ಆಚರಣೆ ನಡೆದುಕೊಂಡು ಬರುತ್ತಿದ್ದು, ಸದ್ಯ ಪಾತ್ರಿಯ ಹೊಸ ವರಸೆ ಕಂಡು ಜನ ದಂಗಾಗಿದ್ದಾರೆ.