ದಾಖಲೆಯ ಮಾರಾಟ ಪಟ್ಟ ವಹಿಸಿಕೊಂಡ ಹೀರೋ, ಹೋಂಡಾ | ಟಿವಿಎಸ್ ಕೂಡಾ ಹಿಂದೆನೇ ಬಂತು!
ಸದ್ಯ ಮಾರುಕಟ್ಟೆಗೆ ಹೊಚ್ಚ ಹೊಸ ವಾಹನಗಳು ಲಗ್ಗೆ ಇಡುತ್ತಿವೆ. ವಾಹನ ತಯಾರಕ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಮಾಡೆಲ್’ಗಳನ್ನು ಪರಿಚಯಿಸುತ್ತಿದ್ದಾರೆ. ಅದರಲ್ಲಿ ಕೆಲವು ವಾಹನಗಳು ತಮ್ಮ ವಿಭಿನ್ನ ವಿನ್ಯಾಸ, ಫೀಚರ್, ಬೆಲೆಯಿಂದ ಅತಿ ಬೇಗನೆ ಮಾರಾಟವಾಗಿ, ಉತ್ತಮ ಪ್ರತಿಕ್ರಿಯೆ ಪಡೆದಿರುತ್ತದೆ. ಇದೀಗ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ತಿಂಗಳು ಅಂದ್ರೆ ಜನವರಿಯಲ್ಲಿ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾಗಿರುವ ಹೀರೋ ಮೋಟೊಕಾರ್ಪ್, ಟಿವಿಎಸ್, ಬಜಾಜ್ ಆಟೋ ಸೇರಿದಂತೆ ವಿವಿಧ ಕಂಪನಿಯ ಮಾರಾಟದ ವಿವರ ಇಲ್ಲಿದೆ.
ಹೀರೋ ಮೋಟೊಕಾರ್ಪ್:- ದೇಶದ ಅತಿದೊಡ್ಡ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹೀರೋ ಮೋಟೊಕಾರ್ಪ್, ಜನವರಿ 2023 ರಲ್ಲಿ ಮಾರಾಟದ ವೆಹಿಕಲ್ ಮಾಹಿತಿಯನ್ನು ತಿಳಿಸಿದ್ದು, ಬರೋಬ್ಬರಿ 3,49,437 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ, ವಾರ್ಷಿಕ ಆಧಾರದಲ್ಲಿ ಇಳಿಮುಖ ಕಂಡಿದೆ. 2022ರ ಜನವರಿಯಲ್ಲಿ 3,80,476 ಯುನಿಟ್ ಮಾರಾಟ ಮಾಡಲು ಯಶಸ್ವಿಯಾಗಿತ್ತು. ಈ ವರ್ಷ ಇಳಿಕೆಯಾಗಿದೆ. ಕೆಲವೇ ದಿನಗಳ ಹಿಂದೆ, ಕಂಪನಿಯು ಹೀರೋ Xoom 110cc ಸ್ಕೂಟರ್ ಅನ್ನು ರೂ.68,599 ಬೆಲೆಗೆ ಬಿಡುಗಡೆ ಮಾಡಿತ್ತು.
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) :- ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಜನವರಿ 2023 ರಲ್ಲಿ ಮಾರಾಟದ ವೆಹಿಕಲ್ ಮಾಹಿತಿಯನ್ನು ಪ್ರಕಟಿಸಿದ್ದು, 2,78,143 ಯುನಿಟ್ ದ್ವಿಚಕ್ರ ವಾಹನಗಳನ್ನು ಸೇಲ್ ಮಾಡಿದೆ. ಆದರೆ, ವಾರ್ಷಿಕ ಆಧಾರದಲ್ಲಿ ಇಳಿಮುಖ ಕಂಡಿದೆ. 2022ರ ಜನವರಿಗೆ ಹೋಲಿಕೆ ಮಾಡಿದರೆ, ಶೇಕಡ 11.8% ಇಳಿಕೆಯಾಗಿದೆ. ತಿಂಗಳ ಆಧಾರದ ಮೇಲೆ ಡಿಸೆಂಬರ್ 2022 ಕ್ಕೆ ಹೋಲಿಕೆ ಮಾಡಿದರೆ ಜನವರಿ 2023 ರಲ್ಲಿ ಹೋಂಡಾದ ಮಾರಾಟದ ಕಾರ್ಯಕ್ಷಮತೆ ಉತ್ತಮವಾಗಿದೆ. ಇತ್ತೀಚೆಗೆ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ಆವೃತ್ತಿಯನ್ನು ರೂ.80,537 ಎಕ್ಸ್ ಶೋರೂಂ ಬೆಲೆಯಲ್ಲಿ ಲಾಂಚ್ ಮಾಡಿತ್ತು.
ಟಿವಿಎಸ್ ಮೋಟಾರ್ಸ್ :- ಹೀರೋ ಮೋಟೊಕಾರ್ಪ್ ಹಾಗೂ ಹೋಂಡಾ ಕಂಪನಿಗಳು ವಾರ್ಷಿಕ ಅಂಕಿ ಅಂಶಗಳ ಪ್ರಕಾರ, ಮಾರಾಟದಲ್ಲಿ ನಷ್ಟ ಅನುಭವಿಸುತ್ತಿವೆ. ಆದರೆ, ಟಿವಿಎಸ್ ಮಾತ್ರ ಯಶಸ್ಸಿನತ್ತ ರಾಕೆಟ್ ಸ್ಪೀಡ್’ನಲ್ಲಿ ಮುನ್ನುಗ್ಗುತ್ತಿದೆ. ಕಳೆದ ಜನವರಿಯಲ್ಲಿ 2,64,710 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ, ಉತ್ತಮ ಪ್ರಗತಿಯನ್ನು ದಾಖಲಿಸಿಕೊಂಡಿದೆ. ವಾರ್ಷಿಕವಾರು ಗಮನಿಸಿದರೆ ಶೇ. 57.8% ಬೆಳವಣಿಗೆಯನ್ನು ಸಾಧಿಸಿದೆ. 2022ರ ಡಿಸೆಂಬರ್ ಗೆ ಹೋಲಿಸಿದರೆ, ತಿಂಗಳ ಸೇಲ್ ನಲ್ಲೂ ಒಳ್ಳೆಯ ಸಾಧನೆಯನ್ನೇ ಮಾಡಿದ್ದು, ಶೇಕಡ 16.3% ಪ್ರಗತಿಯನ್ನು ದಾಖಲಿಸಿದೆ. ತನ್ನ ಉದ್ಯಮವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಸಿಂಗಾಪುರ ಮೂಲದ ION ಮೊಬಿಲಿಟಿಯಲ್ಲಿ ಬಂಡವಾಳವನ್ನು ಹಾಕಲು ಮುಂದಾಗಿದೆ.
ಬಜಾಜ್ ಆಟೋ :- ಜನಪ್ರಿಯ ದೇಶೀಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಬಜಾಜ್ ಆಟೋ ಕೂಡಾ ಉತ್ತಮವಾದ ಯಶಸ್ಸಿನತ್ತ ಸಾಗಿದೆ. ಕಳೆದ ಜನವರಿ ತಿಂಗಳಲ್ಲಿ 1,40,428 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದ್ದು, 2022ರ ಜನವರಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ. 3.6% ಬೆಳವಣಿಗೆ ಸಾಧಿಸಿದ್ದು, ತಿಂಗಳ ಮಾರಾಟದಲ್ಲೂ ಉತ್ತಮ ಪ್ರಗತಿ ಕಂಡಿದೆ. 2022ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ, ಶೇಕಡ 11.9% ಬೆಳವಣಿಗೆ ಸಾಧಿಸಿದೆ. ಜೊತೆಗೆ ಹೊಸ ಪಲ್ಸರ್ P150 ಇತ್ತೀಚಿಗೆ ಲಾಂಚ್ ಮಾಡಿತ್ತು.
ರಾಯಲ್ ಎನ್‌ಫೀಲ್ಡ್ 67,702 ಯುನಿಟ್:- ಯುವಕರ ಆಲ್ ಟೈಮ್ ಫೆವರೇಟ್ ಬೈಕ್ ಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾದ ರಾಯಲ್ ಎನ್‌ಫೀಲ್ಡ್, ಜನವರಿಯಲ್ಲಿ 67,702 ಯುನಿಟ್ ಗಳನ್ನು ಮಾರಾಟ ಮಾಡಿದೆ. 2022ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ, ಕಳೆದ ತಿಂಗಳು 13.2% ಪ್ರಗತಿಯನ್ನು ಸಾಧಿಸಿದೆ. ಅದೇರೀತಿ ವರ್ಷದಿಂದ ವರ್ಷದ ಮಾರಾಟ ಪ್ರಮಾಣವು ಉತ್ತಮವಾಗಿ ಬೆಳವಣಿಗೆ ಹೊಂದುತ್ತಿದೆ. 2022ರ ಜನವರಿಗೆ ಹೋಲಿಕೆ ಮಾಡಿದರೆ, ಶೇಕಡ 36.1% ಬೆಳವಣಿಗೆಯನ್ನು ಸಾಧಿಸಿದೆ. ಕಂಪನಿಯು ಇತ್ತೀಚೆಗೆ ಸೂಪರ್ ಮೀಟಿಯರ್ 650 ಕ್ರೂಸರ್ ಮೋಟಾರ್‌ಸೈಕಲ್ ಅನ್ನು ರೂ.3.49 ಲಕ್ಷ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ.
ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ :-
ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿ, ಸುಜುಕಿ ಕಂಪನಿಯು 2022ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ, ಈ ತಿಂಗಳು 66,209 ಯುನಿಟ್ ಮಾರಾಟ ಮಾಡುವುದರೊಂದಿಗೆ ಶೇಕಡ 3.6% ಪ್ರಗತಿಯನ್ನು ಸಾಧಿಸಿದೆ. ಅಲ್ಲದೆ, ವಾರ್ಷಿಕ ಆಧಾರದಲ್ಲಿ ನೋಡುವುದಾದರೆ ಮಾರಾಟದ್ಲಲ್ಲಿ ಒಳ್ಳೆಯ ರೀತಿಯ ಯಶಸ್ವಿಯನ್ನು ಸಾಧಿಸಿದೆ.
ಈ ಮಾರಾಟದ ಅಂಕಿ ಅಂಶಗಳನ್ನು ಗಮನಿಸಿದಾಗ ಹೀರೋ ಮೋಟೊಕಾರ್ಪ್ ಹಾಗೂ ಹೋಂಡಾ ಕಂಪನಿಗಳು ಉತ್ತಮವಾಗಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿವೆ. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಇಳಿಮುಖವಾಗಿದೆ.