ಕ್ಲಾಸ್ ಅರ್ಧಕ್ಕೆ ಬಿಟ್ಟು ಹಾಸ್ಟೆಲ್ ಗೆ ಬಂದ ವಿದ್ಯಾರ್ಥಿನಿ ನೇಣಿಗೆ ಶರಣು ! ಕಾರಣ?
ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಅದರಲ್ಲಿಯೂ ಕೂಡ ಇಂದಿನ ಒತ್ತಡಯುತ ಜೀವನಶೈಲಿ, ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿ ಜೀವ ಬಲಿದಾನ ಕೊಡುವವರಲ್ಲಿ ಯುವಜನತೆಯ ಸಂಖ್ಯೆಯೇ ಹೆಚ್ಚು ಎಂದರೂ ತಪ್ಪಾಗಲಾರದು. ರಾಯಚೂರು ಜಿಲ್ಲೆ ಜಿಲ್ಲೆ ಲಿಂಗಸೂಗೂರು ಪಟ್ಟಣದ ವಿಸಿಬಿ ಕಾಲೇಜು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ನೇಣಿಗೆ ಕೊರಳೊಡ್ಡಿದ ಘಟನೆ ವರದಿಯಾಗಿದೆ.
ರಾಯಚೂರಿನಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಐಶ್ವರ್ಯ (18) ಎನ್ನಲಾಗಿದ್ದು, ಕಾಲೇಜಿಗೆ ತೆರಳಿ ಕ್ಲಾಸ್ ನ ನಡುವೆಯೇ ಹಾಸ್ಟೆಲ್‌ಗೆ ಬಂದು ಫ್ಯಾನ್‌ಗೆ ನೇಣು ಬಿಗಿದು ಸಾವಿಗೆ ಶರಣಾದ ಘಟನೆ ನಡೆದಿದೆ. ಲಿಂಗಸೂಗೂರು ತಾಲೂಕಿನ ಗೋನವಾಟ್ಲ ತಾಂಡಾದ ವಿದ್ಯಾರ್ಥಿನಿ ಐಶ್ವರ್ಯ ವಿಸಿಬಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಷಯವನ್ನು ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಮಗಳು ಆತ್ಮಹತ್ಯೆಗೆ ಶರಣಾದ ಬಳಿಕ ಮೃತ ವಿದ್ಯಾರ್ಥಿನಿಯ ಪೋಷಕರು ಹಾಸ್ಟೆಲ್ ಗೆ ದೌಡಾಯಿಸಿ ತಮ್ಮ ಮಗಳ ಸಾವಿಗೆ ಪ್ರಾಂಶುಪಾಲರೆ ಕಾರಣ ಎಂದು ಆರೋಪಿಸಿದ್ದಾರೆ. ಅಷ್ಟೆ ಅಲ್ಲದೆ , ವಿದ್ಯಾರ್ಥಿನಿ ಮಧ್ಯಾಹ್ನದ ವೇಳೆಗೆ ನೇಣಿಗೆ ಶರಣಾದರು ಕೂಡ ಹಾಸ್ಟೆಲ್ ಗೆ ಮುತ್ತಿಗೆ ಹಾಕಿ ಪೋಷಕರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಪ್ರಾಂಶುಪಾಲರು ಬರುವವರೆಗೆ ಮೃತ ದೇಹವನ್ನು ವಸತಿ ನಿಲಯದಿಂದ ತೆಗೆಯಲು ಬಿಡುವುದಿಲ್ಲ ಎಂದು ಮೃತ ವಿದ್ಯಾರ್ಥಿನಿಯ ಪೋಷಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಮಾಹಿತಿ ತಿಳಿದು ಲಿಂಗಸೂಗೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಕಾಲೇಜು ಆಡಳಿತ ಮಂಡಳಿ ಜೊತೆಗೆ ಚರ್ಚೆ ನಡೆಸಿ ಪರಿಶೀಲನೆ ನಡೆಸಿದ್ದು, ಈ ಪ್ರಕರಣದ ಕುರಿತು ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.