ಮೀಸಲು ಕ್ಷೇತ್ರ ಮೂಡಿಗೆರೆಯಲ್ಲಿ ಹಾಲಿ ಶಾಸಕರಿಗೆ ಕೈ ತಪ್ಪುತ್ತ ಟಿಕೆಟ್! ಕಾಲೇಜೊಂದರ ಗ್ರಂಥಪಾಲಕ, ಆಗ್ತಾರಾ ಬಿಜೆಪಿ ಅಭ್ಯರ್ಥಿ?

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದರೂ ಕೂಡ, ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿಲ್ಲ. ಅಭ್ಯರ್ಥಿಗಳ ಆಯ್ಕೆ ಕ್ರಿಯೆಯನ್ನು ಎಲ್ಲಾ ಪಕ್ಷಗಳು ತೆರೆಯ ಮರೆಯಲ್ಲಿ ನಡೆಸಿ ಕುತೂಹಲವನ್ನು ಕೆರಳಿಸುತ್ತಿವೆ. ಈಗಾಗಲೇ ಹಲವು ಹಾಲಿ ಶಾಸಕರಿಗೆ, ಆಕಾಂಕ್ಷಿಗಳಿಗೆ ಎಲ್ಲಿ ಟಿಕೆಟ್ ನಮ್ಮ ಕೈ ತಪ್ಪಿ ಹೋಗುತ್ತದೆಯೋ ಎಂದು ಭಯ ಶುರುವಾಗಿದೆ. ಅಂತೆಯೇ ಚಿಕ್ಕಮಗಳೂರಿನ ಮೀಸಲು ಕ್ಷೇತ್ರವಾದ ಹಾಗೂ ಸದಾ ಸುದ್ದಿಯಲ್ಲಿರುವ ಮೂಡಿಗೆರೆಯ ಹಾಲಿ ಶಾಸಕರಿಗೂ ಈ ವಿಚಾರವಾಗಿ ಭಯ ಹುಟ್ಟಿದ್ದು, ಎಲ್ಲಿ ಸಂಚಕಾರ ಕಾದಿಯೆಯೋ ಎಂದು ಆತಂಕಪಡುವಂತಾಗಿದೆ. ಯಾಕೆ ಗೊತ್ತಾ? ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕಿಸುವ ಲೆಕ್ಕಾಚಾರವನ್ನು ಬಹುತೇಕ ಫಿಕ್ಸ್ ಮಾಡಿದೆ. ಹಾಗಾದ್ರೆ ಆ ಅಭ್ಯರ್ಥಿ ಯಾರು ಗೊತ್ತಾ ?

ಹೌದು, ಸದಾ ಕಿರಿಕಿರಿ ಮಾಡುತ್ತಿದ್ದಂತಹ ಎಂ ಪಿ ಕುಮಾರಸ್ವಾಮಿ ಅವರನ್ನು ಬದಿಗೆ ಸರಿಸಲು ಮುಂದಾಗಿರುವ ಬಿಜೆಪಿಯು ಮೂಡಿಗೆರೆ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಚಿಕ್ಕಮಗಳೂರು ನಗರದ ಐಡಿಎಸ್‌ಜಿ ಕಾಲೇಜಿನ ಗ್ರಂಥಪಾಲಕರನ್ನು ಕಣಕ್ಕಿಳಿಸಲು ಸಿದ್ದತೆ ನಡೆಸಿದೆಯಂತೆ. ಆರ್‌ಎಸ್‌ಎಸ್‌ ಕಟ್ಟಾಳು ಆಗಿರುವ ನರೇಂದ್ರ ಅವರೇ ಗ್ರಂಥಪಾಲಕರು. ಅಲ್ಲದೆ ಇವರು ಶೀಘ್ರವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಮುಂದಾಗಿದ್ದಾರೆ. ಜೊತೆಗೆ ಆರ್‌ಆರ್‌ಎಸ್‌ ಈಗಾಗಲೇ ಅವರನ್ನು ಸಂಘದ ಎಲ್ಲಾ ಹುದ್ದೆಯಿಂದ ಮುಕ್ತಿಗೊಳಿಸಿದೆ ಹಾಗೂ ಬಿಜೆಪಿ, ಆರ್‌ಎಸ್‌ಎಸ್‌ ಎರಡೂ ನರೇಂದ್ರ ಅವರಿಗೆ ಕ್ಷೇತ್ರದಲ್ಲಿ ಓಡಾಡುವಂತೆ ಸೂಚಿಸಿದೆ.

ಮೂಡಿಗೆರೆಯಲ್ಲಿ ಮೂರು ಬಾರಿ ಶಾಸಕರಾಗಿರುವ ಎಂ.ಪಿ.ಕುಮಾರಸ್ವಾಮಿ ಹಾಲಿ ಶಾಸಕರಾಗಿದ್ದಾರೆ. ಆದರೂ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕಲು ಮುಂದಾಗಿದೆ. ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಪಕ್ಷದೊಳಗೆ ತೀವ್ರ ವಿರೋಧ ಇರುವುದರಿಂದ ಬಿಜೆಪಿ ಗುಜರಾತ್ ಮಾದರಿಯಲ್ಲಿ ಹೊಸ ಮುಖಕ್ಕೆ ಮಣೆ ಹಾಕಲು ಚಿಂತಿಸಿದೆ. ಗುಜರಾತ್ ಮಾದರಿ ಜಾರಿಯಾಗಿದ್ದೇ ಆದಲ್ಲಿ ಕುಮಾರಸ್ವಾಮಿಗೆ ಟಿಕೆಟ್ ಕೈ ತಪ್ಪುವುದು ಗ್ಯಾರಂಟಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೂಡಿಗೆರೆಯಲ್ಲಿ ಹಾಲಿ ಐದಾರು ಜನ ಟಿಕೆಟ್‍ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಈ ಮಧ್ಯೆ ನರೇಂದ್ರ ಹೆಸರು ಅಚ್ಚರಿ ಎಂಬಂತೆ ಹೊರಬಿದ್ದಿದೆ.

ಈ ಹಿಂದೆ ಕೂಡ ಹಲವು ಬಾರಿ ಕುಮಾರಸ್ವಾಮಿ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದರು. ಇದರೊಂದಿಗೆ ಕಾಂಗ್ರೆಸ್-ಜೆಡಿಎಸ್ ಸೇರುತ್ತಾರೆಂಬ ಊಹಾಪೋಹಗಳು ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಯಾಗಿದ್ದವು. ಕ್ಷೇತ್ರದಲ್ಲಿ ಬಿಜೆಪಿಗರೇ ಶಾಸಕ ಕುಮಾರಸ್ವಾಮಿಯನ್ನು ಒಪ್ಪಲು ಸುತಾರಾಂ ಸಿದ್ಧರಿಲ್ಲ. ಹಾಗಾಗಿ ಮೀಸಲು ಕ್ಷೇತ್ರ ಹಾಗೂ ಹಿಂದುತ್ವದ ಬೆಲ್ಟ್ ಆಗಿರುವ ಮಲೆನಾಡಲ್ಲಿ ಗೆಲ್ಲುವ ಕುದುರೆಗೆ ಬಿಜೆಪಿ ಮಣೆ ಹಾಕಲು ಮುಂದಾಗಿದೆ.

ಹಲವು ದಶಕಗಳಿಂದ ಸಂಘದ ಕಾರ್ಯಕರ್ತರಾಗಿರುವ ನರೇಂದ್ರ ಅವರನ್ನು ಬಿಜೆಪಿ ಕಣಕ್ಕಿಳಿಸಲು ಎಲ್ಲಾ ಸಿದ್ಧತೆ ನಡೆಸಿದೆ. ಟಿಕೆಟ್ ಘೋಷಣೆಯಾದ ಕೂಡಲೇ ನರೇಂದ್ರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಆದರೆ ದೀಪಕ್ ದೊಡ್ಡಯ್ಯ, ವಿಜಯ್‍ಕುಮಾರ್ ಹಾಗೂ ವಿಭಾ ಸುಷ್ಮಾ ಟಿಕೆಟ್‍ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಸಂಘವೇ ನರೇಂದ್ರ ಅವರಿಗೆ ಕ್ಷೇತ್ರದಲ್ಲಿ ಓಡಾಡಲು ಸೂಚಿಸಿರುವುದರಿಂದ ಉಳಿದವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ನರೇಂದ್ರ ಅವರಿಗೆ ಟಿಕೆಟ್ ಬಹುತೇಕ ಟಿಕೆಟ್ ಖಚಿತವೆನ್ನಲಾಗಿದ್ದು, ಘೋಷಣೆಯೊಂದೇ ಭಾಕಿ ಇದೆ.

Leave A Reply

Your email address will not be published.