ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್: ಸಹ ಉಸ್ತುವಾರಿಯಾಗಿ ಅಣ್ಣಾಮಲೈ ನೇಮಕ!
ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಸಹ ಉಸ್ತುವಾರಿ ಆಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಆಯ್ಕೆ ಮಾಡಿ ಸುತ್ತೋಲೆ ಹೊರಡಿಸಿದ್ದಾರೆ. ಈ ಮೂಲಕ ಚುನಾವಣಾ ಪ್ರಚಾರ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಂತದಾಗಿದೆ
ಚುನಾವಣೆ ಸಮಯದಲ್ಲಿ ರಾಷ್ಟ್ರೀಯ ಪಕ್ಷಗಳು, ಯಾವ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ ಅಲ್ಲೆಲ್ಲಾ ತಮ್ಮ ಪಕ್ಷದ ಪ್ರಭಾವಿ ನಾಯಕರುಗಳನ್ನು ರಾಜ್ಯ ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಕ ಮಾಡುವ ಸಂಪ್ರದಾಯಗಳನ್ನು ಬೆಳೆಸಿಕೊಂಡಿವೆ. ಬಿಜೆಪಿಯಂತೂ ಇಂತಹ ವಿಚಾರಗಳಲ್ಲಿ ಸದಾ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ಗೆಲುವಿನ ಮಾರ್ಗವನ್ನು ನೋಡುತ್ತಿರುತ್ತದೆ. ಆದರೆ ಈ ಭಾರಿ ಚುನಾವಣೆ ಹತ್ತಿರವಾದರೂ ಯಾವ ಪಕ್ಷಕ್ಕೂ ರಾಜ್ಯ ಉಸ್ತುವಾರಿಗಳನ್ನು, ಆಯಾ ಪಕ್ಷದ ಹೈ ಕಮಾಂಡ್ ನೇಮಕ ಮಾಡಿರಲಿಲ್ಲ. ಇದು ಜನರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಸದ್ಯ ಬಿಜೆಪಿ ಪಾರ್ಟಿ ಇದೀಗ ಆ ಕುತೂಹಲವನ್ನು ತಣಿಸಿದೆ.
ಅಲ್ಲದೆ ಬಿಜೆಪಿಯು ನೇಮಕ ಮಾಡಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಇದಕ್ಕೂ ಮೊದಲು ಕರ್ನಾಟಕ ರಾಜ್ಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದು ರಾಜ್ಯ ರಾಜಕಾರಣದ ಮೇಲೆ ಹಿಡಿತ ಹೊಂದಿದ್ದಾರೆ. ಜೊತೆಗೆ ರಾಜ್ಯದ ನಾಯಕರು, ಸಂಘಟನೆ, ರಾಜ್ಯದ ರಾಜಕೀಯ ಚಿತ್ರಣದ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದ್ದಾರೆ. ಅಲ್ಲದೆ
ಅವರು ಇಂತಹ ಉಸ್ತುವಾರಿ ವಿಚಾರಗಳಲ್ಲಿ ಚಾಣಕ್ಯ ಎಂದೇ ಹೇಳಬಹುದು. ಯಾಕೆಂದರೆ ಪ್ರಮುಖ ಒಬಿಸಿ ನಾಯಕರಾದ ಪ್ರಧಾನ್ ಅವರು ಈ ಹಿಂದೆ ಬಿಹಾರ ಹಾಗೂ ಉತ್ತರ ಪ್ರದೇಶದ ಚುನಾವಣಾ ಜವಾಬ್ದಾರಿಗಳನ್ನು ನಿರ್ವಹಿಸಿ ಅಲ್ಲೆಲ್ಲ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಜೊತೆಗೆ ಸಹ ಉಸ್ತುವಾರಿ ಆಗಿ ನೇಮಕ ಆಗಿರು ಅಣ್ಣಾಮಲೈ ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿದವರು. ಸದ್ಯ ಮ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಅಣ್ಣಾಮಲೈ ಕರ್ನಾಟಕದಲ್ಲಿ ಪೋಲೀಸ್ ಅಧಿಕಾರಿಯಾಗಿದ್ದಾಗ ಖಡಕ್ ಆಫಿಸರ್ ಆಗಿ ಗಮನ ಸೆಳೆದಿದ್ದು, ತಮ್ಮದೇ ಆದ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಹೀಗಾಗಿ ಅವರು ಕರ್ನಾಟಕಕ್ಕೆ ಚಿರಪರಿಚಿತರು, ಅಲ್ಲದೆ ತಮಿಳು ಭಾಷಿಕರ ಸೆಳೆಯಲು ಪೂರಕವಾಗಿ ಅಣ್ಣಾಮಲೈಗೆ ಸಹ ಪ್ರಭಾರಿ ಸ್ಥಾನ ನೀಡಲಾಗಿದೆ ಎನ್ನಲಾಗಿದೆ. ಈ ವಿಚಾರವನ್ನೇ ಇಟ್ಟುಕೊಂಡು ಮುಂದಿನ ವಿಧಾನಸಭಾ ಚುನಾವಣೆಗೆ ಈ ಇಬ್ಬರ ನೇತೃತ್ವದಲ್ಲಿ ಬಿಜೆಪಿ ಕಾರ್ಯತಂತ್ರ ರೂಪಿಸಬಹುದು ಎಂದು ಹೇಳಲಾಗುತ್ತಿದೆ.
ರಾಜ್ಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಭರ್ಜರಿ ತಾಲೀಮು ಆರಂಭಿಸಿರುವ ರಾಜ್ಯ ಬಿಜೆಪಿ ನಾಯಕರು ಟಿಕೆಟ್ ಹಂಚಿಕೆ ವಿಚಾರದಲ್ಲಿ ನಾಲ್ಕು ಸ್ತರದ ಆಯ್ಕೆ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಈ ಕುರಿತು ರಾಜ್ಯದ ಕೋರ್ ಕಮಿಟಿ ಮಹತ್ವದ ನಿರ್ಧಾರ ಕೈಗೊಂಡಿದೆ. ಅಲ್ಲದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ನಿರ್ಧಾರ ಕೈಗೊಂಡಿದೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯದ ಮಾನದಂಡದ ಪ್ರಸ್ತಾಪವಾಯಿತು. ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಅಂತಿಮವಾಗಿ ಅಭ್ಯರ್ಥಿಗಳ ಆಯ್ಕೆಗೆ ನಾಲ್ಕು ಸ್ತರದ ಪ್ರಕ್ರಿಯೆ ನಿಗದಿಪಡಿಸಲಾಯಿತು.
ಚುನಾವಣೆಗೆ ದಿನಗಣನೆ ಆರಂಭವಾದರೂ ಯಾವುದೇ ಪಕ್ಷಗಳು ಇನ್ನೂ ಕೂಡ ತಮ್ಮ ಕ್ಷೇತ್ರವಾರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿಲ್ಲ. ಪಕ್ಷಗಳ ಈ ನಡೆ ಇನ್ನೂ ಕುತೂಹಲವಾಗಿಯೇ ಉಳಿದಿದೆ. ಇದರೊಂದಿಗೆ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಮೂರೂ ಪಕ್ಷಗಳು ಅಬ್ಬರದ ಪ್ರಚಾರ ಗೈಗೊಳ್ಳುತ್ತಿವೆ. ಕಾಂಗ್ರೆಸ್ ಪ್ರಜಾಧ್ವನಿಯ ಮೂಲಕ ರಾಜ್ಯ ಸಂಚಾರ ಕೈಗೊಂಡರೆ, ಬಿಜೆಪಿ ಜನ ಸಂಕಲ್ಪ ಯಾತ್ರೆ, ಜೆಡಿಎಸ್ ಪಂಚರತ್ನ ಯಾತ್ರೆಗಳ ಮೂಲಕ ರಾಜ್ಯಾದ್ಯಂತ ಸಂಚಾರ ಮಾಡಿ ಪ್ರಚಾರ ನಡೆಸುತ್ತಿವೆ.